ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಅತ್ಯಂತ ಬಾಲಿಷ ಮತ್ತು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ. ರಾಹುಲ್ ಗಾಂಧಿ ಅವರು ದೇಶದ ಜನರ ಕ್ಷಮೆಯಾಚಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್‌ನಂತಹ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಎಲುಬಿಲ್ಲದ ನಾಲಿಗೆ ಎಂದು ಯಾರ ವಿರುದ್ಧವೂ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ” ಎಂದು ಕಿಡಿಕಾರಿದರು.
ಬಿಜೆಪಿ ಗೆಲುವು ಸಹಿಸಲು ಸಾಧ್ಯವಾಗುತ್ತಿಲ್ಲ!
ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಸಾಧಿಸಿರುವ ಅಭೂತಪೂರ್ವ ಗೆಲುವನ್ನು ಜೀರ್ಣಿಸಿಕೊಳ್ಳಲು ರಾಹುಲ್ ಗಾಂಧಿಗೆ ಸಾಧ್ಯವಾಗುತ್ತಿಲ್ಲ ಎಂದು ವಿಜಯೇಂದ್ರ ಲೇವಡಿ ಮಾಡಿದರು. “ಹಿಂದುಳಿದ ವರ್ಗಕ್ಕೆ ಸೇರಿದ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಜಗತ್ತಿನಲ್ಲೇ ಭಾರತವನ್ನು ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಸಿದ್ದಾರೆ. ದೇಶದ ಈ ಅಭಿವೃದ್ಧಿಯನ್ನು ಕಾಂಗ್ರೆಸ್ ನಾಯಕರು ಸಹಿಸುತ್ತಿಲ್ಲವೇ?” ಎಂದು ಅವರು ಪ್ರಶ್ನಿಸಿದರು.
ಕಾಶ್ಮೀರ ನಿರ್ಧಾರ, ನಕ್ಸಲ್ ನಿಗ್ರಹದ ಶ್ಲಾಘನೆ
ಜಮ್ಮು-ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಆರ್ಟಿಕಲ್ 370 ಅನ್ನು ರದ್ದುಪಡಿಸುವ ಧೈರ್ಯ ಕಾಂಗ್ರೆಸ್‌ಗೆ ಇರಲಿಲ್ಲ. ಆ ಐತಿಹಾಸಿಕ ತೀರ್ಮಾನವನ್ನು ಗೃಹ ಸಚಿವ ಅಮಿತ್ ಶಾ ತೆಗೆದುಕೊಂಡಿದ್ದಾರೆ. ದೇಶದಲ್ಲಿ ನಕ್ಸಲರನ್ನು ಬುಡಸಮೇತ ನಾಶ ಮಾಡುವಲ್ಲಿ ಅಮಿತ್ ಶಾ ಯಶಸ್ವಿಯಾಗಿದ್ದಾರೆ. ಇಂತಹ ನಾಯಕರನ್ನು ದೇಶದ್ರೋಹಿ ಎಂದು ಕರೆಯುವ ರಾಹುಲ್ ಗಾಂಧಿ ಅವರ ಮಾನಸಿಕ ಸ್ಥಿತಿ ಹೇಗಿದೆ ಎಂದು ವಿಜಯೇಂದ್ರ ಪ್ರಶ್ನಿಸಿದರು. ಪ್ರಧಾನಿ ಮೋದಿಯವರ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ದೇಶದ ಜನ ಬೆಂಬಲ ನೀಡುತ್ತಿರುವುದೇ ಕಾಂಗ್ರೆಸ್ ವಲಯದಲ್ಲಿ ಹತಾಶೆ ಮೂಡಿಸಿದೆ ಎಂದು ಅವರು ಪ್ರತಿಪಾದಿಸಿದರು.
ರಾಜ್ಯದಲ್ಲಿ ಸಚಿವರೇ ವಿದೇಶಾಂಗ ತಜ್ಞರಂತೆ ಹುಚ್ಚುಚ್ಚಾಗಿ ಮಾತನಾಡ್ತಾರೆ:
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳೇ ಕಳೆದಿದ್ದರೂ, ಕೇವಲ ಪೌತಿ ಖಾತೆ ಮಾಡಿದ್ದನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇಲ್ಲಿನ ಕೆಲವು ಸಚಿವರು ತಾವೇ ವಿದೇಶಾಂಗ ಸಚಿವರು ಅಥವಾ ರಕ್ಷಣಾ ಪರಿಣತರೋ ಎಂಬಂತೆ ಬೇಜವಾಬ್ದಾರಿಯಾಗಿ ಮಾತನಾಡುತ್ತಿದ್ದಾರೆ” ಎಂದು ವಿಜಯೇಂದ್ರ ಕಟುವಾಗಿ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಆಡಳಿತ ವೈಖರಿ ಮತ್ತು ನಾಯಕರ ಬಾಲಿಷ ಹೇಳಿಕೆಗಳು ಅವರ ಹತಾಶೆಯನ್ನು ಎದ್ದು ತೋರಿಸುತ್ತಿವೆ ಎಂದು ಟೀಕಿಸಿದರು.
ಮೇ 23ಕ್ಕೆ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಆಗಮನ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಿತಿನ್ ನವೀನ್ ಅವರು ಇದೇ ಮೇ 23ರಂದು ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ವಿಜಯೇಂದ್ರ ಮಾಹಿತಿ ನೀಡಿದರು. “ಮೇ 24ರಂದು ಬೆಂಗಳೂರು ಉತ್ತರ ಜಿಲ್ಲೆಯ ಪ್ರಶಿಕ್ಷಣ ವರ್ಗದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರೊಂದಿಗೆ ವಿಶೇಷ ಸಭೆಯನ್ನು ಆಯೋಜಿಸಲಾಗಿದ್ದು, ರಾಜ್ಯದ ಪ್ರಸ್ತುತ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗುವುದು” ಎಂದರು.
ಮೋದಿ ಆಡಳಿತದ 12 ವರ್ಷಗಳ ಮೈಲಿಗಲ್ಲು: ಬೃಹತ್ ಕಾರ್ಯಕ್ರಮ
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸುತ್ತಿದ್ದು, ಇದು ಸುದೀರ್ಘ ಆಡಳಿತದ ಐತಿಹಾಸಿಕ ದಾಖಲೆಯಾಗಿದೆ. ಈ ಮೈಲಿಗಲ್ಲನ್ನು ಸ್ಮರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹಲವು ಜನಪರ ಚಟುವಟಿಕೆಗಳು ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ವಿಶ್ವ ಪರಿಸರ ದಿನ ಹಾಗೂ ಅಂತರರಾಷ್ಟ್ರೀಯ ಯೋಗ ದಿನಾಚರಣೆಗಳ ಸಂದರ್ಭದಲ್ಲಿ ಪಕ್ಷದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಬೃಹತ್ ಜನಜಾಗೃತಿ ಅಭಿಯಾನಗಳನ್ನು ರೂಪಿಸಲಾಗುವುದು ಎಂದು ಅವರು ವಿವರಿಸಿದರು.
ಬಿಜೆಪಿಗೆ ಸೇರಿದ ರಾಜಣ್ಣ; ಮಧ್ಯ ಕರ್ನಾಟಕದಲ್ಲಿ ಕಮಲ ಪಾಳಯಕ್ಕೆ ಬಲ!
ಕಾಡುಗೊಲ್ಲ ಅಭಿವೃದ್ಧಿ ನಿಗಮದ ಮಾಜಿ ರಾಜ್ಯ ಅಧ್ಯಕ್ಷ ರಾಜಣ್ಣ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾಗಿದ್ದಾರೆ. ಈ ಸೇರ್ಪಡೆಯಿಂದಾಗಿ ತುಮಕೂರು ಸೇರಿದಂತೆ ಇಡೀ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದ್ದು, ಬಿಜೆಪಿಗೆ ಮತ್ತಷ್ಟು ರಾಜಕೀಯ ಬಲ ಬಂದಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಬಿಡದಿ ಟೌನ್‌ಶಿಪ್ ಯೋಜನೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಯಾವುದೇ ಕಾರಣಕ್ಕೂ ಭೂಮಿ ಕಳೆದುಕೊಳ್ಳುವ ರೈತರು ಬೀದಿಪಾಲಾಗಲು ಬಿಜೆಪಿ ಬಿಡುವುದಿಲ್ಲ. ರೈತರ ಹಿತರಕ್ಷಣೆಗೆ ಪಕ್ಷ ಸದಾ ಬದ್ಧವಾಗಿದೆ” ಎಂದು ಸ್ಪಷ್ಟಪಡಿಸಿದರು.

