ಬೆಂಗಳೂರು: ಕರ್ನಾಟಕದ ಹೆಮ್ಮೆಯ ಹಿರಿಯ ರಾಜಕಾರಣಿ, ದಕ್ಷ ಆಡಳಿತಗಾರ ಹಾಗೂ ‘ವಿಕಾಸ ಸೌಧ’ದ ನಿರ್ಮಾತೃ ದಿವಂಗತ ಎಸ್.ಎಂ. ಕೃಷ್ಣ ಅವರ ಸ್ಮರಣಾರ್ಥವಾಗಿ ರಾಜ್ಯ ಸರ್ಕಾರವು ಅವರ ಭವ್ಯ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಏಷಿಯನ್ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ ಅಧ್ಯಕ್ಷರಾದ ಡಾ. ಕೆ. ಗೋವಿಂದರಾಜ್ ಮುಖ್ಯಮಂತ್ರಿ ಡಿಕೆ ಶುವಕುಮಾರ್ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಈ ಅಧಿಕೃತ ಮನವಿ ಪತ್ರದಲ್ಲಿ, ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹಾಗೂ ದೇಶದ ರಾಜಕೀಯ ಮತ್ತು ಆಡಳಿತ ಕ್ಷೇತ್ರಕ್ಕೆ ಎಸ್.ಎಂ. ಕೃಷ್ಣ ಅವರು ನೀಡಿದ ಅಪಾರ ಕೊಡುಗೆಗಳನ್ನು ಡಾ. ಕೆ. ಗೋವಿಂದರಾಜ್ ಅವರು ಮುಕ್ತವಾಗಿ ಕೊಂಡಾಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಬೆಂಗಳೂರು ಬೆಳಗಿದ ನಾಯಕ:
ಎಸ್.ಎಂ. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ರಾಜ್ಯದ ಸಮಗ್ರ ಮೂಲಸೌಕರ್ಯಾಭಿವೃದ್ಧಿಗೆ ದೂರದೃಷ್ಟಿಯ ನಾಯಕತ್ವ ನೀಡಿದವರು. ಬೆಂಗಳೂರು ನಗರವನ್ನು ಜಾಗತಿಕ ಭೂಪಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರಮುಖವಾಗಿ ಮಾಹಿತಿ ತಂತ್ರಜ್ಞಾನ (IT), ಬೃಹತ್ ಹೂಡಿಕೆ, ಮೂಲಸೌಕರ್ಯ ಹಾಗೂ ಅತ್ಯಾಧುನಿಕ ನಗರಾಭಿವೃದ್ಧಿಗೆ ಹೊಸ ದಿಕ್ಸೂಚಿ ನೀಡುವ ಮೂಲಕ ಬೆಂಗಳೂರು ನಗರವು ‘ಸಿಲಿಕಾನ್ ಸಿಟಿ’ ಎಂದು ಪ್ರಪಂಚದಾದ್ಯಂತ ಖ್ಯಾತಿ ಪಡೆಯಲು ಅವರ ಶ್ರಮ ಅಪಾರವಾದುದು ಎಂದು ಪತ್ರದಲ್ಲಿ ಸ್ಮರಿಸಲಾಗಿದೆ.
ರಾಷ್ಟ್ರ ರಾಜಕಾರಣದ ಧೀಮಂತ ಶಕ್ತಿ – ವಿಕಾಸ ಸೌಧದ ನಿರ್ಮಾತೃ:
ಕೇವಲ ರಾಜ್ಯ ರಾಜಕಾರಣ ಅಷ್ಟೇ ಅಲ್ಲದೆ ರಾಷ್ಟ್ರ ರಾಜಕಾರಣದಲ್ಲೂ ಸಕ್ರಿಯರಾಗಿದ್ದ ಎಸ್.ಎಂ. ಕೃಷ್ಣ ಅವರು ಸಂಸದರಾಗಿ, ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಸರ್ಕಾರದಲ್ಲಿ ಭಾರತದ ವಿದೇಶಾಂಗ ಸಚಿವರಾಗಿ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿ ಅತ್ಯಂತ ಯಶಸ್ವಿಯಾಗಿ ಸೇವೆ ಸಲ್ಲಿಸಿ, ದೇಶದ ಗೌರವವನ್ನು ಹೆಚ್ಚಿಸಿದ್ದರು. ಅವರ ಆಡಳಿತಾವಧಿಯಲ್ಲಿ ರಾಜ್ಯದ ಶಕ್ತಿ ಕೇಂದ್ರವಾದ ವಿಧಾನ ಸೌಧವನ್ನು ಹೋಲುವಂತೆ 2004ರಲ್ಲಿ ನಿರ್ಮಿಸಲಾದ ‘ವಿಕಾಸ ಸೌಧ’ವು ರಾಜ್ಯದ ಆಡಳಿತ ವ್ಯವಸ್ಥೆಗೆ ಅವರು ನೀಡಿದ ಮಹತ್ವದ ಕೊಡುಗೆಯಾಗಿದೆ. ಈ ಭವ್ಯ ಕಟ್ಟಡದ ನಿರ್ಮಾಣದ ಹಿಂದೆ ಅವರ ದೂರದೃಷ್ಟಿ ಮತ್ತು ನಾಯಕತ್ವ ಪ್ರಮುಖ ಪಾತ್ರ ವಹಿಸಿತ್ತು. ಇವೆಲ್ಲವುಗಳ ಜೊತೆಗೆ ಕರ್ನಾಟಕದ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ಅವರು ಭದ್ರ ಬುನಾದಿ ಹಾಕಿದ್ದರು ಎಂದು ಡಾ. ಕೆ. ಗೋವಿಂದರಾಜ್ ಅವರು ಮನವಿಯಲ್ಲಿ ವಿವರಿಸಿದ್ದಾರೆ.
ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ – ಕೃತಜ್ಞತೆಯ ಸಂಕೇತ:
ರಾಜ್ಯದ ಕೈಗಾರಿಕಾ, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಬೆಳವಣಿಗೆಗಳಿಗೆ ಶ್ರೀಯುತರು ನೀಡಿದ ಕೊಡುಗೆಗಳು ಶಾಶ್ವತವಾಗಿ ಸ್ಮರಣೀಯವಾಗಿವೆ. ಇಂತಹ ಅಪರೂಪದ ಮಹಾನ್ ನಾಯಕರ ಸೇವೆಯನ್ನು ಮುಂದಿನ ಪೀಳಿಗೆಗಳಿಗೆ ನೆನಪಿಸುವ, ಪರಿಚಹಿಸುವ ಹಾಗೂ ಅವರ ಸಾಧನೆಯನ್ನು ಗೌರವಿಸುವ ಉದ್ದೇಶದಿಂದ, ವಿಕಾಸ ಸೌಧದ ಆವರಣದಲ್ಲಿ ಅಥವಾ ಸರ್ಕಾರವು ಸೂಕ್ತವೆಂದು ಪರಿಗಣಿಸುವ ಸೂಕ್ತ ಸ್ಥಳದಲ್ಲಿ ದಿವಂಗತ ಎಸ್.ಎಂ.ಕೃಷ್ಣ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಡಾ. ಕೆ. ಗೋವಿಂದರಾಜ್ ಅವರು ಆಗ್ರಹಿಸಿದ್ದಾರೆ.
ಇದು ಕರ್ನಾಟಕದ ಸಮಸ್ತ ಜನತೆಯ ಕೃತಜ್ಞತೆಯ ಸಂಕೇತವಾಗಿದ್ದು, ಸಾರ್ವಜನಿಕ ಜೀವನದಲ್ಲಿ ಆದರ್ಶ ನಾಯಕತ್ವಕ್ಕೆ ಶಾಶ್ವತ ಗೌರವ ಸಲ್ಲಿಸುವ ಕಾರ್ಯವಾಗಲಿದೆ. ಆದ್ದರಿಂದ ಸರ್ಕಾರವು ಈ ಮನವಿಯನ್ನು ಅತ್ಯಂತ ಸಕಾರಾತ್ಮಕವಾಗಿ ಪರಿಗಣಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಸಿಎಂಗೆ ಪತ್ರದ ಮೂಲಕ ನಮ್ರತೆಯಿಂದ ವಿನಂತಿಸಿದ್ದಾರೆ.

