ಬೆಂಗಳೂರು: “ಎಚ್‌ಎಂಟಿ ವಶದಲ್ಲಿರುವ ಭೂಮಿ ಕಾನೂನುಬದ್ಧವಾಗಿ ಅರಣ್ಯ ಪ್ರದೇಶವಾಗಿದ್ದು, ಅದು ಅರಣ್ಯವಾಗಿಯೇ ಉಳಿಯಲಿದೆ,” ಎಂದು ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸ್ಪಷ್ಟಪಡಿಸಿದ್ದಾರೆ.
ಇಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಮಾಡಿದ್ದ ಆರೋಪಗಳಿಗೆ ವಿವಿಧ ಕಂದಾಯ ದಾಖಲೆಗಳು, ಕಾನೂನು ಮತ್ತು ನ್ಯಾಯಾಲಯದ ಪ್ರಮುಖ ತೀರ್ಪುಗಳನ್ನು ಪ್ರದರ್ಶಿಸುವ ಮೂಲಕ ಸಚಿವರು ಕಡಕ್ ಉತ್ತರ ನೀಡಿದ್ದಾರೆ.
ಲಾಲ್‌ಬಾಗ್, ಕಬ್ಬನ್ ಪಾರ್ಕ್‌ಗಿಂತ ದೊಡ್ಡ ಉದ್ಯಾನವನದ ಸಂಕಲ್ಪ
“ನಾನು ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವ ವ್ಯಕ್ತಿಯಲ್ಲ. ಕುಮಾರಸ್ವಾಮಿ ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷವೂ ಇಲ್ಲ. ಆದರೆ, ವಿವಾದಿತ ಎಚ್‌ಎಂಟಿ ಅರಣ್ಯ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಮರಳಿ ಪಡೆದು, ಅಲ್ಲಿ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್‌ಗಿಂತಲೂ ದೊಡ್ಡದಾದ ಬೃಹತ್ ಉದ್ಯಾನವನವನ್ನು (Oxygen Hub) ನಿರ್ಮಿಸುವುದು ನಮ್ಮ ಗುರಿಯಾಗಿದೆ. उत्तर ಬೆಂಗಳೂರಿನ ಜನರಿಗೆ ಅತ್ಯಗತ್ಯವಾಗಿ ಬೇಕಾಗಿರುವ ಶುದ್ಧ ಗಾಳಿಯ ಶ್ವಾಸತಾಣವನ್ನು ಉಳಿಸಲು ನಾನು ಪರಿಸರ ಸಚಿವನಾಗಿ ಕಟಿಬದ್ಧನಾಗಿದ್ದೇನೆ,” ಎಂದು ಖಂಡ್ರೆ ಹೇಳಿದರು.
ತೀರ್ಪು ನೀಡಲು ಕುಮಾರಸ್ವಾಮಿ ನ್ಯಾಯಾಧೀಶರಲ್ಲ!
ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರು ಬಳಸಿದ್ದ ಏಕವಚನ ಮತ್ತು ವೈಯಕ್ತಿಕ ದಾಳಿಗೆ ಪ್ರತಿಕ್ರಿಯಿಸಿದ ಸಚಿವರು, “ಕುಮಾರಸ್ವಾಮಿ ಅವರು ಯಾವ ಖಂಡ್ರೆ ಎಂದು ಮಾತನಾಡಿದ್ದಾರೆ. ನನಗೂ ಯಾವ ಸ್ವಾಮಿ… ಕುಮಾರಸ್ವಾಮಿ ಎನ್ನಲು ಬರುತ್ತದೆ. ಎಚ್‌ಎಂಟಿ ಸಂಸ್ಥೆ ಆರಂಭವಾದಾಗ ಅವರೂ ಹಸುಗೂಸಾಗಿದ್ದರು ಎಂದು ನಾನೂ ಹೇಳಬಹುದು, ಆದರೆ ನಾನು ಆ ಮಟ್ಟದ ರಾಜಕಾರಣಕ್ಕೆ ಇಳಿಯುವುದಿಲ್ಲ,” ಎಂದು ತಿರುಗೇಟು ನೀಡಿದರು.
ಮುಂದುವರಿದು, “ಕುಮಾರಸ್ವಾಮಿ ಅವರೇ ಈ ಪ್ರಕರಣ ಕೋರ್ಟ್‌ನಲ್ಲಿದೆ ಎಂದು ಹೇಳುತ್ತಾ, ಮತ್ತೊಂದೆಡೆ ಈ ಭೂಮಿಯ ಮೇಲೆ ರಾಜ್ಯ ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ ಎಂದು ಅವರೇ ತೀರ್ಪು ನೀಡುತ್ತಿದ್ದಾರೆ. ಈ ಜಮೀನಿನ ಹಕ್ಕಿನ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಬೇಕಾದವರು ನ್ಯಾಯಾಧೀಶರೇ ಹೊರತು ಕುಮಾರಸ್ವಾಮಿ ಅವರಲ್ಲ,” ಎಂದು ಆಕ್ಷೇಪಿಸಿದರು.
“ಅದು ಕೇವಲ ನೋಟಿಸ್ ಅಲ್ಲ, ಅರೆ ನ್ಯಾಯಿಕ ಆದೇಶ”
ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (DCF) ನೀಡಿರುವುದು ಕೇವಲ ಸಾಮಾನ್ಯ ನೋಟಿಸ್ ಅಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, “ಅದು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 64(ಎ) ಅಡಿಯಲ್ಲಿ ಜಾರಿ ಮಾಡಲಾಗಿರುವ ಅರೆ ನ್ಯಾಯಿಕ ಪ್ರಾಧಿಕಾರದ (Quasi-Judicial Authority) ಪಕ್ಕಾ ಕಾನೂನುಬದ್ಧ ಆದೇಶವಾಗಿದೆ. ಸಂಬಂಧಪಟ್ಟ ಸಂಸ್ಥೆಗಳಿಗೆ ದಾಖಲೆ ಸಲ್ಲಿಸಲು ಸಾಕಷ್ಟು ಸಮಯ ನೀಡಿದ್ದರೂ, ಅವರು ಯಾವುದೇ ಸೂಕ್ತ ಆಧಾರ ಒದಗಿಸದ ಹಿನ್ನೆಲೆಯಲ್ಲಿ ಈ ಅಂತಿಮ ಆದೇಶ ಹೊರಡಿಸಲಾಗಿದೆ. ಇದಕ್ಕೆ ಅಸಮ್ಮತಿ ಇದ್ದರೆ ಕಾನೂನು ಪ್ರಕಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ (CF) ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು. ಅದನ್ನು ಬಿಟ್ಟು ಜನರ ಮುಂದೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ,” ಎಂದರು.
1969ರ ಅಧಿಸೂಚನೆ ಸವಾಲು ಮತ್ತು ಬೆಂಗಳೂರು ವಿವಿ ಉದಾಹರಣೆ
ಯಾವುದೇ ಒಂದು ಭೂಮಿಯನ್ನು ಒಮ್ಮೆ ಅರಣ್ಯ ಎಂದು ಘೋಷಿಸಿದ ನಂತರ, ಅದನ್ನು ಕಾನೂನುಬದ್ಧವಾಗಿ ಅರಣ್ಯೇತರ ಉದ್ದೇಶಕ್ಕಾಗಿ ಅಧಿಕೃತವಾಗಿ ಪರಿವರ್ತಿಸದಿದ್ದರೆ ಅದು ಅರಣ್ಯವಾಗಿಯೇ ಮುಂದುವರಿಯುತ್ತದೆ ಎಂದು ಸುಪ್ರೀಂ ಕೋರ್ಟ್ ತನ್ನ ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ ಎಂದು ಸಚಿವರು ನೆನಪಿಸಿದರು. 1901 ರಿಂದ 1969 ರವರೆಗಿನ ಅವಧಿಯಲ್ಲಿ ಯಾವುದೇ ಮೀಸಲು ಅರಣ್ಯ ಪ್ರದೇಶವನ್ನು ಡಿ-ಫಾರೆಸ್ಟ್ (De-forest) ಮಾಡಬೇಕಾದರೆ ಸರ್ಕಾರದ ಅಧಿಕೃತ ಗೆಜೆಟ್ ಅಧಿಸೂಚನೆ ಕಡ್ಡಾಯವಾಗಿತ್ತು.
“ಎಚ್‌ಎಂಟಿ ಸಂಸ್ಥೆಗೆ ಜಮೀನು ನೀಡಿದ ಅದೇ ಸಂದರ್ಭದಲ್ಲೇ ಬೆಂಗಳೂರು ವಿಶ್ವವಿದ್ಯಾಲಯಕ್ಕೂ ಸಹ ಅರಣ್ಯ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ 1969ರ ಫೆಬ್ರವರಿ 24ರಂದು ಅಂದಿನ ಸರ್ಕಾರ ಹೊರಡಿಸಿದ್ದ ಅಧಿಕೃತ ಅಧಿಸೂಚನೆಯ ಅಸಲಿ ದಾಖಲೆಗಳನ್ನು ನಾನು ಇಂದು ಸಾರ್ವಜನಿಕವಾಗಿ ಪ್ರದರ್ಶಿಸಿದ್ದೇನೆ. ಆದರೆ ಎಚ್‌ಎಂಟಿ ಜಮೀನನ್ನು ಡಿ-ಫಾರೆಸ್ಟ್ ಮಾಡಲಾಗಿರುವ ಅಂತಹ ಯಾವುದೇ ಅಧಿಕೃತ ಅಧಿಸೂಚನೆ ಇದ್ದರೆ ಕುಮಾರಸ್ವಾಮಿ ಅವರು ದಾಖಲೆ ಬಿಡುಗಡೆ ಮಾಡಲಿ. ಯಾವುದೇ ಲಿಖಿತ ಆಧಾರಗಳಿಲ್ಲದೆ ಕೇವಲ ಗಾಳಿಯಲ್ಲಿ ಆರೋಪ ಮಾಡುವುದರಿಂದ ಐತಿಹಾಸಿಕ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ,” ಎಂದು ಈಶ್ವರ ಖಂಡ್ರೆ ಸವಾಲು ಹಾಕಿದ್ದಾರೆ.

