ತುಮಕೂರು/ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳ ಯಶಸ್ವಿ ಆಡಳಿತವನ್ನು ಪೂರೈಸುತ್ತಿರುವ ಐತಿಹಾಸಿಕ ಸಂದರ್ಭವನ್ನು ಸಂಭ್ರಮಿಸಲು ಕಲ್ಪತರು ನಾಡು ತುಮಕೂರು ಸಂಪೂರ್ಣವಾಗಿ ಸಜ್ಜಾಗುತ್ತಿದೆ. ಮೇ 19 ರಂದು ನಗರದಲ್ಲಿ ಆಯೋಜಿಸಲಾಗಿರುವ “ಪ್ರಗತಿಯತ್ತ ಕರ್ನಾಟಕ” – ಸಾರ್ಥಕ ಸೇವೆಯ ಸಮರ್ಪಣೆ ಬೃಹತ್ ಸಮಾವೇಶಕ್ಕೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯದ ಗಣ್ಯರನ್ನು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಅಧಿಕೃತವಾಗಿ ಆಹ್ವಾನಿಸಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿದ ಗೃಹ ಸಚಿವರು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಹಸ್ತಾಂತರಿಸಿ ಸಮಾವೇಶದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವಂತೆ ಕೋರಿದರು. ಈ ವೇಳೆ ಸರ್ಕಾರದ ಮೂರು ವರ್ಷಗಳ ಸಾಧನೆಗಳನ್ನು ಸಾರ್ವಜನಿಕರ ಮುಂದೆ ಅನಾವರಣಗೊಳಿಸುವ ಈ ಸಮಾವೇಶದ ಸಿದ್ಧತೆಗಳು, ರೂಪುರೇಷೆಗಳು ಮತ್ತು ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಅವರು ಗಣ್ಯರಿಗೆ ವಿಸ್ತೃತವಾದ ಮಾಹಿತಿಯನ್ನು ನೀಡಿದರು.
ಈ ಮಹಾ ಸಮಾವೇಶವು ಕೇವಲ ಒಂದು ಆಚರಣೆಯಾಗದೆ, ಸರ್ಕಾರದ ಜನಪರ ಯೋಜನೆಗಳು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಗ್ಯಾರಂಟಿ ಯೋಜನೆಗಳ ಭವ್ಯ ಯಶಸ್ಸನ್ನು ಇಡೀ ರಾಜ್ಯಕ್ಕೆ ಸಾರುವ ವೇದಿಕೆಯಾಗಲಿದೆ. ತುಮಕೂರು ಜಿಲ್ಲಾ ಕೇಂದ್ರದಲ್ಲಿ ಜರುಗಲಿರುವ ಈ ಬೃಹತ್ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಸಾರ್ವಜನಿಕರು, ಪ್ರಮುಖ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಇಡೀ ನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಪ್ರಮುಖ ರಸ್ತೆ ಹಾಗೂ ವೃತ್ತಗಳನ್ನು ಅದ್ಧೂರಿಯಾಗಿ ಅಲಂಕರಿಸಲಾಗುತ್ತಿದೆ.
ಸಮಾವೇಶವನ್ನು ಅತ್ಯಂತ ಯಶಸ್ವಿಯಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲು ಸಚಿವ ಡಾ. ಜಿ. ಪರಮೇಶ್ವರ್ ಅವರು ಈಗಾಗಲೇ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸರಣಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಹಲವು ವಿವಿಐಪಿಗಳು ಹಾಗೂ ಗಣ್ಯರು ಏಕಕಾಲದಲ್ಲಿ ಆಗಮಿಸುತ್ತಿರುವುದರಿಂದ ಯಾವುದೇ ರೀತಿಯ ಭದ್ರತಾ ಲೋಪಗಳು ಆಗದಂತೆ ಮತ್ತು ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಹಾಗೂ ಪರ್ಯಾಯ ಮಾರ್ಗಗಳ ವ್ಯವಸ್ಥೆಯನ್ನು ಕಲ್ಪಿಸುವಂತೆ ಅವರು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಾರ್ವಜನಿಕರಿಗೆ ನೆರಳು, ಕುಡಿಯುವ ನೀರು ಮತ್ತು ಊಟೋಪಚಾರದ ಕೌಂಟರ್‌ಗಳನ್ನು ನಿರ್ಮಿಸುವ ಕಾರ್ಯ ಕೂಡ ಭರದಿಂದ ಸಾಗಿದ್ದು, ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ.

