ಬೆಂಗಳೂರು: ರಾಜ್ಯದ ವಿದ್ಯಾರ್ಥಿ ಸಮೂಹಕ್ಕೆ ಸಾರಿಗೆ ಇಲಾಖೆಯು ಬಹುದೊಡ್ಡ ಸೌಲಭ್ಯವನ್ನು ಕಲ್ಪಿಸಿದೆ. 2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ಬಸ್ ಪಾಸ್ ವಿತರಿಸುವ ಮಹತ್ವದ ಪ್ರಕ್ರಿಯೆಗೆ ಇಂದು (ಜೂನ್ 12) ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ರಾಜ್ಯದ ಪ್ರಮುಖ ನಾಲ್ಕು ಸಾರಿಗೆ ಸಂಸ್ಥೆಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಈ ಆದೇಶ ಅನ್ವಯವಾಗಲಿದೆ.
ಈ ಬಾರಿಯ ನಿಯಮಗಳು ಏನೇನು?
ಇಂದಿನಿಂದಲೇ ವಿತರಣೆ: ಜೂನ್ 12 ರಿಂದಲೇ ರಾಜ್ಯಾದ್ಯಂತ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪಾಸ್‌ಗಳನ್ನು ನೀಡಲು ಸಾರಿಗೆ ನಿಗಮಗಳು ಕ್ರಮ ಕೈಗೊಂಡಿವೆ.
ಆನ್‌ಲೈನ್ ಅರ್ಜಿ ಸಲ್ಲಿಕೆ: ವಿದ್ಯಾರ್ಥಿಗಳು ಉಚಿತ ಪಾಸ್ ಪಡೆಯಲು ಸರ್ಕಾರದ ಅಧಿಕೃತ ಸೇವಾಸಿಂಧು ಪೋರ್ಟಲ್ ಪೋರ್ಟಲ್‌ನ ಲಿಂಕ್ (https://sevasindhuservices.karnataka.gov.in/buspassservices/) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಹಳೆ ನಿಯಮಗಳೇ ಮಾನದಂಡ: ಪಾಸ್ ಪಡೆಯಲು ಇರುವ ಶೈಕ್ಷಣಿಕ ಅರ್ಹತೆಗಳು, ನಿಗದಿತ ದೂರದ ಮಿತಿ ಮತ್ತು ಪಾಸ್‌ಗಳ ಕಾಲಾವಧಿಯ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಗಡಿಭಾಗದ ವಿದ್ಯಾರ್ಥಿಗಳಿಗೂ ಆಸರೆ: ಕರ್ನಾಟಕದ ಗಡಿಭಾಗದಲ್ಲಿ ವಾಸವಿದ್ದು ನೆರೆಯ ರಾಜ್ಯಗಳ ಸಂಸ್ಥೆಗಳಲ್ಲಿ ಓದುತ್ತಿರುವ ಅಥವಾ ನೆರೆ ರಾಜ್ಯಗಳಲ್ಲಿದ್ದು ಕರ್ನಾಟಕದ ಕಾಲೇಜುಗಳಿಗೆ ಬರುತ್ತಿರುವ ವಿದ್ಯಾರ್ಥಿಗಳಿಗೂ ಈ ಉಚಿತ ಸೌಲಭ್ಯ ಸಿಗಲಿದೆ.
ಮಾಹಿತಿಗಾಗಿ ಸಹಾಯ ಕೇಂದ್ರ: ವಿದ್ಯಾರ್ಥಿಗಳ ನೆರವಿಗಾಗಿ ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ 123 ವಿಶೇಷ ಕೌಂಟರ್‌ಗಳನ್ನು ಸ್ಥಾಪಿಸಲಾಗಿದ್ದು, ಹೆಚ್ಚಿನ ಮಾಹಿತಿಯನ್ನು ನಿಗಮದ ವೆಬ್‌ಸೈಟ್ (https://ksrtc.karnataka.gov.in/student pass) ಮೂಲಕ ಚೆಕ್ ಮಾಡಬಹುದು.
ಪಾವತಿಸಿದ್ದ ಹಣ ವಾಪಸ್!
ಚಾಲ್ತಿ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ ಸಾರಿಗೆ ಸಂಸ್ಥೆಗಳಿಗೆ ಹಣ ಪಾವತಿಸಿ ಬಸ್ ಪಾಸ್ ಪಡೆದುಕೊಂಡಿರುವ ವಿದ್ಯಾರ್ಥಿಗಳಿಗೆ ನಿಗಮವು ಸಂಪೂರ್ಣ ಮೊತ್ತವನ್ನು ಮರುಪಾವತಿ ಮಾಡುವುದಾಗಿ ಘೋಷಿಸಿದೆ. ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಈ ಹಣ ವಿದ್ಯಾರ್ಥಿಗಳ ಕೈ ಸೇರಲಿದ್ದು, ರೀಫಂಡ್ ಪ್ರಕ್ರಿಯೆಯ ಸಂಪೂರ್ಣ ವಿವರಗಳ ಕುರಿತು ಸಾರಿಗೆ ಇಲಾಖೆಯು ಶೀಘ್ರದಲ್ಲೇ ಪ್ರತ್ಯೇಕ ಪ್ರಕಟಣೆ ಬಿಡುಗಡೆ ಮಾಡಲಿದೆ.

