ಬೆಂಗಳೂರು:ಕರ್ನಾಟಕ ಕಾಂಗ್ರೆಸ್ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ‘ಶಾಶ್ವತ ನಿವಾಸಿ ಪ್ರಮಾಣಪತ್ರ’ (PRC) ನಿಯಮದ ಹಿಂದೆ ದೊಡ್ಡ ಮತಬ್ಯಾಂಕ್ ರಾಜಕಾರಣದ ಷಡ್ಯಂತ್ರ ಅಡಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ಮಾಧ್ಯಮ ಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶದ ಸುರಿಮಳೆಗರೆದ ಅವರು, ಈ ಹೊಸ ಮಾರ್ಗಸೂಚಿಯ ಹಿಂದಿರುವ ಸರ್ಕಾರದ ಅಸಲಿ ಉದ್ದೇಶವೇನು ಎಂಬುದನ್ನು ತಕ್ಷಣವೇ ಬಹಿರಂಗಪಡಿಸಬೇಕು ಎಂದು ಕಟ್ಟುನಿಟ್ಟಾಗಿ ಆಗ್ರಹಿಸಿದರು.
ಒಂದು ದೇಶ ಒಂದು ಪೌರತ್ವ ಉಲ್ಲಂಘನೆ: ಭಾರತೀಯ ಸಂವಿಧಾನದ ವಿಧಿ 14ರ ಅಡಿಯಲ್ಲಿ ದೇಶದಲ್ಲಿ ‘ಒಂದು ದೇಶ ಒಂದು ಪೌರತ್ವ’ ನಿಯಮ ಜಾರಿಯಲ್ಲಿದೆ. ನಾಗರಿಕರಿಗೆ ಪೌರತ್ವ ನೀಡುವ ಅಥವಾ ವಲಸಿಗರನ್ನು ಗುರುತಿಸುವ ಸಂಪೂರ್ಣ ಅಧಿಕಾರ ಇರುವುದು ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ. ಅದಕ್ಕೆ ವ್ಯತಿರಿಕ್ತವಾಗಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ವಿದೇಶಾಂಗ ಇಲಾಖೆಯ ನಿರ್ಲಕ್ಷ್ಯ: ಇಂತಹ ಸೂಕ್ಷ್ಮ ಪ್ರಮಾಣಪತ್ರಗಳನ್ನು ವಿತರಿಸುವ ಮುನ್ನ ಕೇಂದ್ರ ವಿದೇಶಾಂಗ ಸಚಿವಾಲಯದ ಅನುಮತಿ ಮತ್ತು ಅವಲೋಕನ ಅತ್ಯಗತ್ಯ. ಆದರೆ ರಾಜ್ಯ ಸರ್ಕಾರ ಯಾವುದೇ ನಿಯಮಗಳನ್ನು ಪಾಲಿಸದೆ ಎರಡು ದಿನಗಳ ಹಿಂದೆ ದಿಢೀರ್ ಮಾರ್ಗಸೂಚಿ ಪ್ರಕಟಿಸಿದೆ ಎಂದು ದೂರಿದರು.
ಅಕ್ರಮ ವಲಸಿಗರನ್ನು ವೋಟ್ ಬ್ಯಾಂಕ್ ಮಾಡಲು ಹುನ್ನಾರ?
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಹೊಸ ಹೊಸ ಕಾನೂನುಗಳ ಮೂಲಕ ದೇಶದ ಆಂತರಿಕ ಭದ್ರತೆಗೆ ಸವಾಲು ಹಾಕಲಾಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು. “ದೇಶಾದ್ಯಂತ ಎಸ್‍ಐಆರ್ (SIR) ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ, ಈಗ ಅಕ್ರಮ ವಲಸಿಗರನ್ನು ರಕ್ಷಿಸಲು ಈ ಹೊಸ ಹುನ್ನಾರ ನಡೆಸಲಾಗುತ್ತಿದೆ. ಕಂದಾಯ ಅಧಿಕಾರಿಗಳ ಮಟ್ಟದಲ್ಲೇ ಈ ಪ್ರಮಾಣಪತ್ರ ನೀಡಲು ಅವಕಾಶ ಕಲ್ಪಿಸಿರುವುದು ಆತಂಕಕಾರಿ ವಿಷಯ. ಇಷ್ಟು ವರ್ಷಗಳಿಂದ ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವ ವಲಸಿಗರಿಗೆ ಈಗ ರಾಜ್ಯದ ನಾಗರಿಕರ ಸ್ಥಾನಮಾನ ನೀಡಲು ಸರ್ಕಾರ ಮುಂದಾಗಿದೆ. ಈ ಪ್ರಮಾಣಪತ್ರ ಪಡೆದವರು ಸರ್ಕಾರದ ಎಲ್ಲಾ ಉಚಿತ ಯೋಜನೆಗಳು ಮತ್ತು ಸೌಲಭ್ಯಗಳನ್ನು ಪಡೆಯಲಿದ್ದಾರೆ. ಇದು ರಾಜ್ಯದ ನೈಜ ನಿವಾಸಿಗಳ ಹಕ್ಕನ್ನು ಕಸಿದುಕೊಂಡಂತೆ” ಎಂದು ಅವರು ದೂರಿದರು.
“ಬೇರೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ನಾವು ಈಗಾಗಲೇ ಪತ್ತೆ ಮಾಡಿದ್ದೇವೆ. ಈಗ ಅವರನ್ನು ಕಾನೂನುಬಾಹಿರವಾಗಿ ಮತದಾರರ ಪಟ್ಟಿಗೆ ಸೇರಿಸುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್ ಎಂದರೆ ‘ಮತಗಳ್ಳತನ’ (ವೋಟ್ ಚೋರಿ) ಎಂಬುದು ಮತ್ತೊಮ್ಮೆ ಸಾಬೀತಾಗಿದೆ” ಎಂದು ಕಿಡಿಕಾರಿದರು.
ಹಿಂದಿನ ಸಿಎಂ ಸಿದ್ದರಾಮಯ್ಯ ಅವರಿಗೂ ಇರದ ಧೈರ್ಯ, ಈಗ ಶಿವಕುಮಾರ್ ಅಹಂಕಾರ!
“ರಾಜ್ಯದ ಇತಿಹಾಸದಲ್ಲಿ ಹಿಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕೂಡ ಇಂತಹ ದೇಶವಿರೋಧಿ ನಿರ್ಧಾರ ಕೈಗೊಳ್ಳುವ ಧೈರ್ಯ ಮಾಡಿರಲಿಲ್ಲ. ಆದರೆ ಈಗಿನ ಸರ್ಕಾರವು ಅಹಂಕಾರದಿಂದ ವರ್ತಿಸುತ್ತಿದೆ. ‘ನಾನು ಏನು ಮಾಡಿದರೂ ನಡೆಯುತ್ತದೆ’ ಎಂಬ ದರ್ಪದೊಂದಿಗೆ ಡಿ.ಕೆ. ಶಿವಕುಮಾರ್ ಹಾಗೂ ರಾಹುಲ್ ಗಾಂಧಿ ಅವರು ಸಂವಿಧಾನಕ್ಕೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಕೇವಲ ಚುನಾವಣೆ ಮತ್ತು ಮತಗಳನ್ನು ಗಳಿಸಲು ದೇಶದ ಭದ್ರತೆಯೊಂದಿಗೆ ಆಟವಾಡುತ್ತಿರುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ” ಎಂದು ಅವರು ನೇರವಾಗಿ ಟೀಕಿಸಿದರು.
ಕೇಂದ್ರ ಗೃಹ ಸಚಿವರಿಗೆ ಪತ್ರ – ಗೃಹ ಇಲಾಖೆಯ ವೈಫಲ್ಯದ ವಿರುದ್ಧ ವಾಗ್ದಾಳಿ
ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಿವಾದಿತ ‘ಶಾಶ್ವತ ನಿವಾಸಿ ಪ್ರಮಾಣಪತ್ರ’ ನಿಯಮವನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ಅಕ್ರಮ ವಲಸಿಗರಿಂದ ರಾಜ್ಯದ ಜನಸಾಮಾನ್ಯರು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇಷ್ಟಾದರೂ ಎಚ್ಚೆತ್ತುಕೊಳ್ಳದ ಸರ್ಕಾರ ಕಾನೂನು ಉಲ್ಲಂಘಿಸಿ ಪಿಆರ್‍ಸಿ ನೀಡುವುದನ್ನು ಸ್ಥಗಿತಗೊಳಿಸಬೇಕು. ಇದರ ವಿರುದ್ಧ ಕಾನೂನಾತ್ಮಕವಾಗಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಎಚ್ಚರಿಸಿದರು.
ಇದೇ ವೇಳೆ ಗೃಹ ಇಲಾಖೆಯ ವೈಫಲ್ಯದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, “ಕರ್ನಾಟಕದಲ್ಲಿ ಗೃಹ ಇಲಾಖೆ ಎನ್ನುವುದು ಇದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇವಲ ‘ಆರೆಸ್ಸೆಸ್ ಸಚಿವರಾಗಿ’ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ದಿನನಿತ್ಯ ಕೊಲೆ, ಅತ್ಯಾಚಾರ, ರಸ್ತೆ ಬದಿಯ ಗಲಾಟೆಗಳು ಹಾಗೂ ಡ್ರಗ್ಸ್ ಮಾಫಿಯಾಗಳು ಅತಿರೇಕಕ್ಕೆ ಹೋಗಿದ್ದರೂ ಗೃಹ ಸಚಿವರು ಆ ಬಗ್ಗೆ ಒಂದು ದಿನವೂ ಗಂಭೀರವಾಗಿ ಮಾತನಾಡಿಲ್ಲ. ಅವರು ಕೇವಲ ಬೆಳಗ್ಗೆ ಎದ್ದ ತಕ್ಷಣ ಆರೆಸ್ಸೆಸ್ (RSS) ನಿಂದನೆ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಭ್ರಷ್ಟಾಚಾರ ಮತ್ತು ಅಧಿಕಾರಿಗಳ ಮೇಲೆ ಒತ್ತಡದ ಆರೋಪ
ಹಿಂದೆ ಕೇವಲ ಐವತ್ತು ರೂಪಾಯಿ ಲಂಚ ಪಡೆದು ಅನಧಿಕೃತವಾಗಿ ‘ಎನ್ಯೂಮರೇಷನ್ ಫಾರಂ’ಗಳನ್ನು ವಿತರಿಸಿದ ಇತಿಹಾಸ ಈ ವ್ಯವಸ್ಥೆಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂದೆ ಇದೇ ಅಧಿಕಾರಿಗಳು ಹಣ ಪಡೆದು ಅಕ್ರಮ ವಲಸಿಗರಿಗೆ ನಿವಾಸಿ ಪ್ರಮಾಣಪತ್ರಗಳನ್ನು ನೀಡುವುದನ್ನು ತಡೆಯಲು ಹೇಗೆ ಸಾಧ್ಯ ಎಂದು ಸಚಿವರು ಪ್ರಶ್ನಿಸಿದರು. ಪ್ರಸ್ತುತ ರಾಜ್ಯ ಸರ್ಕಾರವು ಜವಾಬ್ದಾರಿಯುತ ಸಾಂಸ್ಥಿಕ ಸರ್ಕಾರವಾಗಿ ಕೆಲಸ ಮಾಡುತ್ತಿಲ್ಲ. ಇದು ಕೇವಲ ಕಾಂಗ್ರೆಸ್ ಪಕ್ಷದ ರೀತಿಯಲ್ಲಿ ವರ್ತಿಸುತ್ತಿದೆ. ಪ್ರಾಮಾಣಿಕ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಹೇರಿ, ತಮಗೆ ಬೇಕಾದ ಕಾನೂನುಬಾಹಿರ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಗಂಭೀರವಾಗಿ ದೂರಿದರು.

