Mon. Jun 22nd, 2026

ಸಂಪುಟ ಇಕ್ಕಟ್ಟು: ಹೊಸಬರಿಗೆ ಅವಕಾಶ, ಹೈಕಮಾಂಡ್ ನಿರ್ಧಾರಕ್ಕೆ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

Share this with Friends

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ಆಕಾಂಕ್ಷಿಗಳಿಗೆ ಸ್ಥಾನ ನೀಡುವ ವಿಚಾರ ಕಾಂಗ್ರೆಸ್ ಹೈಕಮಾಂಡ್ ವಿವೇಚನೆಗೆ ಬಿಟ್ಟದ್ದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ವರಿಷ್ಠರು ನೀಡುವ ಪಟ್ಟಿಯನ್ನು ಜಾರಿಗೊಳಿಸುವುದು ಮಾತ್ರ ತಮ್ಮ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಉತ್ತರ ಕರ್ನಾಟಕದ 14 ಜಿಲ್ಲೆಗಳ ದರ್ಗಾಗಳ ಮುಖಸ್ಥರ ನಿಯೋಗ ಇಂದು ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ನಿಯೋಗದ ಬೇಡಿಕೆಯನ್ನು ಹೈಕಮಾಂಡ್ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ಸಿಎಂ, ಸಂಪುಟ ವಿಸ್ತರಣೆ ವೇಳೆ ಪಕ್ಷ ಎದುರಿಸುತ್ತಿರುವ ರಾಜಕೀಯ ಇಕ್ಕಟ್ಟುಗಳನ್ನು ಸುದೀರ್ಘವಾಗಿ ಹಂಚಿಕೊಂಡರು.

ಹೊಸ ಮುಖಗಳಿಗೆ ಆದ್ಯತೆಯ ಚಿಂತನೆ:

“ವಿಧಾನಸಭೆಯಲ್ಲಿ ನಮ್ಮ ಪಕ್ಷದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವುದರಿಂದ, ಪರಿಷತ್ ಸದಸ್ಯರಿಗೆ ಎಷ್ಟು ಪ್ರಮಾಣದಲ್ಲಿ ಮಂತ್ರಿ ಸ್ಥಾನ ನೀಡಬೇಕು ಎಂಬ ಗೊಂದಲವಿದೆ. ಐದಾರು ಬಾರಿ ಗೆದ್ದ ಹಿರಿಯರಿಗೂ ಅಧಿಕಾರ ನೀಡಲು ಸಾಧ್ಯವಾಗುತ್ತಿಲ್ಲ. ಮಾಜಿ ಸಿಎಂ ಬಂಗಾರಪ್ಪ ಅವರ ಕಾಲದಲ್ಲಿ ನಾನು, ಕೆ.ಜೆ. ಜಾರ್ಜ್, ಅಪ್ಪಾಜಿ ನಾಡಗೌಡ, ನಜೀರ್ ಅಹಮದ್ ಮೊದಲ ಬಾರಿಗೆ ಶಾಸಕರಾದಾಗಲೇ ಮಂತ್ರಿಗಳಾಗಿದ್ದೆವು. ಈಗಲೂ ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡಬೇಕು ಎಂಬ ಚಿಂತನೆ ಇದ್ದು, ದೆಹಲಿ ವರಿಷ್ಠರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಹಲವು ಇಕ್ಕಟ್ಟುಗಳಿದ್ದು, ಕಳೆದ ಬಾರಿ ಅವರೇ ಒತ್ತಾಯಿಸಿ ರಹೀಮ್ ಖಾನ್ ಅವರಿಗೆ ಮಂತ್ರಿ ಸ್ಥಾನ ಕೊಡಿಸಿದ್ದರು” ಎಂದು ಸಿಎಂ ಹಳೆಯ ದಿನಗಳನ್ನು ನೆನಪಿಸಿಕೊಂಡರು. ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ‘ಕಾಂಗ್ರೆಸ್’ ಒಂದೇ ನಮ್ಮ ಗುಂಪು ಎಂದೂ ಅವರು ಸ್ಪಷ್ಟಪಡಿಸಿದರು.

ಅಲ್ಪಸಂಖ್ಯಾತ ನಾಯಕರಿಗೆ ಶಕ್ತಿ:

ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ ಸಮುದಾಯದ ನಾಯಕತ್ವವನ್ನು ಸದಾ ಬೆಳೆಸಿಕೊಂಡು ಬಂದಿದೆ ಎಂದು ವಿವರಿಸಿದ ಅವರು, “ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿ ಖಾನ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ನಾನೇ ಧೈರ್ಯ ತುಂಬಿದ್ದೆ, ಈಗ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಜೊತೆ ಚರ್ಚಿಸಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ. ರಾಮನಗರದಲ್ಲಿ ಮಾಜಿ ಸಿಎಂ ಪುತ್ರನ ವಿರುದ್ಧ ಇಕ್ಬಾಲ್ ಹುಸೇನ್ ಹಾಗೂ ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಅವರ ಮಗನ ವಿರುದ್ಧ ಪಠಾಣ್ ಅವರನ್ನು ಕಣಕ್ಕಿಳಿಸಿ ಗೆಲ್ಲಿಸುವುದು ಸುಲಭದ ಮಾತಾಗಿರಲಿಲ್ಲ. ಸಮೀಕ್ಷೆಗಳ ಆಧಾರದ ಮೇಲೆ ನಾವು ಇವರನ್ನು ಗೆಲ್ಲಿಸಿಕೊಂಡು ಬಂದಿದ್ದೇವೆ. ಕಳೆದ ಬಾರಿ ಯು.ಟಿ. ಖಾದರ್ ಅವರು ಮಂತ್ರಿಯಾಗಬೇಕಿತ್ತಾದರೂ, ಪಕ್ಷದ ಹಿತದೃಷ್ಟಿಯಿಂದ ಸ್ಪೀಕರ್ ಸ್ಥಾನ ಒಪ್ಪಿಕೊಂಡು ತ್ಯಾಗ ಮಾಡಿದ್ದರು. ಅವರಿಗೆ ಸದ್ಯ ಆರೋಗ್ಯ ಇಲಾಖೆಯ ಜವಾಬ್ದಾರಿ ನೀಡಲಾಗಿದೆ” ಎಂದರು.

ಎಲ್ಲಾ ಸಮುದಾಯಗಳಿಂದ ಭಾರಿ ಒತ್ತಡ:

“ರಾಜಕಾರಣದಲ್ಲಿ ತಾಳ್ಮೆ ಇರಬೇಕು. ಧರಂ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ನನಗೂ ಹಾಗೂ ಜಿ. ಪರಮೇಶ್ವರ್ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರದ ಮೇಲೆ ಎಲ್ಲ ವರ್ಗಗಳಿಂದಲೂ ಸಚಿವ ಸ್ಥಾನಕ್ಕಾಗಿ ಭಾರಿ ಒತ್ತಡವಿದೆ. ಲಂಬಾಣಿ ಮತ್ತು ಮರಾಠಾ ಸಮುದಾಯಗಳು ತಮ್ಮ ಪ್ರತಿನಿಧಿಗಳಿಗೆ ಸ್ಥಾನ ಕೇಳುತ್ತಿವೆ. ಹಿಂದುಳಿದ ವರ್ಗಗಳಿಂದ ಸಂತೋಷ್ ಲಾಡ್ ಮತ್ತು ಶ್ರೀನಿವಾಸ್ ಮಾನೆ ಅವರಿಗೆ, ಕುರುಬ ಸಮುದಾಯದಿಂದ ಶಿವಣ್ಣ ಅವರಿಗೆ ಒತ್ತಡವಿದೆ. ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ ಅವರು ಕಷ್ಟಕಾಲದಲ್ಲಿ ಪಕ್ಷಕ್ಕೆ ಬಂದಿದ್ದು, ತಮಗೆ ನೀಡಿದ್ದ ಮಾತಿನಂತೆ ಸ್ಥಾನ ಕೇಳುತ್ತಿದ್ದಾರೆ. ಇವರ ಜೊತೆಗೆ ಮಹೇಶ್ ಕೌಜಲಗಿ, ಅಪ್ಪಾಜಿ ನಾಡಗೌಡ, ಶಿವಾನಂದ ಪಾಟೀಲ್, ಯಶವಂತ ರಾಯಗೌಡ ಪಾಟೀಲ್, ಜೆ.ಎಸ್. ಪಾಟೀಲ್ ಸೇರಿದಂತೆ ಹಲವರು ರೇಸ್‌ನಲ್ಲಿದ್ದಾರೆ. ರಾಜಕೀಯವಾಗಿ ಎಲ್ಲರನ್ನೂ ಏಕಕಾಲಕ್ಕೆ ತೃಪ್ತಿಪಡಿಸುವುದು ಅಸಾಧ್ಯ. ಆದ್ದರಿಂದ ಕೆಲವೊಮ್ಮೆ ಕೆಲವರು ತ್ಯಾಗ ಮಾಡಲು ಸಿದ್ಧರಿರಬೇಕು” ಎಂದು ಸಿಎಂ ಮನವಿ ಮಾಡಿದರು.

ಇದೇ ವೇಳೆ, ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (SC/ST) ಸಮುದಾಯಗಳಿಗೆ ಮತ್ತಷ್ಟು ಶಕ್ತಿ ತುಂಬಲು ಕಾನೂನಾತ್ಮಕ ತಿದ್ದುಪಡಿಗಳನ್ನು ತರಲು ಸರ್ಕಾರ ಹೊಸ ಚಿಂತನೆ ನಡೆಸುತ್ತಿದ್ದು, ಶೀಘ್ರದಲ್ಲೇ ಅದನ್ನು ಪ್ರಕಟಿಸುವುದಾಗಿ ತಿಳಿಸಿದರು.

 

 


Share this with Friends

Related Post