ಬೆಂಗಳೂರು : ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಗಳ ಉನ್ನತ ಶಿಕ್ಷಣ ಕನ್ನಡದಲ್ಲೇ ಲಭ್ಯವಾಗುವ ಕುರಿತು ಮತ್ತು ಅದರ ಪ್ರಾಯೋಗಿಕ ಉಪಯುಕ್ತತೆಯ ಬಗ್ಗೆ ಗಂಭೀರ ಹಾಗೂ ಸಕಾರಾತ್ಮಕ ಚಿಂತನೆ ನಡೆಯಬೇಕು. ಜೊತೆಗೆ, ಕನ್ನಡ ಮಾಧ್ಯಮದಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಉದ್ಯೋಗ ಹಾಗೂ ಬದುಕಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ನಗರದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ (BMCRI) ಸಭಾಂಗಣದಲ್ಲಿ ಶುಕ್ರವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಆಯೋಜಿಸಿದ್ದ ‘ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ – 2026’ ಉದ್ಘಾಟಿಸಿ ಅವರು ಮಾತನಾಡಿದರು.
ಬಹುತ್ವದ ನೆಲೆಯಲ್ಲಿ ಐತಿಹಾಸಿಕ ಹೆಜ್ಜೆ:
ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ವೈದ್ಯಕೀಯ ವಿಜ್ಞಾನ ಮತ್ತು ಕನ್ನಡ ಸಾಹಿತ್ಯವನ್ನು ಸಮನ್ವಯಗೊಳಿಸಿ, ಎಲ್ಲರನ್ನೂ ಒಳಗೊಳ್ಳುವ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಈ ಸಮ್ಮೇಳನ ಆಯೋಜಿಸಿರುವುದು ಶ್ಲಾಘನೀಯ. ವೈದ್ಯಕೀಯ ಜ್ಞಾನ ಜನಸಾಮಾನ್ಯರಿಗೆ ಅವರದೇ ಭಾಷೆಯಲ್ಲಿ ತಲುಪಿದಾಗ ಮಾತ್ರ ಆರೋಗ್ಯ ಸೇವೆ ಮತ್ತಷ್ಟು ಪರಿಣಾಮಕಾರಿಯಾಗಲು ಸಾಧ್ಯ. ವೈದ್ಯಕೀಯ ಸಾಹಿತ್ಯ ಕೇವಲ ರೋಗ-ರುಜಿನಗಳ ಚರ್ಚೆಗೆ ಸೀಮಿತವಾಗದೆ ಭಾಷೆ, ವಿಜ್ಞಾನ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಒಳಗೊಳ್ಳಬೇಕು ಎಂದರು.
ಕನ್ನಡ ಪಠ್ಯಪುಸ್ತಕ ರಚನೆಗೆ ವಿವಿ ಬದ್ಧ – ಕುಲಪತಿ ಡಾ. ಭಗವಾನ್ ಬಿ.ಸಿ.:
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜೀವ್ ಗಾಂಧಿ ಆರೋಗ್ಯ ವಿವಿಯ ಕುಲಪತಿ ಡಾ. ಭಗವಾನ್ ಬಿ.ಸಿ., “ಈ ಸಮ್ಮೇಳನ ಕೇವಲ ಎರಡು ದಿನಗಳ ವೇದಿಕೆಯ ಘೋಷಣೆಗಳಿಗೆ ಸೀಮಿತವಾಗಬಾರದು. ಇಲ್ಲಿ ಮೂಡಿಬರುವ ನಿರ್ಣಯಗಳನ್ನು ಕ್ರೋಢೀಕರಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ಕನ್ನಡದಲ್ಲಿ ವೈದ್ಯಕೀಯ ಪಠ್ಯಪುಸ್ತಕಗಳ ರಚನೆ, ತಾಂತ್ರಿಕ ಪದಕೋಶ ಅಭಿವೃದ್ಧಿ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸಲು ವಿಶ್ವವಿದ್ಯಾಲಯ ಸಂಪೂರ್ಣ ಬದ್ಧವಾಗಿದೆ” ಎಂದು ತಿಳಿಸಿದರು.
ವೈದ್ಯಕೀಯ ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಆಗ್ರಹ – ಡಾ. ಎಸ್.ಪಿ. ಯೋಗಣ್ಣ:
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಡಾ. ಎಸ್.ಪಿ. ಯೋಗಣ್ಣ ಮಾತನಾಡಿ, ದೇಶದ ಸುಮಾರು 30 ಆರೋಗ್ಯ ವಿಶ್ವವಿದ್ಯಾಲಯಗಳ ಪೈಕಿ ಪ್ರಾದೇಶಿಕ ಭಾಷೆಯಲ್ಲಿ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವ ಮೊದಲ ವಿವಿ ಎಂಬ ಹೆಗ್ಗಳಿಕೆಗೆ ಆರ್ಜಿಯುಎಚ್ಎಸ್ ಪಾತ್ರವಾಗಿದೆ ಎಂದರು. ಇದೇ ವೇಳೆ ಸರ್ಕಾರದ ಮುಂದೆ ಪ್ರಮುಖ ಬೇಡಿಕೆಗಳನ್ನು ಇರಿಸಿದರು:
ಕನ್ನಡ ವೈದ್ಯವಿಜ್ಞಾನ ಸಾಹಿತ್ಯದ ಬೆಳವಣಿಗೆಗೆ ಪ್ರತ್ಯೇಕ ‘ಕನ್ನಡ ವೈದ್ಯಕೀಯ ಸಾಹಿತ್ಯ ಅಕಾಡೆಮಿ’ ಸ್ಥಾಪಿಸಬೇಕು.
ಪ್ರತಿವರ್ಷ ನವೆಂಬರ್ನಲ್ಲಿ ಈ ಸಮ್ಮೇಳನ ನಡೆಸಲು ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಬೇಕು.
ವೈದ್ಯಕೀಯ, ದಂತವೈದ್ಯಕೀಯ, ಶುಶ್ರೂಷಕ ಹಾಗೂ ಆಯುಷ್ ವಿಜ್ಞಾನಗಳ ಇಂಗ್ಲಿಷ್ ಪಠ್ಯಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ ರಚಿಸಬೇಕು.
ವೈದ್ಯಕೀಯ ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಪ್ರತಿವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಹಾಗೂ ವಿವಿಯ ಸೆನೆಟ್-ಸಿಂಡಿಕೇಟ್ಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು.
ಕೃತಿಗಳ ಲೋಕಾರ್ಪಣೆ:
ಇದೇ ಸಂದರ್ಭದಲ್ಲಿ ಡಾ. ಎಸ್.ಪಿ. ಯೋಗಣ್ಣ ರಚಿಸಿರುವ ಮೂರು ಸಂಪುಟಗಳ ಬೃಹತ್ ‘ಆರೋಗ್ಯ ವಿಶ್ವಕೋಶ’ ಮತ್ತು ‘ಕನ್ನಡ ವೈದ್ಯಕೀಯ ಪದಕೋಶ’ವನ್ನು ಬಿಡುಗಡೆಗೊಳಿಸಲಾಯಿತು ಹಾಗೂ ವೈದ್ಯ ಸಾಹಿತಿಗಳ ಕೃತಿಗಳ ಪುಸ್ತಕ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.
ಸಮಾರಂಭದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮುಹಸಿನ್, ವಿಶ್ರಾಂತ ಕುಲಪತಿಗಳಾದ ಡಾ. ಚಂದ್ರಶೇಖರ ಶೆಟ್ಟಿ, ಡಾ. ಜಿ.ಕೆ. ವೆಂಕಟೇಶ್, ಡಾ. ಎಸ್. ಸಚ್ಚಿದಾನಂದ, ಕುಲಸಚಿವ ಅರ್ಜುನ್ ಒಡೆಯರ್, ಮೌಲ್ಯಮಾಪನ ಕುಲಸಚಿವ ಡಾ. ಸಂದೀಪ್ ವಿ.ಎಚ್., ಹಣಕಾಸು ಅಧಿಕಾರಿ ಗಂಗಾಧರ ಬಿ.ಕೆ., ಸಂಘಟನಾ ಕಾರ್ಯದರ್ಶಿ ಡಾ. ಆರ್.ಕೆ. ಸರೋಜ ಹಾಗೂ ಬಿಎಂಸಿಆರ್ಐ ಡೀನ್ ಡಾ. ಸಿ. ಸವಿತಾ ಉಪಸ್ಥಿತರಿದ್ದರು.

