ಬೆಂಗಳೂರು: “ನಿಮ್ಮ ಎಲ್ಲಾ ನ್ಯಾಯಸಮ್ಮತ ಬೇಡಿಕೆಗಳ ಬಗ್ಗೆ ಸರ್ಕಾರವು ಸಕಾರಾತ್ಮಕವಾಗಿ ಆಲೋಚನೆ ಮಾಡಲಿದೆ. ನೀವು ನಮ್ಮ ಜೊತೆ ಇರಿ, ನಿಮ್ಮ ಜೊತೆ ಸದಾ ನಾವಿರುತ್ತೇವೆ,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯ ಸರ್ಕಾರಿ ನೌಕರರಿಗೆ ಭರವಸೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ನಮ್ಮಭಿಮಾನದ ಅಭಿನಂದನಾ ಸಮಾರಂಭ’ದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಮಿತಿ ವರದಿ ಬಳಿಕ ಕ್ಯಾಬಿನೆಟ್‌ನಲ್ಲಿ ಚರ್ಚೆ
ನೌಕರರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, “ನನ್ನ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಅವರ ಮುಂದೆ ನೀವು ಇಟ್ಟಿರುವ ಬೇಡಿಕೆಗಳ ಬಗ್ಗೆ ನಮಗೆ ಸಂಪೂರ್ಣ ಅರಿವಿದೆ. ಈ ಕುರಿತು ರಚನೆಯಾಗಿರುವ ಸಮಿತಿಯ ಅಧಿಕೃತ ವರದಿ ಬಂದ ತಕ್ಷಣವೇ ಸಚಿವ ಸಂಪುಟ (Cabinet) ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗುವುದು. ಆ ಬಳಿಕ ನಿಮ್ಮ ಸಂಘದ ಪದಾಧಿಕಾರಿಗಳ ಜೊತೆಯೂ ನೇರ ಸಮಾಲೋಚನೆ ನಡೆಸಿ, ನಮ್ಮ ಕೈಲಾದ ಎಲ್ಲಾ ಗರಿಷ್ಠ ಸಹಾಯವನ್ನು ಮಾಡಲಿದ್ದೇವೆ. ಪ್ರತಿಯೊಂದಕ್ಕೂ ಶುಭ ಕಾಲ ಬರಬೇಕಾಗುತ್ತದೆ, ಅಲ್ಲಿಯವರೆಗೆ ನೀವೆಲ್ಲರೂ ಸ್ವಲ್ಪ ತಾಳ್ಮೆಯಿಂದ ಇರಿ. ಬಸವಣ್ಣನ ನಾಡಿನಲ್ಲಿ ಹುಟ್ಟಿರುವ ನಾವು ಕೊಟ್ಟ ಮಾತನ್ನು ಎಂದಿಗೂ ತಪ್ಪುವುದಿಲ್ಲ. ನುಡಿದಂತೆ ನಡೆಯುವ ಸರ್ಕಾರ ನಮ್ಮದಾಗಿದ್ದು, ಇದು ನಿಮ್ಮದೇ ಸರ್ಕಾರ,” ಎಂದು ವಿಶ್ವಾಸ ತುಂಬಿದರು.
“ನೀವು ಆಡಳಿತ ಯಂತ್ರದ ಚಾಲನಾ ರಥ”
ಹಳೆಯ ಪಿಂಚಣಿ ಯೋಜನೆ (OPS) ಮತ್ತು ಹೊಸ ಪಿಂಚಣಿ ಯೋಜನೆ (NPS) ಕುರಿತು ಮಾತನಾಡಿದ ಸಿಎಂ, “ಓಪಿಎಸ್ ಮತ್ತು ಎನ್‌ಪಿಎಸ್ ವಿಚಾರಗಳು ನಮ್ಮ ಗಮನದಲ್ಲಿವೆ. ಸರ್ಕಾರಿ ನೌಕರರು ಇಡೀ ರಾಜ್ಯದ ಆಡಳಿತ ಯಂತ್ರದ ಚಾಲನಾ ರಥವಿದ್ದಂತೆ. ನೀವು ಚೆನ್ನಾಗಿದ್ದರೆ ಮಾತ್ರ ಇಡೀ ಆಡಳಿತ ಸುಸೂತ್ರವಾಗಿ ನಡೆಯಲು ಸಾಧ್ಯ. ನಾವೆಲ್ಲರೂ ಒಂದು ಕುಟುಂಬದ ರೀತಿಯಲ್ಲಿ ಒಟ್ಟಾಗಿ ಕೆಲಸ ಮಾಡಬೇಕಿದೆ. ಕೇವಲ ಮಾತು ಕೊಡುವುದು ಮುಖ್ಯವಲ್ಲ, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ನಮಗೆ ಮುಖ್ಯವಾಗಿದೆ,” ಎಂದರು.
“ನಮ್ಮ-ನಿಮ್ಮ ಒಪ್ಪಂದಕ್ಕೆ ಇಬ್ಬರು ಸ್ವಾಮೀಜಿಗಳೇ ಸಾಕ್ಷಿ”
ವೇದಿಕೆಯಲ್ಲಿದ್ದ ಧರ್ಮಗುರುಗಳನ್ನು ಉಲ್ಲೇಖಿಸಿ ಭಾಷಣದುದ್ದಕ್ಕೂ ನೌಕರರ ಮನಗೆಲ್ಲುವ ಯತ್ನ ನಡೆಸಿದ ಡಿ.ಕೆ. ಶಿವಕುಮಾರ್, “ನಾನು ಮತ್ತು ಪರಮೇಶ್ವರ್ ಅವರು ನಿಮ್ಮ ರಕ್ಷಣೆಗೆ ನಿಲ್ಲುತ್ತೇವೆ ಎಂದು ಮಾತು ಕೊಡುತ್ತೇವೆ. ನಮ್ಮಿಬ್ಬರ ಹಾಗೂ ನಿಮ್ಮ ನಡುವಿನ ಈ ಒಪ್ಪಂದಕ್ಕೆ ವೇದಿಕೆಯಲ್ಲಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶ್ರೀ ಸಿದ್ದಲಿಂಗ ಸ್ವಾಮೀಜಿಗಳೇ ಸಾಕ್ಷಿಯಾಗಿದ್ದಾರೆ. ಪರಮೇಶ್ವರ್ ಅವರ ಬಳಿ ಒಂದು ಬಾಂಡ್ ಪೇಪರ್ ಇದೆ, ನಾವೆಲ್ಲರೂ ಸೇರಿ ಅದಕ್ಕೆ ಸಹಿ ಹಾಕೋಣ. ಮುಂದಿನ ಬಾರಿಯೂ ನಮ್ಮ ಮತ್ತು ನಿಮ್ಮ ಸರ್ಕಾರ ಒಟ್ಟಾಗಿಯೇ ಕೆಲಸ ಮಾಡಬೇಕಿದೆ,” ಎಂದು ಮಾರ್ಮಿಕವಾಗಿ ನುಡಿದರು.
ಕೊನೆಯಲ್ಲಿ ಕಾವ್ಯಾತ್ಮಕವಾಗಿ ಮಾತನಾಡಿದ ಅವರು, “ಉಳಿಯ ಪೆಟ್ಟು ಬೀಳದೆ ಯಾವುದೇ ಕಲ್ಲು ಸುಂದರ ಪ್ರತಿಮೆಯಾಗುವುದಿಲ್ಲ, ಉಳುಮೆ ಮಾಡದೆ ಭೂಮಿ ಹಸನಾಗುವುದಿಲ್ಲ. ನಿಮ್ಮ ಕಷ್ಟಗಳ ಅರಿವು ನಮಗಿದೆ. ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸುತ್ತಾ, ನಿಮ್ಮ ಬದುಕಿಗೆ ನಾವು ಆಸರೆಯಾಗಿ ನಿಲ್ಲುತ್ತೇವೆ,” ಎಂದು ಭಾಷಣ ಮುಕ್ತಾಯಗೊಳಿಸಿದರು.

