ಚಾಮರಾಜನಗರ: “ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಕೇವಲ ಮೌಢ್ಯ. ಎಲ್ಲಿ ಭಕ್ತಿ ಇರುತ್ತದೆಯೋ ಅಲ್ಲಿ ಭಗವಂತ ಇರುತ್ತಾನೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯ ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಾಮರಾಜನಗರದ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಸಂಪತ್ತನ್ನು ಶ್ಲಾಘಿಸಿದರು. “ಮಲೆ ಮಾದೇಶ್ವರ, ಮಧ್ಯರಂಗ, ಸಿದ್ದಪ್ಪಾಜಿ, ಹಿಮವದ್ ಗೋಪಾಲಸ್ವಾಮಿ ಬೆಟ್ಟದಂತಹ ಪುಣ್ಯಕ್ಷೇತ್ರಗಳಿಗೆ ಬಂದು ಜನ ನೆಮ್ಮದಿ ಕಂಡುಕೊಳ್ಳುತ್ತಾರೆ. ಶ್ರೀರಂಗಪಟ್ಟಣದ ಆದಿರಂಗ, ಶಿವನಸಮುದ್ರದ ಮಧ್ಯರಂಗ ಹಾಗೂ ಶ್ರೀರಂಗಂನ ಅಂತ್ಯರಂಗ ದೇವಾಲಯಗಳಿಗೆ ಒಂದೇ ದಿನದಲ್ಲಿ ಭೇಟಿ ನೀಡುವ ಸುದೀರ್ಘ ಧಾರ್ಮಿಕ ಪದ್ಧತಿ ಇಂದಿಗೂ ನಡೆದುಕೊಂಡು ಬಂದಿದೆ” ಎಂದು ಸ್ಮರಿಸಿದರು.
ಕೊಟ್ಟ ಮಾತು ಉಳಿಸಿಕೊಂಡ ಸರ್ಕಾರ
ಇಂದು ಸಚಿವ ಸಂಪುಟ ಸಭೆ ಇದ್ದರೂ ಅನೇಕ ಸಚಿವರೊಂದಿಗೆ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಬಂದಿರುವುದಾಗಿ ತಿಳಿಸಿದ ಡಿಸಿಎಂ, “ನಮ್ಮ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮಧ್ಯರಂಗ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಈ ಹಿಂದೆ ಚಾಮರಾಜನಗರದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಈ ಭಾಗದ ಕೈಗಾರಿಕಾ ಪ್ರಗತಿಗೆ ಅನೇಕ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಅವಧಿಯ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸರ್ಕಾರಿ ಕೆಲಸ ನೀಡುವ ಮೂಲಕ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ನಮ್ಮ ಸಚಿವರಾದ ವೆಂಕಟೇಶ್ ಅವರು ಇತಿಹಾಸದ ಪುಟ ಸೇರುವಂತಹ ಕೆಲಸ ಮಾಡಿದ್ದಾರೆ” ಎಂದು ಶ್ಲಾಘಿಸಿದರು.
ಚುನಾವಣೆ ಸಿದ್ಧತೆ ಮತ್ತು ಸಿಎಂ ಕುರ್ಚಿ ಜಿಜ್ಞಾಸೆ!
ಸ್ಥಳೀಯ ಸಂಸ್ಥೆಗಳ (GBA) ಚುನಾವಣೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಚುನಾವಣೆ ನಡೆಸುವ ಸಂಪೂರ್ಣ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ. ಸರ್ಕಾರ ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಿದ್ದು, ನಿಗದಿತ ಸಮಯಕ್ಕೆ ಚುನಾವಣೆ ಎದುರಿಸಲು ನಾವೆಲ್ಲ ಸಿದ್ಧರಾಗಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳು ‘ನೀವು ಯಾವಾಗ ಮುಖ್ಯಮಂತ್ರಿಯಾಗುತ್ತೀರಿ?’ ಎಂದು ಕೇಳಿದ ನೇರ ಪ್ರಶ್ನೆಗೆ, “ಅದನ್ನು ಕಾಲವೇ ತೀರ್ಮಾನ ಮಾಡುತ್ತದೆ” ಎಂದು ಡಿ.ಕೆ. ಶಿವಕುಮಾರ್ ಅತ್ಯಂತ ಮಾರ್ಮಿಕವಾಗಿ ಉತ್ತರಿಸುವ ಮೂಲಕ ಕುತೂಹಲ ಮೂಡಿಸಿದರು
ಮೇಕೆದಾಟು ಯೋಜನೆಗೆ ಕಚೇರಿ ಆರಂಭ, ಶೀಘ್ರವೇ ಕೇಂದ್ರಕ್ಕೆ ಡಿಪಿಆರ್:
ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಕಚೇರಿಯನ್ನು ಪ್ರಾರಂಭಿಸಲಾಗಿದ್ದು, ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಯೋಜನೆಗಾಗಿ ಮುಳುಗಡೆಯಾಗಲಿರುವ ಅರಣ್ಯ ಪ್ರದೇಶಕ್ಕೆ ಪ್ರತಿಯಾಗಿ ಪರ್ಯಾಯ ಜಮೀನನ್ನು ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದಿದ್ದಾರೆ.
“ಶೀಘ್ರದಲ್ಲೇ ಪರಿಷ್ಕೃತ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದ್ದೇವೆ. ಕೇಂದ್ರದಿಂದ ಹಸಿರು ನಿಶಾನೆ ಸಿಗುತ್ತಿದ್ದಂತೆಯೇ ಯೋಜನೆಯ ಭೂಮಿ ಪೂಜೆ ನೆರವೇರಿಸಲಾಗುವುದು” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮಿಳುನಾಡಿಗೆ ಆಕ್ಷೇಪಿಸುವ ಹಕ್ಕಿಲ್ಲ!
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಮಾತನಾಡಿದ ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ, “ಕಾವೇರಿ ತೀರ್ಪಿನ ಪ್ರಕಾರ ತಮಿಳುನಾಡಿಗೆ 177 ಟಿಎಂಸಿ ನೀರನ್ನು ಬಿಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನು ಹೇಗೆ ಸಮರ್ಪಕವಾಗಿ ನಿರ್ವಹಿಸಬೇಕು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಗಂಭೀರ ಚರ್ಚೆ ನಡೆಸಲಾಗುವುದು. ಆದರೆ, ಮೇಕೆದಾಟು ಯೋಜನೆಗೆ ಆಕ್ಷೇಪ ಎತ್ತಲು ತಮಿಳುನಾಡಿಗೆ ಯಾವುದೇ ಕಾನೂನಾತ್ಮಕ ಹಕ್ಕಿಲ್ಲ. ಈ ಕುರಿತು ಕೇಂದ್ರ ಜಲ ಆಯೋಗವೇ (CWA) ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ” ಎಂದು ನೆರೆರಾಜ್ಯಕ್ಕೆ ಖಡಕ್ ಸಂದೇಶ ನೀಡಿದರು.
ಆರನೇ ಗ್ಯಾರಂಟಿಯಾಗಿ ‘ಭೂ ಗ್ಯಾರಂಟಿ’
ರಾಜ್ಯ ಸರ್ಕಾರದ ಆಡಳಿತಾವಧಿಯ ಮೈಲಿಗಲ್ಲುಗಳನ್ನು ಸ್ಮರಿಸಿದ ಅವರು, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಯಶಸ್ವಿ ವರ್ಷಗಳನ್ನು ಪೂರೈಸಿದೆ. ನುಡಿದಂತೆ ನಡೆದು ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಇದೀಗ ಆರನೇ ಗ್ಯಾರಂಟಿಯಾಗಿ ‘ಭೂ ಗ್ಯಾರಂಟಿ’ ಯೋಜನೆಯನ್ನು ಜನರಿಗೆ ತಲುಪಿಸುತ್ತಿದ್ದೇವೆ. ಈ ಯೋಜನೆಯಡಿ ಪ್ರತಿಯೊಬ್ಬ ಫಲಾನುಭವಿಯ ಆಸ್ತಿ ಪತ್ರಗಳಲ್ಲಿ ಅವರ ಫೋಟೋ ಹಾಗೂ ಸ್ವತ್ತಿನ ಡಿಜಿಟಲ್ ಫೋಟೋವನ್ನು ಅಳವಡಿಸಿ, ಮನೆ ಮನೆಗೆ ಅಧಿಕೃತ ಖಾತೆಗಳನ್ನು ವಿತರಿಸಲಾಗುತ್ತಿದೆ. ಈ ಮೂಲಕ ಜನಸಾಮಾನ್ಯರ ಋಣ ತೀರಿಸುವ ಅಭೂತಪೂರ್ವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ” ಎಂದರು.
ಮುಂಬರುವ ದಿನಗಳಲ್ಲಿ ಮಳೆ ಕೊರತೆಯುಂಟಾದರೆ ರೈತರ ಹಿತರಕ್ಷಣೆ ಹೇಗೆ ಮಾಡಬೇಕು ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಹೇಗೆ ನಿವಾರಿಸಬೇಕು ಎಂಬ ಬಗ್ಗೆಯೂ ಸರ್ಕಾರ ಈಗಿನಿಂದಲೇ ಮುಂಜಾಗ್ರತಾ ಚರ್ಚೆಗಳನ್ನು ನಡೆಸುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.

