ಬೆಂಗಳೂರು:ರಾಜಧಾನಿಯ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತೊಂದು ಮಹತ್ವದ ಹಾಗೂ ಕಟ್ಟುನಿಟ್ಟಿನ ಹೆಜ್ಜೆ ಇಟ್ಟಿದೆ. ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ 5 ನಗರ ಪಾಲಿಕೆಗಳಲ್ಲಿ ವರ್ಷಗಟ್ಟಲೆಯಿಂದ ಧೂಳು ಹಿಡಿದು ಬಿದ್ದಿರುವ, ವಾರಸುದಾರರಿಲ್ಲದ ಅನಾಥ ವಾಹನಗಳನ್ನು ರಸ್ತೆ ಬದಿಯಿಂದ ಮುಟ್ಟುಗೋಲು ಹಾಕಿಕೊಳ್ಳುವ ವಿಶೇಷ ಜಂಟಿ ಕಾರ್ಯಾಚರಣೆ ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದೆ.
ನಗರದ ಕ್ವೀನ್ಸ್ ರಸ್ತೆಯ ಶಿಫಾ ಆಸ್ಪತ್ರೆ ಸಮೀಪ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಅನಾಥ ವಾಹನಗಳನ್ನು ಕ್ರೇನ್‌ಗಳ ಮೂಲಕ ತೆರವುಗೊಳಿಸುವ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದರು.
ರಸ್ತೆ ಬದಿಯ ಅಡೆತಡೆಗಳಿಗೆ ಮುಕ್ತಿ:
ಬೆಂಗಳೂರಿನಲ್ಲಿ ಇತ್ತೀಚೆಗೆ ಆರಂಭವಾಗಿರುವ ವ್ಯಾಪಕ ಫುಟ್‌ಪಾತ್ ಒತ್ತುವರಿ ತೆರವು ಅಭಿಯಾನದ ಮುಂದುವರಿದ ಭಾಗವಾಗಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಬದಿಗಳಲ್ಲಿ ಹಾಗೂ ಪಾದಚಾರಿ ಮಾರ್ಗಗಳ ಮೇಲೆ ದೀರ್ಘಕಾಲದಿಂದ ಮಾಲೀಕರಿಲ್ಲದೆ ಬಿಟ್ಟು ಹೋಗಿರುವ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳು ನಗರದ ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗಿದ್ದವು. ಇದರ ಜೊತೆಗೆ ಇಂತಹ ಹಳೆಯ ವಾಹನಗಳ ಕೆಳಗೆ ಕಸ ಕಡ್ಡಿಗಳು ಶೇಖರಣೆಯಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಇತ್ತು. ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡಲು ಜಿಬಿಎ ಮತ್ತು ಸಂಚಾರ ಪೊಲೀಸ್ ಇಲಾಖೆ ಜಂಟಿಯಾಗಿ ಈ ಬೃಹತ್ ಆಪರೇಷನ್ ಹಮ್ಮಿಕೊಂಡಿದೆ.
ಈ ಮಹತ್ವದ ಸಂದರ್ಭದಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಿಜ್ವಾನ್ ಹರ್ಷದ್, ಸಂಚಾರ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತಿಕ್ ರೆಡ್ಡಿ, ಕೇಂದ್ರ ನಗರ ಪಾಲಿಕೆಯ ಅಪರ ಆಯುಕ್ತರಾದ ವೆಂಕಟಾ ಚಲಪತಿ ಸೇರಿದಂತೆ ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದು, ಕಾರ್ಯಾಚರಣೆಯ ರೂಪುರೇಷೆಗಳನ್ನು ಪರಿಶೀಲಿಸಿದರು.
ನೋಟಿಸ್ ನೀಡಿದರೂ ಬಾರದಿದ್ದರೆ ಬಹಿರಂಗ ಹರಾಜು!
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಬೆಂಗಳೂರಿನ ಸೌಂದರ್ಯೀಕರಣ ಮತ್ತು ಸುಗಮ ಸಂಚಾರಕ್ಕೆ ಧೂಳು ಹಿಡಿದು ಅನಾಥವಾಗಿ ಬಿದ್ದಿರುವ ವಾಹನಗಳು ದೊಡ್ಡ ಕಂಕಟವಾಗಿ ಪರಿಣಮಿಸಿದ್ದವು. ಮೊದಲ ಹಂತದಲ್ಲಿ ಇಂತಹ ವಾಹನಗಳನ್ನು ಗುರುತಿಸಿ, ಅವುಗಳ ಮಾಲೀಕರಿಗೆ ನಿಗದಿತ ಅವಧಿಯೊಳಗೆ ತೆರವುಗೊಳಿಸುವಂತೆ ನೋಟಿಸ್ ನೀಡಲಾಗುತ್ತದೆ. ಒಂದು ವೇಳೆ ಯಾರೂ ವಾರಸುದಾರರು ಬಾರದಿದ್ದರೆ ಅಥವಾ ನಿರ್ಲಕ್ಷ್ಯ ವಹಿಸಿದರೆ, ಆ ಎಲ್ಲಾ ವಾಹನಗಳನ್ನು ಸರ್ಕಾರವೇ ಮುಟ್ಟುಗೋಲು ಹಾಕಿಕೊಂಡು ಕಾನೂನು ನಿಯಮಗಳ ಅನ್ವಯ ಬಹಿರಂಗ ಹರಾಜು ಹಾಕಲಿದೆ” ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಈ ವಿಶೇಷ ಕಾರ್ಯಾಚರಣೆಯು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿರದೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವ ಎಲ್ಲಾ 5 ನಗರ ಪಾಲಿಕೆಗಳ ಪ್ರಮುಖ ವಾಣಿಜ್ಯ ರಸ್ತೆಗಳು ಹಾಗೂ ಜನನಿಬಿಡ ವಲಯಗಳಲ್ಲಿ ನಿರಂತರವಾಗಿ ಮುಂದುವರಿಯಲಿದೆ. ಸಾರ್ವಜನಿಕರು ಕೂಡ ತಮ್ಮ ಸುತ್ತಮುತ್ತ ಇಂತಹ ಅನಾಥ ವಾಹನಗಳು ಕಂಡುಬಂದರೆ ಪ್ರಾಧಿಕಾರದ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

