ಬೆಂಗಳೂರು :ಪೊಲೀಸ್ ಠಾಣೆಗಳು ಯಾವುದೇ ಕಾರಣಕ್ಕೂ ರಿಯಲ್ ಎಸ್ಟೇಟ್ ವ್ಯವಹಾರದ ಕೇಂದ್ರಗಳಾಗಬಾರದು. ಭ್ರಷ್ಟಾಚಾರದ ವಿಚಾರದಲ್ಲಿ ಸರ್ಕಾರ ಶೂನ್ಯ ಸಹಿಷ್ಣುತೆ (Zero Tolerance) ನೀತಿ ಹೊಂದಿದ್ದು, ಕೆಳಹಂತದಿಂದ ಮೇಲ್ಮಟ್ಟದವರೆಗೆ ಭ್ರಷ್ಟಾಚಾರ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದ ನವೀಕೃತ ‘ಸಂಗಮ’ ಸಭಾಂಗಣದಲ್ಲಿ ಬೆಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲೂ ಅವರು ಮಾತನಾಡಿದರು.
‘ಟೀಂ ಬೆಂಗಳೂರು’ ಆಗಿ ಕಾರ್ಯನಿರ್ವಹಿಸಿ:
ಬೆಂಗಳೂರಿನ ಜನಸಂಖ್ಯೆ 20 ಲಕ್ಷದಿಂದ 1.5 ಕೋಟಿಗೆ ತಲುಪಿರುವ ಹಿನ್ನೆಲೆಯಲ್ಲಿ, ಆಡಳಿತಾತ್ಮಕ ಅನುಕೂಲಕ್ಕಾಗಿ 5 ಪ್ರತ್ಯೇಕ ಪೊಲೀಸ್ ಕಮಿಷನರೇಟ್‌ಗಳನ್ನು ರಚಿಸಿ ನೂರಾರು ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಯಶಸ್ವಿಯಾದ ಮಾದರಿಯಲ್ಲೇ ನೂತನ ಕಮಿಷನರೇಟ್‌ಗಳೂ ಕಾರ್ಯನಿರ್ವಹಿಸಬೇಕು. ನಗರದಲ್ಲಿ ಸುಮಾರು 2 ಲಕ್ಷ ವಿದೇಶಿಯರು ನೆಲೆಸಿದ್ದು, ಇಲ್ಲಿನ ಟ್ರಾಫಿಕ್ ಮತ್ತು ಕಾನೂನು ಸುವ್ಯವಸ್ಥೆಯ ಮೇಲೆ ಇಡೀ ಜಗತ್ತಿನ ಕಣ್ಣಿದೆ. ಹೀಗಾಗಿ ಅಧಿಕಾರಿಗಳು ‘ಟೀಂ ಬೆಂಗಳೂರು’ ಆಗಿ ಒಗ್ಗಟ್ಟಿನಿಂದ ಕೆಲಸ ಮಾಡಿ, ಮುಂದಿನ ಒಂದು ತಿಂಗಳಲ್ಲಿ ಜನರಿಗೆ ಕಾಣುವಂತಹ ಫಲಿತಾಂಶ ನೀಡಬೇಕು ಎಂದು ಸೂಚಿಸಿದರು.
ಡ್ರಗ್ಸ್ ದಂಧೆಯಲ್ಲಿ ಪೊಲೀಸರೇ ಶಾಮೀಲಾದರೆ ತಕ್ಕ ಶಾಸ್ತಿ:
ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಸರ್ಕಾರದ ಪ್ರಮುಖ ಗುರಿಯಾಗಿದೆ. ಆದರೆ, ಕೆಲವು ಪ್ರಕರಣಗಳಲ್ಲಿ ಪೊಲೀಸರೇ ಡ್ರಗ್ಸ್ ದಂಧೆಕೋರರೊಂದಿಗೆ ಶಾಮೀಲಾಗಿ ವಸೂಲಿಗೆ ಇಳಿಯುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಪ್ರವೃತ್ತಿಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಲಿದ್ದು, ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ರೌಡಿ ನಿಗ್ರಹಕ್ಕೆ ಪ್ರತ್ಯೇಕ ಕಮಿಷನರೇಟ್ & ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ:
ರೌಡಿ ದಳ: ರೌಡಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲು ಎಡಿಜಿಪಿ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ಪ್ರತ್ಯೇಕ ರೌಡಿ ನಿಗ್ರಹ ಕಮಿಷನರೇಟ್ ಸ್ಥಾಪಿಸಲಾಗಿದೆ. ರೌಡಿಗಳಲ್ಲಿ ಖಾಕಿಯ ಭಯವಿರಬೇಕು, ಜನಸಾಮಾನ್ಯರಿಗೆ ಪೊಲೀಸರು ಸ್ನೇಹಿಯಾಗಿರಬೇಕು ಎಂದರು.
ಫೇಕ್ ನ್ಯೂಸ್ ನಿಯಂತ್ರಣ: ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ದ್ವೇಷ ಭಾಷಣ ಹರಡಿ ಸಮಾಜದ ಶಾಂತಿ ಕದಡುವವರ ಮೇಲೆ ನಿರಂತರ ನಿಗಾ ಇರಿಸಿ ಕಠಿಣ ಕ್ರಮ ಕೈಗೊಳ್ಳಬೇಕು.
ಸೈಬರ್, ಆರ್ಥಿಕ ಅಪರಾಧಗಳಿಗೆ ಕಡಿವಾಣ: ಆನ್‌ಲೈನ್ ವಂಚನೆ ಹಾಗೂ ಆರ್ಥಿಕ ಅಪರಾಧಗಳನ್ನು ತಡೆಯಲು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕು. ಹಿರಿಯ ಅಧಿಕಾರಿಗಳು ನಿರಂತರವಾಗಿ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಹಾಗೂ ರಾತ್ರಿ ಗಸ್ತು ಹೆಚ್ಚಿಸಬೇಕು ಎಂದು ನಿರ್ದೇಶನ ನೀಡಿದರು.
ಜಾತಿ ಸಂಘರ್ಷಕ್ಕೆ ಪ್ರಚೋದನೆ ಬೇಡ:
ಇದೇ ವೇಳೆ ‘ಬಸವ ಮಂಟಪ’ ವಿವಾದದ ಕುರಿತು ಪ್ರತಿಕ್ರಿಯಿಸಿದ ಸಿಎಂ, ಬಸವಣ್ಣನವರ ಹೆಸರಿನಲ್ಲಿ ಜಾತಿ-ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಯಾರೂ ಮಾಡಬಾರದು. ಈ ಕುರಿತು ಈಗಾಗಲೇ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಸರ್ಕಾರ ಯಾವುದೇ ಸಮುದಾಯದ ವಿರುದ್ಧವೂ ನಡೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

