ಬೆಂಗಳೂರು: “ಜಾಗತಿಕ ಮಟ್ಟದ ಯುದ್ಧ ಭೀತಿ ಮತ್ತು ಆರ್ಥಿಕ ಸಂಕಷ್ಟಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹಿತದೃಷ್ಟಿಯಿಂದ ಇಂಧನ ಮಿತವ್ಯಯಕ್ಕೆ ಕರೆ ನೀಡಿದ್ದಾರೆ. ಇದನ್ನು ಪ್ರತಿಯೊಬ್ಬ ನಾಗರಿಕರೂ ಪಾಲಿಸಬೇಕಾಗಿದ್ದು, ವಿರೋಧ ಪಕ್ಷಗಳು ಈ ವಿಚಾರದಲ್ಲಿ ಅನಗತ್ಯ ರಾಜಕೀಯ ಮಾಡಬಾರದು” ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣದಿಂದ ಕೆಂಗೇರಿವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರ ಇಂಧನ ಉಳಿತಾಯದ ಕರೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಭೀಕರ ಪರಿಣಾಮಗಳು ಇಡೀ ಜಗತ್ತಿನ ಮೇಲಾಗುತ್ತಿವೆ. ಇದರ ಬಿಸಿ ಭಾರತಕ್ಕೂ ತಟ್ಟುತ್ತಿದ್ದು, ಇಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶದ ಇಂಧನ ಮತ್ತು ಸಂಪನ್ಮೂಲಗಳನ್ನು ಮಿತವಾಗಿ ಬಳಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಜನರಿಗೆ ಕರೆ ನೀಡಿ ಸುಮ್ಮನಾಗಿಲ್ಲ, ಬದಲಿಗೆ ತಾವೇ ಸ್ವತಃ ಮಿತವ್ಯಯ ನೀತಿಯನ್ನು ಅಳವಡಿಸಿಕೊಂಡು ದೇಶಕ್ಕೆ ಮಾದರಿಯಾಗಿದ್ದಾರೆ. ತಮ್ಮ ಭದ್ರತಾ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಕೂಡ ಇದೇ ಹಾದಿಯಲ್ಲಿ ನಡೆದು ಮಿತವ್ಯಯವನ್ನು ಪಾಲಿಸುತ್ತಿದ್ದಾರೆ ಎಂದು ವಿಜಯೇಂದ್ರ ಅವರು ಉಲ್ಲೇಖಿಸಿದರು.
ಇದೇ ವೇಳೆ ಸಾರ್ವಜನಿಕ ಸಾರಿಗೆಯ ಮಹತ್ವವನ್ನು ಒತ್ತಿಹೇಳಿದ ಅವರು, ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಬೇಕು. ಅದರ ಬದಲಾಗಿ ಬಸ್, ಮೆಟ್ರೋ ಹಾಗೂ ರೈಲುಗಳಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಾಗಿ ಅವಲಂಬಿಸಬೇಕು ಎಂದು ವಿನಂತಿಸಿದರು. “ರಾಜ್ಯ ಬಿಜೆಪಿ ಅಧ್ಯಕ್ಷನಾಗಿ ನಾನು ಕೂಡ ಇಂದಿನಿಂದ ಸಾರ್ವಜನಿಕ ಸಾರಿಗೆ ಬಳಸಲು ನಿರ್ಧರಿಸಿದ್ದೇನೆ. ಇಂದು ಕೇವಲ ಪಕ್ಷದ ಕಾರ್ಯಕ್ರಮ ಮಾತ್ರವಲ್ಲದೆ, ಶ್ರೀಶ್ರೀ ರವಿಶಂಕರ್ ಗುರೂಜಿ ಅವರನ್ನು ಭೇಟಿ ಮಾಡಲು ಸಹ ನಾನು ಮೆಟ್ರೋ ಮೂಲಕವೇ ಪ್ರಯಾಣಿಸುತ್ತಿದ್ದೇನೆ” ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

