Sat. Oct 31st, 2026

ಬೆಂಗಳೂರಿನ ನಗರಾಭಿವೃದ್ಧಿಗೆ ವಿದ್ಯಾರ್ಥಿಗಳಿಂದ ಯೋಜನೆಗಳ ಆಹ್ವಾನ: ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಹೊಸ ಉಪಕ್ರಮ

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯ ನಗರಾಭಿವೃದ್ಧಿ ಸವಾಲುಗಳಿಗೆ ನೂತನ ಹಾಗೂ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ದೇಶಾದ್ಯಂತದ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ವಿದ್ಯಾರ್ಥಿಗಳ ‘ಸ್ಟುಡಿಯೋ ಪ್ರಾಜೆಕ್ಟ್’ಗಳನ್ನು ಆಹ್ವಾನಿಸಿದೆ. ಅಕಾಡೆಮಿಕ್ ಸಂಶೋಧನೆಗಳು ಮತ್ತು ನಗರದ ಪ್ರಾಯೋಗಿಕ ಆಡಳಿತದ ನಡುವೆ ಉತ್ತಮ ಕೊಂಡಿ ಬೆಸೆಯಲು ಈ ವಿಶಿಷ್ಟ ಉಪಕ್ರಮವನ್ನು ಕೈಗೊಳ್ಳಲಾಗಿದೆ.

ಆಯ್ದ ಅತ್ಯುತ್ತಮ ಯೋಜನೆಗಳನ್ನು ಜಿಬಿಎ ತಾಂತ್ರಿಕ ಸಮಿತಿಯು ಪರಿಶೀಲಿಸಲಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಸ್ತುತಪಡಿಸಲು ಅವಕಾಶ ನೀಡಲಾಗುತ್ತದೆ. ಅರ್ಹ ಯೋಜನೆಗಳನ್ನು ಬೆಂಗಳೂರಿನ ನೈಜ ಅಭಿವೃದ್ಧಿಗೆ ಬಳಸಿಕೊಳ್ಳುವ ಸಾಧ್ಯತೆಗಳೂ ಇವೆ.

ಯಾವ ವಿಷಯಗಳಿಗೆ ಆದ್ಯತೆ?

GBA ಅರ್ಬನ್ ಡಿಸೈನ್ ಸೆಲ್ ಈ ಕೆಳಗಿನ ಪ್ರಮುಖ ವಲಯಗಳ ಯೋಜನೆಗಳಿಗೆ ಆದ್ಯತೆ ನೀಡಿದೆ:

ಸಾರಿಗೆ ಮತ್ತು ರಸ್ತೆ ಮೂಲಸೌಕರ್ಯ: ಪಾದಚಾರಿ ಮತ್ತು ಸೈಕ್ಲಿಂಗ್ ಸೌಲಭ್ಯ, ಜಂಕ್ಷನ್‌ಗಳ ಸುಧಾರಣೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಣ.

ಪರಿಸರ ಮತ್ತು ಕೆರೆಗಳ ಪುನಶ್ಚೇತನ: ಹವಾಮಾನ ಬದಲಾವಣೆ ತಡೆಗಟ್ಟುವಿಕೆ, ಪರಿಸರ ಸ್ನೇಹಿ ನಗರಾಭಿವೃದ್ಧಿ ಮತ್ತು ಜಲಮೂಲಗಳ ರಕ್ಷಣೆ.

ಟ್ರಾನ್ಸಿಟ್-ಓರಿಯೆಂಟೆಡ್ ಡೆವಲಪ್ಮೆಂಟ್ (TOD): ನಮ್ಮ ಮೆಟ್ರೋ ಅಥವಾ ರೈಲ್ವೆ ನಿಲ್ದಾಣಗಳ ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಅಭಿವೃದ್ಧಿ.

ಸ್ಥಳೀಯ ಪ್ರದೇಶದ ಯೋಜನೆಗಳು: ವಾರ್ಡ್ ಅಥವಾ ಬಡಾವಣೆಗಳ ಮಟ್ಟದಲ್ಲಿ ವಾಕಿಂಗ್ ಸೌಲಭ್ಯ ಹಾಗೂ ಸಾರ್ವಜನಿಕ ಸ್ಥಳಗಳ (ಉದ್ಯಾನವನ, ಮಾರುಕಟ್ಟೆ) ನವೀಕರಣ.

ಸಲ್ಲಿಕೆಯ ನಿಯಮಗಳು ಮತ್ತು ಕೊನೆಯ ದಿನಾಂಕ:

ವಿಶಿಷ್ಟ ಫಾರ್ಮ್ಯಾಟ್: ವಿದ್ಯಾರ್ಥಿಗಳು ತಮ್ಮ ಇಡೀ ಯೋಜನೆಯನ್ನು ನಿಗದಿಪಡಿಸಿದ 12 ಪ್ರಮುಖ ಸ್ಲೈಡ್‌ಗಳ (Slides) ಒಂದೇ ಪ್ರೆಸೆಂಟೇಶನ್‌ನಲ್ಲಿ ಸಿದ್ಧಪಡಿಸಬೇಕು.

ಕಡತದ ಗಾತ್ರ: ಸಲ್ಲಿಕೆ ಮಾಡುವ ಫೈಲ್‌ನ ಗಾತ್ರವು 50 MB ಗಿಂತ ಕಡಿಮೆ ಇರಬೇಕು.

ಇಮೇಲ್ ಐಡಿ: ಪ್ರಾಜೆಕ್ಟ್‌ಗಳನ್ನು cepacgba2025@gmail.com ಅಥವಾ gbaurbandesigncell@gmail.com ಗೆ ಕಳುಹಿಸಬಹುದು.

ಕೊನೆಯ ದಿನಾಂಕ: ಅರ್ಜಿ ಸಲ್ಲಿಸಲು 2027ರ ಜನವರಿ 15 ಕೊನೆಯ ದಿನವಾಗಿದೆ.

 

 


Share this with Friends

Related Post