Sat. Aug 8th, 2026

ಜಲಮಂಡಳಿ ಸಿಬ್ಬಂದಿಗೆ ಬಂಪರ್ ಕೊಡುಗೆ: ವಿಶೇಷ ಸ್ಥಳೀಯ ಭತ್ಯೆ ಪರಿಷ್ಕರಣೆ, ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ!

Share this with Friends

ಬೆಂಗಳೂರು: ಬೆಂಗಳೂರು ನಗರದಾದ್ಯಂತ ಸಾರ್ವಜನಿಕರಿಗೆ ನಿರಂತರ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ನಿರ್ವಹಣೆಯಲ್ಲಿ ತೊಡಗಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನೌಕರರಿಗೆ ಪ್ರಮುಖ ಆರ್ಥಿಕ ಸೌಲಭ್ಯಗಳನ್ನು ಒದಗಿಸಲು ಆಡಳಿತ ಮಂಡಳಿ ಮುಂದಾಗಿದೆ. ವಿಶೇಷವಾಗಿ ಬೆಂಗಳೂರು ನಗರದ ಹೊರವಲಯದ (Outer Areas) ಕಠಿಣ ಪರಿಸ್ಥಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಲಮಂಡಳಿ ನೌಕರರ ‘ವಿಶೇಷ ಸ್ಥಳೀಯ ಭತ್ಯೆ’ (Special Local Allowance) ಪರಿಷ್ಕರಣೆ ಹಾಗೂ ಮಂಡಳಿಯಲ್ಲಿ ದೀರ್ಘಕಾಲದಿಂದ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಶೀಘ್ರದಲ್ಲೇ ಅಧಿಕೃತ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ಎನ್. ಮಂಜುಳ ಭರವಸೆ ನೀಡಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘ ಹಾಗೂ ‘ದಿ ಬೆಂಗಳೂರು ವಾಟರ್ ಸಪ್ಲೈ ಅಂಡ್ ಸವರೇಜ್ ಬೋರ್ಡ್ ಸ್ಯಾನಿಟರಿ ವರ್ಕರ್ಸ್ ಯೂನಿಯನ್’ ಜಂಟಿಯಾಗಿ ಹಮ್ಮಿಕೊಂಡಿದ್ದ ಮಹತ್ವದ “ವೇತನ ಪರಿಷ್ಕರಣೆ ಒಪ್ಪಂದ” ಅನುಷ್ಠಾನದ ಸೃತಜ್ಞತಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಈ ಮಹತ್ವದ ಪ್ರಕಟಣೆ ಹೊರಡಿಸಿದರು.

2023ರ ಜುಲೈನಿಂದಲೇ ಪೂರ್ವಾನ್ವಯ: ವೇತನ ಪರಿಷ್ಕರಣೆ ಜಾರಿ

ನೌಕರರ ಸುದೀರ್ಘ ದಿನಗಳ ಬೇಡಿಕೆಯಾಗಿದ್ದ ವೇತನ ಪರಿಷ್ಕರಣೆಯನ್ನು 2023ರ ಜುಲೈ 1ರಿಂದಲೇ ಜಾರಿಗೆ ಬರುವಂತೆ ಪೂರ್ವಾನ್ವಯವಾಗಿ (Retrospective effect) ಅನುಷ್ಠಾನಗೊಳಿಸಲಾಗಿದೆ. ಇದು ಜಲಮಂಡಳಿಯ ಇತಿಹಾಸದಲ್ಲಿ ನೌಕರರ ಆರ್ಥಿಕ ಭದ್ರತೆ ಮತ್ತು ಕಲ್ಯಾಣದ ನಿಟ್ಟಿನಲ್ಲಿ ಇಟ್ಟ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಈ ಐತಿಹಾಸಿಕ ವೇತನ ಪರಿಷ್ಕರಣೆ ಒಪ್ಪಂದಕ್ಕೆ ಮುದ್ರೆ ಒತ್ತಲು ಹಾಗೂ ಆಡಳಿತಾತ್ಮಕ ಅನುಮೋದನೆ ನೀಡಲು ಸಂಪೂರ್ಣ ಸಹಕಾರ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಜಲಮಂಡಳಿ ಅಧ್ಯಕ್ಷರು ಇಡೀ ಮಂಡಳಿಯ ಪರವಾಗಿ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದರು.

ನೌಕರರ ಶ್ರಮವೇ ಜಲಮಂಡಳಿಯ ಅಡಿಪಾಯ

ಕಾರ್ಯಕ್ರಮದಲ್ಲಿ ನೌಕರರನ್ನು ಉದ್ದೇಶಿಸಿ ಮಾತನಾಡಿದ ಡಾ. ಎನ್. ಮಂಜುಳ, “ಬೆಂಗಳೂರಿನಂತಹ ಬೃಹತ್ ಮಹಾನಗರಕ್ಕೆ ಕುಡಿಯುವ ನೀರು ಒದಗಿಸುವುದು ಸಾಮಾನ್ಯದ ಮಾತಲ್ಲ. ದಿನದ 24 ಗಂಟೆಯೂ ಶ್ರಮಿಸುವ ನಮ್ಮ ಸ್ಯಾನಿಟರಿ ಕಾರ್ಮಿಕರು ಹಾಗೂ ತಾಂತ್ರಿಕ ಸಿಬ್ಬಂದಿಯ ಕಠಿಣ ಪರಿಶ್ರಮ ಮತ್ತು ಬದ್ಧತೆಯೇ ಜಲಮಂಡಳಿಯ ನಿಜವಾದ ಶಕ್ತಿಯಾಗಿದೆ. ನೌಕರರ ಆರ್ಥಿಕ ಹಿತರಕ್ಷಣೆಗೆ ಮಂಡಳಿ ಸದಾ ಬದ್ಧವಾಗಿದೆ. ಇದಕ್ಕೆ ಪ್ರತಿಯಾಗಿ ನೌಕರರು ಕೂಡ ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಿ, ಇನ್ನಷ್ಟು ಸಮರ್ಪಣಾ ಮನೋಭಾವದಿಂದ ಗುಣಮಟ್ಟದ ಸೇವೆಯನ್ನು ಒದಗಿಸಬೇಕು” ಎಂದು ಕರೆ ನೀಡಿದರು.

ಖಾಲಿ ಹುದ್ದೆಗಳ ಭರ್ತಿಗೆ ಚಾಲನೆ

ನಗರದ ವಿಸ್ತರಣೆಗೆ ತಕ್ಕಂತೆ ಜಲಮಂಡಳಿಯ ಮೇಲಿನ ಕೆಲಸದ ಒತ್ತಡ ಹೆಚ್ಚಾಗುತ್ತಿದ್ದು, ಸಿಬ್ಬಂದಿ ಕೊರತೆಯನ್ನು ನೀಗಿಸಲು ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಅನುಮತಿ ಕೋರಲಾಗುವುದು. ಇದರಿಂದ ಸದ್ಯ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆಯಾಗಲಿದ್ದು, ಕಾರ್ಯಕ್ಷಮತೆ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಮಾರಂಭದಲ್ಲಿ ಜಲಮಂಡಳಿಯ ಮುಖ್ಯ ಇಂಜಿನಿಯರ್‌ಗಳು, ವಿವಿಧ ವಿಭಾಗಗಳ ಹಿರಿಯ ಆಡಳಿತಾಧಿಕಾರಿಗಳು, ನೌಕರರ ಸಂಘದ ಪದಾಧಿಕಾರಿಗಳು ಹಾಗೂ ನೂರಾರು ಸ್ಯಾನಿಟರಿ ಮತ್ತು ತಾಂತ್ರಿಕ ನೌಕರರು ಉಪಸ್ಥಿತರಿದ್ದು, ವೇತನ ಪರಿಷ್ಕರಣೆಯ ಸಂಭ್ರಮವನ್ನು ಹಂಚಿಕೊಂಡರು.

 

 


Share this with Friends

Related Post