ಬೆಂಗಳೂರು: ಕೋಟ್ಯಂತರ ಭಕ್ತರ ಶ್ರದ್ಧಾಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಅಪಪ್ರಚಾರದ ತನಿಖೆಯನ್ನು ತಕ್ಷಣವೇ ಸಿಬಿಐಗೆ (CBI) ವಹಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಅವರು ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಧರ್ಮಸ್ಥಳವನ್ನು ಗುರಿಯಾಗಿಸಿಕೊಂಡು ಸುಮಾರು 200 ಕೋಟಿ ರೂಪಾಯಿ ವೆಚ್ಚದ ಸಂಘಟಿತ ಷಡ್ಯಂತ್ರ ನಡೆದಿದೆ ಎಂಬ ಆರೋಪಗಳು ಇತ್ತೀಚೆಗೆ ಮುಂಚೂಣಿಗೆ ಬಂದಿರುವ ಹಿನ್ನೆಲೆಯಲ್ಲಿ ಈ ಗಂಭೀರ ಆಗ್ರಹ ಕೇಳಿಬಂದಿದೆ.
ಅಂತಾರಾಷ್ಟ್ರೀಯ ಹುನ್ನಾರದ ಶಂಕೆ
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಸಿ.ಟಿ. ರವಿ, “ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಇತ್ತೀಚೆಗೆ ಮಾಧ್ಯಮಗಳಲ್ಲಿ ಮುನ್ನೆಲೆಗೆ ಬಂದಿರುವ 200 ಕೋಟಿ ರೂಪಾಯಿ ವೆಚ್ಚದ ಸಂಘಟಿತ ಪಿತೂರಿಯ ಆರೋಪ ಅತ್ಯಂತ ಗಂಭೀರ ಹಾಗೂ ಆತಂಕಕಾರಿಯಾಗಿದೆ. ಈ ಇಡೀ ಪ್ರಕರಣದ ಹಣದ ಮೂಲ, ಇದರ ಹಿಂದೆ ಕೆಲಸ ಮಾಡಿರುವ ದೇಶ-ವಿದೇಶಗಳ ಶಕ್ತಿಗಳು ಮತ್ತು ವ್ಯವಸ್ಥಿತ ಜಾಲದ ಸಂಪೂರ್ಣ ಸತ್ಯವನ್ನು ಬಯಲಿಗೆಳೆಯಲು ಪ್ರಕರಣವನ್ನು ತಕ್ಷಣವೇ ಕೇಂದ್ರ ತನಿಖಾ ದಳಕ್ಕೆ (CBI) ವಹಿಸಬೇಕು” ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಸನಾತನ ಧರ್ಮ ಧ್ವಂಸಗೊಳಿಸುವ ಯತ್ನ
ಇದು ಕೇವಲ ಒಂದು ನಿರ್ದಿಷ್ಟ ಕ್ಷೇತ್ರದ ಮೇಲಿನ ಆರೋಪವಲ್ಲ ಎಂದು ಆತಂಕ ವ್ಯಕ್ತಪಡಿಸಿರುವ ಅವರು, ಸನಾತನ ಧರ್ಮದ ಪ್ರಮುಖ ಶ್ರದ್ಧಾಕೇಂದ್ರಗಳನ್ನು ಗುರಿಯಾಗಿಸಿಕೊಂಡು, ಜನರ ನಂಬಿಕೆಯನ್ನು ಧ್ವಂಸಗೊಳಿಸಲು ನಡೆದಿರುವ ಅಂತಾರಾಜ್ಯ ಮಟ್ಟದ ದೊಡ್ಡ ಹುನ್ನಾರ ಇದಾಗಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ವ್ಯಾಪ್ತಿ ದೊಡ್ಡದಿರುವುದರಿಂದ ರಾಜ್ಯ ಪೊಲೀಸರ ತನಿಖೆಯ ವ್ಯಾಪ್ತಿಯನ್ನು ಇದು ಮೀರಿದೆ. ಹೀಗಾಗಿ ಸಿಬಿಐ ತನಿಖೆಯೊಂದೇ ಇದಕ್ಕೆ ಸೂಕ್ತ ತಾರ್ಕಿಕ ಅಂತ್ಯ ನೀಡಬಲ್ಲದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಣದ ಮೂಲ ಬಹಿರಂಗವಾಗಲಿ
ಧರ್ಮಸ್ಥಳದ ವಿರುದ್ಧ ಡಿಜಿಟಲ್ ಲೋಕದಲ್ಲಿ ಅಪಪ್ರಚಾರ ಮಾಡಲು ಯೂಟ್ಯೂಬರ್‌ಗಳು ಮತ್ತು ಪ್ರಭಾವಿ ವ್ಯಕ್ತಿಗಳನ್ನು (Influencers) ಬಳಸಿಕೊಳ್ಳಲಾಗಿದೆ. ಇವರಿಗಾಗಿ ಹರಿದುಬಂದಿರುವ ನೂರಾರು ಕೋಟಿ ರೂಪಾಯಿ ಹಣದ ಮೂಲ ಯಾವುದು ಮತ್ತು ಈ ಪಿತೂರಿಯ ಸೂತ್ರಧಾರಿಗಳು ಯಾರು ಎಂಬ ಸತ್ಯಾಂಶ ಕೋಟ್ಯಂತರ ಭಕ್ತರಿಗೆ ಹಾಗೂ ರಾಜ್ಯದ ಜನತೆಗೆ ತಿಳಿಯಲೇಬೇಕು ಎಂದು ಸಿ.ಟಿ. ರವಿ ಅವರು ತಮ್ಮ ಬಹಿರಂಗ ಪತ್ರದ ಮೂಲಕ ಸರ್ಕಾರವನ್ನು ಬಲವಾಗಿ ಒತ್ತಾಯಿಸಿದ್ದಾರೆ.

