Sun. Jul 12th, 2026

ತಿರುಪತಿಯ ಮೊದಲ ಆರತಿ ಇನ್ಮುಂದೆ ಕರ್ನಾಟಕದ ಗಣ್ಯರಿಗೆ: ರಾಜ್ಯ ಸರ್ಕಾರದಿಂದ ಶೀಘ್ರವೇ ಹೊಸ ಆದೇಶ

Share this with Friends

ಬೆಂಗಳೂರು: “ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರತಿದಿನ ನಡೆಯುವ ಅತ್ಯಂತ ಪವಿತ್ರವಾದ ಮೊದಲ ಆರತಿಯನ್ನು ಕರ್ನಾಟಕದ ಸಚಿವರು, ಶಾಸಕರು, ನ್ಯಾಯಾಧೀಶರು ಹಾಗೂ ಹಿರಿಯ ಅಧಿಕಾರಿಗಳಿಗೆ ಶಿಷ್ಟಾಚಾರದ ಪ್ರಕಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಹೊಸ ಆದೇಶ ಹೊರಡಿಸಲಾಗುವುದು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ.

ಬೆಂಗಳೂರಿನ ಬನಶಂಕರಿ 6ನೇ ಹಂತದ ಲಿಂಗಧೀರನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಷಣ್ಮುಖ ಸುಬ್ರಮಣ್ಯ ದೇವಸ್ಥಾನದ ಶೀಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಭಾನುವಾರ ಅವರು ಮಾತನಾಡಿದರು.

ವಿಶೇಷ ಅಧಿಕಾರಿಗೆ ಸಿಗುತ್ತಿದ್ದ ಆರತಿ:

ತಿರುಪತಿ ಮಂದಿರದ ನಿಯಮಾವಳಿಗಳನ್ನು ವಿವರಿಸಿದ ಡಿ.ಕೆ. ಶಿವಕುಮಾರ್, “ತಿರುಮಲ ವೆಂಕಟೇಶ್ವರ ದೇಗುಲದ ಒಳ ಮುಖ್ಯದ್ವಾರದ ಬಳಿ ತೆರಳಿ ಪೂಜೆ ಸಲ್ಲಿಸಲು ರಾಜ್ಯದ ಮುಖ್ಯಮಂತ್ರಿಗಳಿಗೆ ಮಾತ್ರ ವಿಶೇಷ ಅವಕಾಶವಿರುತ್ತದೆ. ಈ ಪವಿತ್ರ ಮೊದಲ ಆರತಿಯನ್ನು ಪ್ರತಿದಿನ ಕರ್ನಾಟಕ ಸರ್ಕಾರದ ಪರವಾಗಿ ಅಲ್ಲಿ ನಿಯೋಜನೆಗೊಂಡಿರುವ ವಿಶೇಷ ಅಧಿಕಾರಿ ಪಡೆಯುತ್ತಾರೆ. ಆದರೆ, ಇನ್ನು ಮುಂದೆ ರಾಜ್ಯದ ಪರವಾಗಿ ತಿರುಪತಿಗೆ ಭೇಟಿ ನೀಡುವ ಜನಪ್ರತಿನಿಧಿಗಳು ಮತ್ತು ಗಣ್ಯರಿಗೂ ಈ ಆರತಿ ಸಿಗುವಂತೆ ಆದೇಶ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ತಿಳಿಸಿದರು.

ಪ್ರಾರ್ಥನೆಗೆ ಸಿಗಲಿದೆ ಮಹತ್ವದ ಅವಕಾಶ:

“ರಾಜ್ಯದ ಹಲವು ಶಾಸಕರು ಮತ್ತು ಜನಪ್ರತಿನಿಧಿಗಳು ತಿರುಪತಿಗೆ ಹೋದಾಗ ಸೂಕ್ತ ದರ್ಶನ ಸಿಗದೇ ವಾಪಸ್ ಬಂದಿರುವ ಉದಾಹರಣೆಗಳಿವೆ. ಆದರೆ ಇನ್ಮುಂದೆ ಅವರು ನೇರವಾಗಿ ದೇವರ ಸನ್ನಿಧಿಯಲ್ಲಿ ನಿಂತು ಆರತಿ ಪಡೆಯಲು ಮುಕ್ತ ಅವಕಾಶ ಕಲ್ಪಿಸಲಾಗುವುದು. ರಾಜ್ಯದ ಜನತೆಯ ಸೇವೆ ಮಾಡುವವರಿಗೆ ದೇವರಲ್ಲಿ ಪ್ರಾರ್ಥಿಸಲು ಈ ಸೌಲಭ್ಯ ಒದಗಿಸಲಾಗುತ್ತಿದ್ದು, ಇದು ನನ್ನ ಅಧಿಕಾರಾವಧಿಯ ಅತ್ಯಂತ ಮುಖ್ಯ ಘೋಷಣೆಯಾಗಿದೆ” ಎಂದು ಅವರು ಹೆಮ್ಮೆಯಿಂದ ನುಡಿದರು.

ಐತಿಹಾಸಿಕ ಜಾಗದ ನೆನಪು:

ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಅವರು, “ನಾನು ಜೈಲಿನಿಂದ ಬಿಡುಗಡೆಯಾಗಿ ಬಂದ ದಿನದಿಂದ ನನ್ನ ಮನೆದೇವರಾದ ತಿರುಪತಿ ವೆಂಕಟಪ್ಪನ ದರ್ಶನಕ್ಕೆ ಹೋಗಿರಲಿಲ್ಲ. ಇತ್ತೀಚೆಗೆ ಭೇಟಿ ನೀಡಿದಾಗ ಈ ಆಲೋಚನೆ ಬಂತು. ಹಿಂದೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ತಿರುಪತಿಯಲ್ಲಿ ‘ಕರ್ನಾಟಕ ಟ್ರಸ್ಟ್’ ರಚಿಸಿ ಭವ್ಯ ಕಟ್ಟಡ ನಿರ್ಮಿಸಲು ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ್ದರು. ಆದರೆ ಅಷ್ಟರಲ್ಲಿ ಸರ್ಕಾರದ ಅವಧಿ ಮುಗಿದಿದ್ದರಿಂದ ಆ ಕೆಲಸ ನೆನೆಗುದಿಗೆ ಬಿದ್ದಿತ್ತು. ಮೈಸೂರು ಮಹಾರಾಜರ ಕಾಲದಲ್ಲೇ ತಿರುಪತಿಯಲ್ಲಿ ಕರ್ನಾಟಕಕ್ಕೆ ನೀಡಲಾದ ಏಳು ಎಕರೆ ಐತಿಹಾಸಿಕ ಜಾಗ ಅಲ್ಲಿದೆ” ಎಂದು ಅವರು ಮಾಹಿತಿ ನೀಡಿದರು.

ಬಹಿರಂಗಪಡಿಸದ ರಹಸ್ಯ ಭವಿಷ್ಯ ಮತ್ತು 35 ವರ್ಷಗಳ ನಂಟು:

ದೇಗುಲದ ಉದ್ಘಾಟಕರಾದ ದ್ವಾರಕನಾಥ್ ಗುರೂಜಿ ಅವರನ್ನು ತಮಗೆ ಪೂಜ್ಯ ಗುರುಗಳು ಎಂದು ಸಂಬೋಧಿಸಿದ ಡಿ.ಕೆ. ಶಿವಕುಮಾರ್, “ದ್ವಾರಕನಾಥ್ ಅವರು ಹಿಂದೆ ನನ್ನ ಕುರಿತು ಒಂದು ಮಹತ್ವದ ಭವಿಷ್ಯ ನುಡಿದಿದ್ದರು. ಅದನ್ನು ನಾನಿಲ್ಲಿ ಬಹಿರಂಗಪಡಿಸಿದರೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸುದ್ದಿಯಾಗುತ್ತದೆ” ಎಂದು ತೀವ್ರ ಕುತೂಹಲ ಮೂಡಿಸಿದರು. ಕಳೆದ 35 ವರ್ಷಗಳಿಂದ ತಮಗೆ ಮಾರ್ಗದರ್ಶನ ನೀಡುತ್ತಿರುವ ಗುರೂಜಿ, ತಮಗೆ ರಾಜಕೀಯವಾಗಿ ಬೆಂಬಲ ನೀಡಿದ್ದಕ್ಕಾಗಿ ಎದುರಿಸಿದ ಟೀಕೆಗಳು ಮತ್ತು 25 ವರ್ಷಗಳಿಂದ ಬಂದ ಬೇರೆ ಬೇರೆ ಧಮ್ಕಿಗಳಿಗೆ (ಬೆದರಿಕೆಗಳು) ಎಂದಿಗೂ ಹೆದರದೆ ತಮ್ಮ ಬೆನ್ನಿಗೆ ನಿಂತಿದ್ದಾರೆ ಎಂದು ಶ್ಲಾಘಿಸಿದರು.

ಕ್ಯಾನ್ಸರ್ ಕಾಯಿಲೆ ಗುಣಪಡಿಸಿದ ಜಾತಕದ ಪವಾಡ:

ಗುರೂಜಿ ಅವರ ಜ್ಯೋತಿಷ್ಯದ ಶಕ್ತಿಯನ್ನು ವಿವರಿಸಿದ ಸಿಎಂ, “1993-94ರ ಅವಧಿಯಲ್ಲಿ ನನ್ನ ಸ್ನೇಹಿತರಾದ ಸುಬ್ರಹ್ಮಣ್ಯ ಅವರ ಪತ್ನಿ ತೀವ್ರ ಕ್ಯಾನ್ಸರ್ ಕಾಯಿಲೆಯಿಂದ ಬದುಕುವ ಸ್ಥಿತಿಯಲ್ಲಿರಲಿಲ್ಲ. ಆಗ ನಾನು ಮಕ್ಕಳ ಜಾತಕವನ್ನು ತಂದು ದ್ವಾರಕನಾಥ್ ಅವರಿಗೆ ತೋರಿಸಿದೆ. ಜಾತಕ ಪರಿಶೀಲಿಸಿದ ಅವರು, ಈ ಮಕ್ಕಳ ಜಾತಕದಲ್ಲಿ ತಾಯಿಯನ್ನು ಕಳೆದುಕೊಳ್ಳುವ ಯೋಗವಿಲ್ಲ ಎಂದರು. ಬಳಿಕ ಅವರ ಸೂಚನೆಯಂತೆ ಹೊಸದುರ್ಗದ ಬಳಿ ಇರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಹೋಮ ನೆರವೇರಿಸಿದೆವು. ಅಂದು ವೈದ್ಯಕೀಯವಾಗಿ ಆಶಾವಾದ ಕಳೆದುಕೊಂಡಿದ್ದ ಆ ಹೆಣ್ಣುಮಗಳು ಇಂದಿಗೂ ಸದಾ ಆರೋಗ್ಯವಾಗಿದ್ದಾರೆ” ಎಂದು ಜಾತಕದ ಪವಾಡದ ಕಥೆಯನ್ನು ನೆನಪಿಸಿಕೊಂಡರು.

ಕೊನೆಯಲ್ಲಿ, ಧರ್ಮ ಏವ ಹತೋ ಹಂತಿ… ಶ್ಲೋಕವನ್ನು ಸ್ಮರಿಸಿದ ಅವರು, ಧರ್ಮದ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಎಲ್ಲರೂ ಒಟ್ಟಾಗಿ ಕೈಜೋಡಿಸಿದಾಗ ಮಾತ್ರ ಸುಬ್ರಹ್ಮಣ್ಯ ಸ್ವಾಮಿಯ ಈ ಭವ್ಯ ದೇವಸ್ಥಾನ ಜನರ ದೇವಾಲಯವಾಗಿ ಮೂಡಿಬರಲು ಸಾಧ್ಯ ಎಂದು ಹಾರೈಸಿದರು.

 


Share this with Friends

Related Post