Fri. Jun 5th, 2026

ಸಂವಾದಕ್ಕೆ ಬನ್ನಿ ಇಲ್ಲವೇ ರಾಜಕೀಯ ನಿವೃತ್ತಿ ಪಡೆಯಿರಿ:ಸಿದ್ದರಾಮಯ್ಯ ಅವರಿಗೆ ಛಲವಾದಿ ನಾರಾಯಣಸ್ವಾಮಿ ಬಹಿರಂಗ ಸವಾಲು

Share this with Friends

ಬಾಗಲಕೋಟೆ: ರಾಜ್ಯದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿರುವ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕಿದ್ದಾರೆ.

ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ದೀನದಲಿತರ ಪರವಾಗಿ ನಾವು ಎತ್ತಿರುವ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಸಮರ್ಪಕ ಉತ್ತರ ನೀಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಒಂದು ವೇಳೆ ಅವರು ಉತ್ತರ ನೀಡಲು ವಿಫಲರಾದರೆ ಅವರೇ ಶರಣಾಗಿ ರಾಜಕೀಯದಿಂದ ನಿವೃತ್ತಿ ಹೊಂದಲಿ” ಎಂದು ಗುಡುಗಿದ್ದಾರೆ.

ಅಭಿವೃದ್ಧಿ ಶೂನ್ಯ ಸರ್ಕಾರ:

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ರಾಜ್ಯವು ಅಭಿವೃದ್ಧಿ ಶೂನ್ಯವಾಗಿದೆ. ದೇಶವೇ ಪ್ರಧಾನಿ ಮೋದಿಯವರ ಕಾರ್ಯವೈಖರಿಯನ್ನು ಮೆಚ್ಚಿ ಕೊಂಡಾಡುತ್ತಿದ್ದರೆ, ಕಾಂಗ್ರೆಸ್‌ನವರು ಮಾತ್ರ ‘ಸರೆಂಡರ್ ಮೋದಿ’ ಎಂದು ಟೀಕಿಸುತ್ತಿರುವುದು ಅವರ ಅಜ್ಞಾನಕ್ಕೆ ಸಾಕ್ಷಿ. ಮೋದಿಯವರು ‘ಧುರಂದರ್ ಮೋದಿ’ಯಾಗಿದ್ದು, ಕಷ್ಟಕಾಲದಲ್ಲೂ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಒಂದು ವೇಳೆ ದೇಶದಲ್ಲಿ ಕಾಂಗ್ರೆಸ್ ಆಡಳಿತವೇ ಮುಂದುವರಿದಿದ್ದರೆ ಭಾರತವು ಪಾಕಿಸ್ತಾನದಂತೆ ಭಿಕ್ಷೆ ಬೇಡುವ ಸ್ಥಿತಿಗೆ ತಲುಪುತ್ತಿತ್ತು ಎಂದು ಮಾರ್ಮಿಕವಾಗಿ ಟೀಕಿಸಿದರು.

ಗ್ಯಾರಂಟಿ ನಿಲ್ಲಿಸುವ ಬೆದರಿಕೆ:

ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಕುರಿತು ‘ಧಮ್ಕಿ ರಾಜಕೀಯ’ ಮಾಡುತ್ತಿದ್ದಾರೆ. ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ಯೋಜನೆಗಳನ್ನು ಕೇವಲ ಆ ಎರಡು ಕ್ಷೇತ್ರಗಳಿಗೆ ನಿಲ್ಲಿಸುವಿರಾ ಅಥವಾ ಇಡೀ ರಾಜ್ಯಕ್ಕೆ ನಿಲ್ಲಿಸುವಿರಾ? ಎಂದು ಅವರು ಪ್ರಶ್ನಿಸಿದರು. ಅಧಿಕಾರ ಕಳೆದುಕೊಳ್ಳುವ ಹಾಗೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಭೀತಿಯಿಂದ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿದ್ದಾರೆ ಎಂದು ಅವರು ಲೇವಡಿ ಮಾಡಿದರು.

ಎಸ್‌ಸಿ-ಎಸ್‌ಟಿ ನಿಧಿಯ ದುರುಪಯೋಗ:

“ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಅಡಿ 42 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದಾಗಿ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ಅದರಲ್ಲಿ 21 ಸಾವಿರ ಕೋಟಿ ರೂ.ಗಳನ್ನು ಬೇರೆ ಇಲಾಖೆಗಳಿಗೆ ವರ್ಗಾಯಿಸಲಾಗಿದೆ. ಉಳಿದ ಹಣದಲ್ಲಿ 14 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ. ಕೇವಲ 7 ಸಾವಿರ ಕೋಟಿ ರೂ.ಗಳನ್ನು ಮಾತ್ರ ಸಮಾಜ ಕಲ್ಯಾಣ ಇಲಾಖೆಗೆ ನೀಡಲಾಗಿದ್ದು, ಇದೊಂದು ಬೋಗಸ್ ಲೆಕ್ಕಾಚಾರ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಸಂವಿಧಾನ ದಿನಾಚರಣೆಯಂತಹ ಕಾರ್ಯಕ್ರಮಗಳಿಗೆ ಬಳಸಿ ವಂಚಿಸಲಾಗುತ್ತಿದೆ” ಎಂದು ಕಿಡಿಕಾರಿದರು.

ಆಡಳಿತ ಯಂತ್ರದ ದುರುಪಯೋಗ:

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಚುನಾವಣೆ ಗೆಲ್ಲಲು ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಶಿಕ್ಷಕರು ಮತ್ತು ಇತರ ಇಲಾಖೆಯ ಸಿಬ್ಬಂದಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಲಾಗುತ್ತಿದೆ ಎಂದು ಅವರು ದೂರಿದರು. ಅಲ್ಲದೆ, ರಾಜ್ಯದಲ್ಲಿ ಸುಮಾರು 4 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ, ಖಜಾನೆ ಖಾಲಿಯಾಗಿರುವ ಕಾರಣ ಸರ್ಕಾರ ನೇಮಕಾತಿ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದರು.

ಸೌಲಭ್ಯ ವಂಚಿತ ಸಿಬ್ಬಂದಿ:

ಆಶ್ವಾಸನೆ ನೀಡಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಿಸಿಲ್ಲ. ಆಸ್ಪತ್ರೆಗಳ ಪ್ಯಾರಾ ಮೆಡಿಕಲ್ ಸಿಬ್ಬಂದಿ ಸೌಲಭ್ಯಗಳಿಗಾಗಿ ಇನ್ನೂ ಹೋರಾಟ ಮಾಡುತ್ತಲೇ ಇದ್ದಾರೆ. ದಲಿತ ನಿಗಮಗಳಿಗೆ ಘೋಷಿಸಿದ 500 ಕೋಟಿ ರೂ.ಗಳಲ್ಲಿ 200 ಕೋಟಿ ಕೂಡ ಬಿಡುಗಡೆಯಾಗಿಲ್ಲ. ಇದರಿಂದಾಗಿ ಫಲಾನುಭವಿಗಳು ಕಂಗಾಲಾಗಿದ್ದಾರೆ ಎಂದರು.

ಒಳ ಮೀಸಲಾತಿಯಲ್ಲಿ ರಾಜಕೀಯ:

ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರ ಸಮುದಾಯಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ. ದಾವಣಗೆರೆ ದಕ್ಷಿಣದಲ್ಲಿ ಒಂದೇ ಕುಟುಂಬಕ್ಕೆ ಅಧಿಕಾರ ಸೀಮಿತವಾಗಿದೆ. ಇದರಿಂದ ಬೇಸತ್ತಿರುವ ಮುಸ್ಲಿಂ ಮತ್ತು ದಲಿತ ಸಮುದಾಯದವರು ಈ ಬಾರಿ ಕಾಂಗ್ರೆಸ್ ಸೋಲಿಸಲು ಶಪಥ ಮಾಡಿದ್ದಾರೆ. ಬಿಜೆಪಿ ಯಾವಾಗಲೂ ಅಂಬೇಡ್ಕರ್ ಅವರ ತತ್ವಗಳಿಗೆ ಗೌರವ ನೀಡುತ್ತದೆ ಮತ್ತು ದಲಿತರ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

 


Share this with Friends

Related Post