ಮಂಡ್ಯ: ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ವೇದಿಕೆ ಸಿದ್ಧವಾಗಿದ್ದು, ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಒಟ್ಟು ₹1,793.74 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಲಾಗಿದೆ.
ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಿದ್ದ ಮಂಡ್ಯ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ಸರ್ಕಾರ ಸವಲತ್ತು ವಿತರಣಾ ಸಮಾರಂಭ ಕಾರ್ಯಕ್ರಮ ವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು, ಪಂಚ ಗ್ಯಾರಂಟಿ ಯೋಜನೆಗಳನ್ನು ಪ್ರತಿನಿಧಿಸುವ ಐದು ದೀಪಗಳನ್ನು ಬೆಳಗಿಸಿದರು. ಬಳಿಕ ಹೊಂಬಾಳೆ ನೆಟ್ಟು, ಬೆಲ್ಲ ಹಾಗೂ ಕೊಬ್ಬರಿ ಸೇವಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕವಾಗಿ ಚಾಲನೆ ನೀಡಿದರು.ನಂತರ ರಿಮೋಟ್ ಬಟನ್ ಒತ್ತುವ ಮೂಲಕ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಪೂರ್ಣಗೊಂಡ ಕಾಮಗಾರಿಗಳನ್ನು ಉದ್ಘಾಟಿಸಿದರು
ರೈತರ ಹಿತ ಕಾಯಲು ಸರ್ಕಾರ ಬದ್ಧ:
ಸಮಾರಂಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಮಂಡ್ಯ ಜಿಲ್ಲೆಯು ರಾಜ್ಯದ ಅನ್ನದ ತಟ್ಟೆಯಾಗಿದ್ದು, ಇಲ್ಲಿನ ಕೃಷಿ ವಲಯದ ಪ್ರಗತಿಗೆ ಸರ್ಕಾರ ನಿರಂತರವಾಗಿ ಶ್ರಮಿಸಲಿದೆ ಎಂದರು. ಪಶು ಆಹಾರ ಮತ್ತು ಔಷಧಿಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಹಾಲಿನ ದರ ಹೆಚ್ಚಳ ಮಾಡಲಾಗಿದ್ದು, ಇದರಿಂದ ಪ್ರತಿ ಲೀಟರ್ಗೆ ₹7 ಹೆಚ್ಚುವರಿ ಹಣ ನೇರವಾಗಿ ರೈತರಿಗೆ ದೊರೆಯಲಿದೆ ಎಂದು ಅವರು ಸಮರ್ಥಿಸಿಕೊಂಡರು. ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರದಿಂದ ₹50 ಹಾಗೂ ಸಕ್ಕರೆ ಕಾರ್ಖಾನೆಗಳಿಂದ ₹150 ಹೆಚ್ಚುವರಿ ಹಣ ನೀಡಲು ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರವು ಸಕ್ಕರೆ ದರವನ್ನು ₹50ಕ್ಕೆ ನಿಗದಿಪಡಿಸಿದರೆ ರೈತರಿಗೆ ಮತ್ತಷ್ಟು ಸೂಕ್ತ ಬೆಲೆ ಒದಗಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊರುವುದಾಗಿ ಅವರು ಪ್ರಕಟಿಸಿದರು.
ಮೇಕೆದಾಟು ಯೋಜನೆ ಹಾಗೂ ನೀರಾವರಿ ಮೂಲಸೌಕರ್ಯ:
66 ಟಿಎಂಸಿ ನೀರಿನ ಸೌಲಭ್ಯ: ಮೇಕೆದಾಟು ಸಮತೋಲನಾ ಜಲಾಶಯ ಯೋಜನೆ ಅನುಷ್ಠಾನಗೊಂಡರೆ ಸಂಕಷ್ಟದ ಸಂದರ್ಭದಲ್ಲಿ ಮಂಡ್ಯ, ಮೈಸೂರು ಸೇರಿದಂತೆ ಹಳೆ ಮೈಸೂರು ಭಾಗಕ್ಕೆ 66 ಟಿಎಂಸಿ ನೀರು ಬಳಕೆಗೆ ದೊರೆಯಲಿದ್ದು, ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಲಾಯಿತು.
ನಾಲೆಗಳ ಆಧುನೀಕರಣ: ಪಾಂಡವಪುರ, ನಾಗಮಂಗಲ ಹಾಗೂ ಕೆ.ಆರ್. ಪೇಟೆ ಭಾಗಗಳಲ್ಲಿ ಕೆರೆಗಳನ್ನು ತುಂಬಿಸಲು ಮತ್ತು ಕಾಲುವೆಗಳ ದುರಸ್ತಿಗಾಗಿ ₹806 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಭಾಗದ ಕಾಲುವೆಗಳ ಆಧುನೀಕರಣಕ್ಕೆ ₹224 ಕೋಟಿ ಒದಗಿಸಲಾಗಿದೆ.
ಆರೋಗ್ಯ, ಶಿಕ್ಷಣ ಹಾಗೂ ಕೈಗಾರಿಕಾ ವಲಯಕ್ಕೆ ಬೂಸ್ಟರ್ ಡೋಸ್:
ಜಿಲ್ಲೆಯ ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಜಯದೇವ ಹೃದ್ರೋಗ ಆಸ್ಪತ್ರೆಯ ಮಾದರಿಯಲ್ಲಿ 100 ಹಾಸಿಗೆಗಳ ಪ್ರತ್ಯೇಕ ಆಸ್ಪತ್ರೆ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೊಸೂರು ಕಾಲೋನಿಯಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಸಿದ್ಧವಾಗಿದೆ. ಕೃಷಿ ವಿಶ್ವವಿದ್ಯಾಲಯಕ್ಕೆ ₹100 ಕೋಟಿ ಅನುದಾನ ಹಾಗೂ ಐತಿಹಾಸಿಕ ಮೈಷುಗರ್ ಕಾರ್ಖಾನೆಯ ಬಾಯ್ಲಿಂಗ್ ಹೌಸ್ ನವೀಕರಣಕ್ಕೆ ₹60 ಕೋಟಿ ಮೊತ್ತದ ಕಾಮಗಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಂಡ್ಯ ಹಾಲು ಒಕ್ಕೂಟದಲ್ಲಿ ಹೆಚ್ಚುವರಿ ಹಾಲು ವ್ಯರ್ಥವಾಗುವುದನ್ನು ತಪ್ಪಿಸಲು ನಂದಿನಿ ಐಸ್ಕ್ರೀಮ್ ಘಟಕ ಸ್ಥಾಪನೆಗೆ ಶೀಘ್ರವೇ ಒಪ್ಪಿಗೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಮಾತನಾಡಿ, ಕಳೆದ ಒಂದೂವರೆ ವರ್ಷದಲ್ಲಿ ಮಂಡ್ಯ ಜಿಲ್ಲೆಗೆ ₹10 ಸಾವಿರ ಕೋಟಿಗೂ ಅಧಿಕ ಅಭಿವೃದ್ಧಿ ಅನುದಾನ ನೀಡಲಾಗಿದ್ದು, ಗ್ಯಾರಂಟಿ ಯೋಜನೆಗಳ ಜೊತೆಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ ಎಂದು ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದರು.

