ಬೆಂಗಳೂರು:ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಭಾರತೀಯ ಜನತಾ ಪಾರ್ಟಿ (BJP) ಹಾಗೂ ಜಾತ್ಯತೀತ ಜನತಾದಳ (JDS) ಪಕ್ಷಗಳು ಪರಸ್ಪರ ಸಮನ್ವಯದೊಂದಿಗೆ, ಒಟ್ಟಾಗಿ ಹೋರಾಟ ನಡೆಸಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಕಟಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಕೇಂದ್ರ ಸಚಿವರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಖುದ್ದಾಗಿ ಭೇಟಿ ಮಾಡಿದ ವಿಜಯೇಂದ್ರ, ರಾಜ್ಯದ ಪ್ರಚಲಿತ ರಾಜಕೀಯ ವಿದ್ಯಮಾನಗಳು ಹಾಗೂ ಮುಂಬರುವ ಮಹತ್ವದ ಚುನಾವಣೆಗಳ ಕುರಿತು ಸುದೀರ್ಘ ಆಲೋಚನೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂಬರುವ ಹಿರಿಯೂರು ಮತ್ತು ಧಾರವಾಡ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ನಾಲ್ಕು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆಗಳನ್ನು ಒಟ್ಟಾಗಿ ಎದುರಿಸುವ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.
ಉನ್ನತ ಮಟ್ಟದ ಸಮನ್ವಯ ಸಮಿತಿ ರಚನೆ
ಚುನಾವಣೆಗಳನ್ನು ಯಶಸ್ವಿಯಾಗಿ ಎದುರಿಸಲು ಮತ್ತು ಉಭಯ ಪಕ್ಷಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಮೂಡದಂತೆ ತಡೆಯಲು ಉನ್ನತ ಮಟ್ಟದ ‘ಸಮನ್ವಯ ಸಮಿತಿ’ಯನ್ನು ರಚಿಸಲು ತೀರ್ಮಾನಿಸಲಾಗಿದೆ.
ಸಮಿತಿಯ ಸದಸ್ಯರು: ಈ ಸಮಿತಿಯಲ್ಲಿ ಬಿಜೆಪಿ ಕಡೆಯಿಂದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇರಲಿದ್ದಾರೆ. ಜೆಡಿಎಸ್ ಪರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರು ಸೂಚಿಸುವ ಮತ್ತೊಬ್ಬ ನಾಯಕರು ಭಾಗಿಯಾಗಲಿದ್ದಾರೆ.
ಈ ಪ್ರಸ್ತಾವನೆಗೆ ಎಚ್.ಡಿ. ಕುಮಾರಸ್ವಾಮಿ ಅವರು ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದು, ಸಮಿತಿಯಲ್ಲಿ ಸದಸ್ಯರ ಸಂಖ್ಯೆ ಕನಿಷ್ಠ ಮಟ್ಟದಲ್ಲಿದ್ದರೆ ನಿರ್ಧಾರ ಕೈಗೊಳ್ಳಲು ಸುಲಭವಾಗುತ್ತದೆ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗ್ರವಾಲ್ ಅವರೊಂದಿಗೂ ಈ ಬಗ್ಗೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.
ಚುನಾವಣೆ ಮುಂದೂಡಿಕೆ ಮತ್ತು 80 ಸಾವಿರ ಕಡತಗಳ ವಿಲೇವಾರಿ ಬಾಕಿ ಆರೋಪ
ರಾಜ್ಯ ಸರ್ಕಾರಕ್ಕೆ ಚುನಾವಣೆಗಳನ್ನು ಎದುರಿಸುವ ಧೈರ್ಯವಿಲ್ಲ ಎಂದು ಆಕ್ಷೇಪಿಸಿದ ವಿಜಯೇಂದ್ರ, “ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಜಿಲ್ಲಾ ಪಂಚಾಯಿತಿ ಸೇರಿದಂತೆ ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಮನಸ್ಸು ಸರ್ಕಾರಕ್ಕೆ ಇಲ್ಲ. ಈಗ ಹೊಸದಾಗಿ ಎಸ್‌ಐಆರ್ (SIR) ಪ್ರಕ್ರಿಯೆಯನ್ನು ಮುಂದಿಟ್ಟುಕೊಂಡು ಜಿಬಿಎ ಚುನಾವಣೆಗಳನ್ನು ಮತ್ತಷ್ಟು ಮುಂದೂಡಲು ಸರ್ಕಾರ ವ್ಯವಸ್ಥಿತ ಸಂಚು ರೂಪಿಸುತ್ತಿದೆ. ಸಚಿವ ಸಂಪುಟ ವಿಸ್ತರಣೆ ಮಾಡುವ ಕನಿಷ್ಠ ಮಾನಸಿಕ ಸ್ಥಿತಿಯಲ್ಲೂ ಇಂದಿನ ಆಡಳಿತಾರೂಢ ನಾಯಕರು ಇಲ್ಲ” ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದಲ್ಲಿ ಸದ್ಯ ಸುಮಾರು 80,000ಕ್ಕೂ ಹೆಚ್ಚು ಕಡತಗಳು ವಿಲೇವಾರಿಯಾಗದೆ ಧೂಳು ಹಿಡಿಯುತ್ತಿರುವುದು ಆಡಳಿತ ಸಂಪೂರ್ಣವಾಗಿ ಹಳ್ಳ ಹಿಡಿದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ವಿಜಯೇಂದ್ರ ಆಪಾದಿಸಿದರು. “ಮುಖ್ಯಮಂತ್ರಿಗಳು ಸದ್ಯ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಅವರು ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಪೂರೈಸಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಕಳೆದ ಮೂರು ವರ್ಷಗಳ ವೈಫಲ್ಯಗಳನ್ನು ಸರಿಪಡಿಸಿಕೊಳ್ಳಲಿ. ಬಡವರ ಹಾಗೂ ಅನ್ನದಾತರ ಕಲ್ಯಾಣಕ್ಕಾಗಿ ಜವಾಬ್ದಾರಿಯುತ ಆಡಳಿತ ನಡೆಸಲಿ” ಎಂದು ಅವರು ಸಲಹೆ ನೀಡಿದರು.
ಬೀದಿಬದಿ ವ್ಯಾಪಾರಿಗಳ ಹಿತರಕ್ಷಣೆಗೆ ಆಗ್ರಹ
ಬೆಂಗಳೂರಿನಲ್ಲಿ ನಡೆಯುತ್ತಿರುವ ಇತ್ತೀಚಿನ ತೆರವು ಕಾರ್ಯಾಚರಣೆಗಳ ಕುರಿತು ಮಾತನಾಡಿದ ಅವರು, ಬಡ ಬೀದಿಬದಿ ವ್ಯಾಪಾರಿಗಳು ಸಮಾಜದ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆ ನೀಡುತ್ತಾರೆ. ಅಂತಹ ಬಡವರನ್ನು ಯಾವುದೇ ಪೂರ್ವಸಿದ್ಧತೆ ಇಲ್ಲದೆ ಏಕಾಏಕಿ ಎತ್ತಂಗಡಿ ಮಾಡುವುದು ಸರಿಯಲ್ಲ. ಅವರಿಗೆ ಮೊದಲು ಪರ್ಯಾಯ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಬಡವರ ಹಿತಾಸಕ್ತಿ ಕಾಯುವ ಕನಿಷ್ಠ ಜವಾಬ್ದಾರಿಯನ್ನಾದರೂ ಸರ್ಕಾರ ನಿಭಾಯಿಸಬೇಕು ಎಂದು ಒತ್ತಾಯಿಸಿದರು.
ಪಿಆರ್‍ಸಿ ವಿರುದ್ಧ ಹೋರಾಟ ಮತ್ತು ಜನಜಾಗೃತಿ
ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಶಾಶ್ವತ ನಿವಾಸಿ ಪ್ರಮಾಣಪತ್ರ’ (PRC) ವಿಷಯದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, “ಅಕ್ರಮ ವಲಸಿಗರಿಗೆ ರಕ್ಷಣೆ ನೀಡಲು ಮತ್ತು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡಲು ಈ ಕುತಂತ್ರದ ಷಡ್ಯಂತ್ರವನ್ನು ರೂಪಿಸಲಾಗಿದೆ. ಇದು ದೇಶದ ಆಂತರಿಕ ಭದ್ರತೆಗೆ ತೀವ್ರ ಧಕ್ಕೆ ತರಲಿದೆ. ಈ ಅಪಾಯಕಾರಿ ನಿರ್ಧಾರವನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು. ಈ ಪ್ರಮಾಣಪತ್ರದ ವಿರುದ್ಧ ಬಿಜೆಪಿ ತೀವ್ರ ವಿರೋಧ ದಾಖಲಿಸಲಿದ್ದು, ಮುಂಬರುವ ದಿನಗಳಲ್ಲಿ ಇಡೀ ರಾಜ್ಯಾದ್ಯಂತ ಜನರ ಮನದಟ್ಟು ಮಾಡಲು ಬೃಹತ್ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

