Sun. Sep 27th, 2026

ಜಮೀನು ನೀಡಲು ಬಿಡದಿ ರೈತರಿಗೆ ಯಾವುದೇ ಒತ್ತಡವಿಲ್ಲ, ಇದು ಕುಮಾರಸ್ವಾಮಿ ಆರಂಭಿಸಿದ ಯೋಜನೆ: ಸಿಎಂ ಡಿ.ಕೆ. ಶಿವಕುಮಾರ್

Share this with Friends

ಬೆಂಗಳೂರು: “ಬೈರಮಂಗಲ ಮತ್ತು ಬಿಡದಿ ಭಾಗದಲ್ಲಿ ಕೈಗಾರಿಕಾ ಅಥವಾ ರಸ್ತೆ ಯೋಜನೆಗಾಗಿ ಜಮೀನು ನೀಡುವಂತೆ ಸರ್ಕಾರ ಯಾರ ಮೇಲೂ ಬಲವಂತ ಮಾಡುತ್ತಿಲ್ಲ. ರೈತರು ಬಲವಂತವಾಗಿ ಭೂಮಿ ಕೊಡುವುದು ಬೇಡ ಎಂದು ನಾನೇ ನೇರವಾಗಿ ಹೇಳುತ್ತಿದ್ದೇನೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಭಾಗದ ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ರಸ್ತೆ ತಡೆ ಪ್ರತಿಭಟನೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ತಮ್ಮ ಬದುಕು ಕಟ್ಟಿಕೊಳ್ಳಲು ಹಣದ ಅಗತ್ಯವಿರುವವರು ಸ್ವಇಚ್ಛೆಯಿಂದ ಭೂಮಿ ನೀಡುತ್ತಿದ್ದಾರೆ, ಬೇಡ ಎನ್ನುವವರು ಕೊಡುವುದು ಬೇಡ. ಈ ವಿಚಾರದಲ್ಲಿ ತಮಗೆ ಯಾವುದೇ ಆತುರ ಅಥವಾ ವೈಯಕ್ತಿಕ ಪ್ರತಿಷ್ಠೆ ಇಲ್ಲ. ಈ ಹಿಂದೆ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಆರಂಭಿಸಿದ್ದ ಯೋಜನೆಯನ್ನು ತಾವು ಮುಂದುವರಿಸುತ್ತಿರುವುದಾಗಿ ತಿಳಿಸಿದರು.

ಮತಗಳ್ಳತನದ ವಿರುದ್ಧ ವಿರೋಧ ಪಕ್ಷಗಳ ಜಂಟಿ ಸಭೆ:

ಇದೇ ವೇಳೆ ಚುನಾವಣಾ ಅಕ್ರಮಗಳ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, “ಮತಗಳ್ಳತನದ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದ ಆತಂಕಗಳು ಈಗ ನಿಜವಾಗಿವೆ. ಚುನಾವಣಾ ಆಯೋಗದ ಒಳಗಿನ ಅಪಸ್ವರಗಳು ಹಾಗೂ ಅಕ್ರಮಗಳು ಈಗ ಬಯಲಿಗೆ ಬಂದಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತದ ತೀರ್ಮಾನವಾಗಬೇಕು, ಆದರೆ ಮೂವರಲ್ಲಿ ಇಬ್ಬರು ಆಯುಕ್ತರ ಭಿನ್ನಮತದ ನಡುವೆ ತೇಪೆ ಹಚ್ಚಿ ತೀರ್ಮಾನಗಳನ್ನು ಕೂರಿಸಲಾಗಿದೆ. ಈ ಕುರಿತು ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಎಐಸಿಸಿ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಎಲ್ಲಾ ಪ್ರಮುಖ ವಿರೋಧ ಪಕ್ಷಗಳ ಜಂಟಿ ಸಭೆ ಕರೆಯಲಾಗಿದೆ” ಎಂದರು.

ದೆಹಲಿಯಲ್ಲೇ ನಿಗಮ-ಮಂಡಳಿ ನೇಮಕ ಅಂತಿಮ:

ರಾಜ್ಯದ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿಯ ಕುರಿತು ಉತ್ತರಿಸಿದ ಸಿಎಂ, ದೆಹಲಿ ಪ್ರವಾಸದ ವೇಳೆ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ಹಿರಿಯ ಶಾಸಕರಿಗೆ ನಿಗಮ-ಮಂಡಳಿಗಳಲ್ಲಿ ಅವಕಾಶ ಕಲ್ಪಿಸಿ, ತದನಂತರ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೂ ಜವಾಬ್ದಾರಿ ಹಂಚಿಕೆ ಮಾಡಲಾಗುವುದು. ಇನ್ನು ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡುವ ಕುರಿತು ಮುಂದಿನ ದೆಹಲಿ ಭೇಟಿಯ ಸಂದರ್ಭದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ನಾಪತ್ತೆಯಾದ ಅಧಿಕಾರಿ ವಿರುದ್ಧ ತನಿಖೆ:

ಗದಗದಲ್ಲಿ ಎಇಇ ಅಧಿಕಾರಿಯೊಬ್ಬರು ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, “ಸದರಿ ಅಧಿಕಾರಿಯ ವಿರುದ್ಧ ಈ ಮೊದಲೇ ಹಲವು ಗಂಭೀರ ದೂರುಗಳು ಬಂದಿದ್ದವು. ನಕಲಿ ಬಿಲ್ ವಂಚನೆ ತಡೆಯಲು ನಮ್ಮ ಸರ್ಕಾರವು ಕಾಮಗಾರಿಗೂ ಮುನ್ನ ಹಾಗೂ ಮುಗಿದ ನಂತರದ ಸ್ಥಳದ ವೀಡಿಯೊ ದಾಖಲೆಯನ್ನು ಕಡ್ಡಾಯಗೊಳಿಸಿದೆ. ಆದರೆ ಈ ಅಧಿಕಾರಿ ನಿಯಮಾವಳಿಗಳ ಪ್ರಕಾರ ಕೆಲಸ ಮಾಡುತ್ತಿರಲಿಲ್ಲ ಮತ್ತು ಸ್ಥಳ ಪರಿಶೀಲನೆ ನಡೆಸುತ್ತಿರಲಿಲ್ಲ. ಈ ಹಿಂದೆ ಇವರು ಅಜ್ಮೀರ್, ಹೈದರಾಬಾದ್‌ಗೆ ತೆರಳಿದ್ದ ಮಾಹಿತಿ ಇದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ” ಎಂದು ತಿಳಿಸಿದರು.

 

 


Share this with Friends

Related Post