Sat. Aug 15th, 2026

ಮುಂದಿನ ಆಗಸ್ಟ್‌ ಒಳಗೆ ‘ಮೇಕೆದಾಟು ಯೋಜನೆ’ಗೆ ಶಂಕುಸ್ಥಾಪನೆ: ಸಚಿವ ಎನ್.ಚಲುವರಾಯಸ್ವಾಮಿ ಘೋಷಣೆ

Share this with Friends

ಮಂಡ್ಯ: “ಕಾವೇರಿ ಕೊಳ್ಳದ ಜನರ ಹಿತರಕ್ಷಣೆ ಮತ್ತು ನದಿ ನೀರು ವಿವಾದಕ್ಕೆ ಮೇಕೆದಾಟು ಯೋಜನೆಯೇ ಶಾಶ್ವತ ಪರಿಹಾರವಾಗಿದೆ. ಮುಂದಿನ ವರ್ಷದ ಆಗಸ್ಟ್ ಒಳಗೆ ಈ ಬೃಹತ್ ಯೋಜನೆಗೆ ಭೂಮಿಪೂಜೆ (ಶಂಕುಸ್ಥಾಪನೆ) ನೆರವೇರಿಸುವುದೇ ನಮ್ಮ ಸರ್ಕಾರದ ಪ್ರಮುಖ ಗುರಿ” ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಕಟಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆಯ ಹೊಣೆ ಹೊತ್ತ ತಕ್ಷಣವೇ ಮೇಕೆದಾಟು ಯೋಜನೆಗೆ ಗಣನೀಯ ವೇಗ ನೀಡಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಪರಿಷ್ಕೃತ ವಿವರವಾದ ಯೋಜನಾ ವರದಿಯನ್ನು (DPR) ಮತ್ತೊಮ್ಮೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

20 ಸಾವಿರ ಎಕರೆ ಭೂಮಿ ಗುರುತು

ಯೋಜನೆಯ ಅನುಷ್ಠಾನಕ್ಕೆ ಒಟ್ಟು 12,500 ಎಕರೆ ಜಮೀನಿನ ಅವಶ್ಯಕತೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಇಲಾಖೆಯು ಈಗಾಗಲೇ 20,000 ಎಕರೆ ಪ್ರದೇಶವನ್ನು ಗುರುತಿಸಿದೆ. ಈ ಯೋಜನೆಗೆ ಸಂಬಂಧಿಸಿದ ತಾಂತ್ರಿಕ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಕೇಂದ್ರ ಮಟ್ಟದಲ್ಲಿ ಪ್ರತಿದಿನದ ಬೆಳವಣಿಗೆಗಳನ್ನು ನಿರಂತರವಾಗಿ ಫಾಲೋಅಪ್ ಮಾಡಲು ದೆಹಲಿಯಲ್ಲಿ ಇಬ್ಬರು ಹಿರಿಯ ನೀರಾವರಿ ತಜ್ಞ ಅಧಿಕಾರಿಗಳನ್ನು ವಿಶೇಷವಾಗಿ ನೇಮಕ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.

“ನನ್ನ ಮೇಲೆ ನಂಬಿಕೆ ಇಡಿ, ತಮಿಳುನಾಡಿಗೆ ನೀರು ಬಿಟ್ಟಿಲ್ಲ”

ಕೃಷ್ಣರಾಜಸಾಗರ (KRS) ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂಬ ಆರೋಪಗಳನ್ನು ಸಚಿವರು ಕಡಾಖಂಡಿತವಾಗಿ ನಿರಾಕರಿಸಿದ್ದಾರೆ. “ನನ್ನ ಮಾತುಗಳ ಮೇಲೆ ರಾಜ್ಯದ ಜನತೆ ನಂಬಿಕೆ ಇಡಬೇಕು. ನಾವು ತಮಿಳುನಾಡಿಗೆ ಯಾವುದೇ ನೀರನ್ನು ಹರಿಸುತ್ತಿಲ್ಲ. ಕಾವೇರಿ ನಿಯಂತ್ರಣ ಸಮಿತಿಯ ನಿಯಮಾವಳಿಗಳ ಪ್ರಕಾರ ಜೂನ್ ಮತ್ತು ಜುಲೈ ತಿಂಗಳಿನಿಂದಲೇ ನೀರು ಬಿಡಬೇಕಿತ್ತಾದರೂ, ನಮ್ಮ ಇಲಾಖೆ ನೀರು ಬಿಡುಗಡೆ ಮಾಡಿರಲಿಲ್ಲ” ಎಂದು ಸಚಿವರು ಸ್ಪಷ್ಟಪಡಿಸಿದರು.

ಪ್ರಸ್ತುತ ಕಾವೇರಿ ಪ್ರಾಧಿಕಾರವು 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ ನೀಡಿದೆ. ಆದರೆ ಸದ್ಯ ಕಬಿನಿ ಜಲಾಶಯದಿಂದಲೇ 10 ಸಾವಿರ ಕ್ಯೂಸೆಕ್ ನೀರು ಹೊರಹೋಗುತ್ತಿದ್ದು, ಇದರೊಂದಿಗೆ ನದಿಯ ಸ್ವಾಭಾವಿಕ ಒರತೆ ನೀರು (ಸೀಪೇಜ್ ವಾಟರ್) ತಮಿಳುನಾಡು ಗಡಿಯನ್ನು ತಲುಪುತ್ತಿದೆ. ಪ್ರಸ್ತುತ ಜಲಾಶಯಗಳ ನಿಖರವಾದ ಒಳಹರಿವು ಮತ್ತು ಹೊರಹರಿವಿನ ಅಂಕಿ-ಅಂಶಗಳನ್ನು ತಾಂತ್ರಿಕ ಹಾಗೂ ಕಾನೂನು ಕಾರಣಗಳಿಗಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಅನಗತ್ಯ ಗೊಂದಲಗಳನ್ನು ಸೃಷ್ಟಿಸಿ ನೆರೆ ರಾಜ್ಯಕ್ಕೆ ಕಾನೂನಾತ್ಮಕವಾಗಿ ಲಾಭ ಮಾಡಿಕೊಡುವುದು ನಮಗೆ ಇಷ್ಟವಿಲ್ಲ ಎಂದು ಅವರು ತಿಳಿಸಿದರು.

ಎಲ್ಲಾ ಸರ್ಕಾರಗಳಲ್ಲೂ ಮಳೆ ಕೊರತೆಯಾಗಿದೆ. ಆಗಸ್ಟ್ ಕೊನೆಯವರೆಗೂ ಮಳೆ ನಿರೀಕ್ಷೆ ಇದೆ. ಸೆಪ್ಟೆಂಬರ್‌ನಲ್ಲಿ ಕೆಆರ್‌ಎಸ್ ಭರ್ತಿಯ ವಿಶ್ವಾಸವಿದೆ ಎಂದು ಹೇಳಿದರು. ಕಳೆದ 20 ದಿನಗಳಿಂದ ಕೆಆರ್‌ಎಸ್ ಜಲಾಶಯದಿಂದ ಕೆರೆ ಕಟ್ಟೆಗಳಿಗೆ, ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ. ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಬಿಡಲು ಹೇಳಲಾಗಿದೆ. ಅಲ್ಪಾವಧಿ ಬೆಳೆಗೆ ನೀರು ಬಿಡುವ ಬಗ್ಗೆ ಬುಧವಾರ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.


Share this with Friends

Related Post