ಬೆಂಗಳೂರು: “ರಾಜ್ಯಕ್ಕೆ ಹಿಡಿದಿರುವ ಗ್ರಹಣವನ್ನು ಬಿಡಿಸಲು ಜನತಾ ದಳ (ಜಾತ್ಯತೀತ) ಪಕ್ಷಕ್ಕೆ ಐದು ವರ್ಷಗಳ ಕಾಲ ಪೂರ್ಣ ಪ್ರಮಾಣದ ಅಧಿಕಾರ ನೀಡಿ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು.
ನಗರದಲ್ಲಿ ಆಯೋಜಿಸಲಾಗಿದ್ದ ‘ಗ್ರೇಟರ್ ಬೆಂಗಳೂರು ಜೆಡಿಎಸ್ ಸಮಾವೇಶ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಈಗಿನ ಆಡಳಿತದಿಂದ ರಾಜ್ಯಕ್ಕೆ ಒದಗಿರುವ ದುಸ್ಥಿತಿಯನ್ನು ನಾನು ಸ್ವಚ್ಛ ಮಾಡುತ್ತೇನೆ. ಕೇವಲ ಒಂದು ಬಾರಿ ನಮಗೆ ಸ್ವತಂತ್ರವಾಗಿ ಅಧಿಕಾರ ಕೊಟ್ಟು ನೋಡಿ” ಎಂದು ಅವರು ಜನರನ್ನು ಕೋರಿದರು.
ಸ್ವತಂತ್ರ ಸರ್ಕಾರದ ಹಂಬಲ:
ತಮ್ಮ ಹಿಂದಿನ ಆಡಳಿತದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, “ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೆ ನಿಜ. ಆದರೆ ಅದು ನನ್ನ ಸ್ವಂತ ಬಲದ ಸರ್ಕಾರವಾಗಿರಲಿಲ್ಲ. ಅನಿವಾರ್ಯವಾಗಿ ಬೇರೆಯವರ ಹಂಗಿನಲ್ಲಿ ಸರ್ಕಾರ ನಡೆಸಬೇಕಾಯಿತು. ಈ ಬಾರಿ ಯಾವುದೇ ಹಂಗಿಲ್ಲದ ಪೂರ್ಣ ಪ್ರಮಾಣದ ಸರ್ಕಾರ ರಚಿಸಲು ನಮಗೆ ಅವಕಾಶ ನೀಡಿ” ಎಂದು ಕಳಕಳಿಯಿಂದ ವಿನಂತಿಸಿದರು.
ಬೆಂಗಳೂರಿನ ಅಭಿವೃದ್ಧಿಗೆ ಒತ್ತು:
ಬೆಂಗಳೂರು ನಗರದ ಇಂದಿನ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, “ಕೆಂಪೇಗೌಡರು ಕಟ್ಟಿದ ಈ ಮಹಾನಗರವನ್ನು ಇಂದು ಹಾಳು ಮಾಡಿದ್ದಾರೆ. ನಗರಕ್ಕೆ ಹಳೆಯ ವೈಭವವನ್ನು ಮರಳಿ ತರಬೇಕಿದೆ. ಬೆಂಗಳೂರಿನಲ್ಲಿ ಫ್ಲೈ ಓವರ್‌ಗಳ ಯುಗ ಆರಂಭವಾಗಿದ್ದು ಹೆಚ್.ಡಿ. ದೇವೇಗೌಡರ ಕಾಲದಲ್ಲಿ. ಐಟಿ-ಬಿಟಿ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದ್ದೂ ಅವರೇ. ಇನ್ನು ಮೆಟ್ರೋ ರೈಲು ಯೋಜನೆಗೆ ಚಾಲನೆ ನೀಡಿದ ಹೆಗ್ಗಳಿಕೆ ನನ್ನ ಸರ್ಕಾರದ್ದು” ಎಂದು ನೆನಪಿಸಿದರು.
ರೈತರ ಹಿತರಕ್ಷಣೆ ನಮ್ಮ ಗುರಿ:
“ಜೆಡಿಎಸ್ ಕೇವಲ ರೈತರಿಗೆ ಸೀಮಿತವಾದ ಪಕ್ಷವಲ್ಲ, ಆದರೆ ನಾವು ರೈತರನ್ನು ಎಂದಿಗೂ ನಿರ್ಲಕ್ಷಿಸುವುದಿಲ್ಲ. ನಗರದಲ್ಲಿ ಬದುಕು ಕಟ್ಟಿಕೊಂಡಿರುವ ಸಾವಿರಾರು ರೈತರ ಮಕ್ಕಳ ಹಿತದೃಷ್ಟಿಯಿಂದ ನಾವು ಕೆಲಸ ಮಾಡಿದ್ದೇವೆ. ಆದರೆ ಪ್ರಸ್ತುತ ಅಭಿವೃದ್ಧಿಯ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ” ಎಂದು ಅವರು ಗಂಭೀರ ಆರೋಪ ಮಾಡಿದರು.
ಬೆಂಗಳೂರು ಕಸದ ತೊಟ್ಟಿಯಾಗಿದೆ:
“ನಾನು ಮುಖ್ಯಮಂತ್ರಿಯಾಗಿದ್ದಾಗ ದೇಶದಲ್ಲೇ ಸುಂದರ ನಗರವಾಗಿದ್ದ ಬೆಂಗಳೂರು ಇಂದು ಕಸದ ರಾಶಿಯಿಂದ ತುಂಬಿಹೋಗಿದೆ. ನಗರದ ವೈಜ್ಞಾನಿಕ ಕಸ ವಿಲೇವಾರಿಗೆ ಈ ಸರ್ಕಾರಕ್ಕೆ ಇರುವ ತೊಂದರೆಯಾದರೂ ಏನು?” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು. “ರಾಜಧಾನಿಗೆ ಹಿಡಿದಿರುವ ಈ ಗ್ರಹಣ ಬಿಡಿಸುವ ಕಾಲ ಹತ್ತಿರದಲ್ಲಿದೆ” ಎಂದು ಅವರು ಎಚ್ಚರಿಸಿದರು.
ಸುರಂಗ ಮಾರ್ಗ ಹಳೆಯ ಚಿಂತನೆ:
“ಈಗಿನ ಸರ್ಕಾರ ಸುರಂಗ ಮಾರ್ಗದ ಜಪ ಮಾಡುತ್ತಿದೆ. ಆದರೆ, ನಾನು ಮೊದಲ ಬಾರಿ ಸಿಎಂ ಆಗಿದ್ದಾಗಲೇ ನಗರಕ್ಕೆ ಸುರಂಗ ಮಾರ್ಗ ತರುವ ಚಿಂತನೆ ನಡೆಸಿದ್ದೆ. ನನ್ನ ಅವಧಿಯಲ್ಲಿ ರೂಪಿಸಲಾಗಿದ್ದ ಹೊರವರ್ತುಲ ರಸ್ತೆ (PRR) ಯೋಜನೆಗೆ ಇಂದು 29 ಸಾವಿರ ಕೋಟಿ ರೂ. ವೆಚ್ಚವಾಗುತ್ತದೆ ಎಂದು ಹೇಳಲಾಗುತ್ತಿದೆ. ಆಡಳಿತದಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ” ಎಂದರು.
ನೀರಿನ ಸಮಸ್ಯೆಗೆ ಕಾವೇರಿ ಹಂಚಿಕೆಯೇ ಸಾಕ್ಷಿ:
ನಗರದ ಕುಡಿಯುವ ನೀರಿನ ಅಭಾವದ ಬಗ್ಗೆ ಮಾತನಾಡಿದ ಅವರು, “ಇಂದು ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಹೆಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗಲೇ ನಗರದ ಭವಿಷ್ಯದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಕಾವೇರಿ ನೀರನ್ನು ಹಂಚಿಕೆ ಮಾಡಿದ್ದರು. ಆ ದೂರದೃಷ್ಟಿಯೇ ಇಂದು ನಗರಕ್ಕೆ ಆಧಾರವಾಗಿದೆ. ಆದರೆ ಈಗಿನ ಸರ್ಕಾರ ವ್ಯವಸ್ಥಿತವಾಗಿ ನೀರು ಪೂರೈಸುವಲ್ಲಿ ವಿಫಲವಾಗಿದೆ” ಎಂದು ಕಿಡಿಕಾರಿದರು.
ಬಡವರ ವಿರೋಧಿ ಸರ್ಕಾರ:
“ಕಾಂಗ್ರೆಸ್ ಸರ್ಕಾರ ಬಡವರ ಪರ ಎಂದು ಹೇಳಿಕೊಳ್ಳುತ್ತಲೇ ಶ್ರೀಮಂತರನ್ನು ರಕ್ಷಿಸುತ್ತಿದೆ. ದೊಡ್ಡ ಕಟ್ಟಡ ಕಟ್ಟಿರುವ ಶ್ರೀಮಂತರನ್ನು ಬಿಟ್ಟು, ಗುಡಿಸಲು ಹಾಕಿಕೊಂಡಿರುವ ಬಡವರನ್ನು ಒಕ್ಕಲೆಬ್ಬಿಸುತ್ತಿದೆ. ಸುಳ್ಳು ದಾಖಲೆ ಸೃಷ್ಟಿಸಿ ಭೂಮಿ ಲೂಟಿ ಮಾಡುವವರ ವಿರುದ್ಧ ಕ್ರಮವಿಲ್ಲ. ಈ ಸರ್ಕಾರ ಕೇವಲ ‘ವಸೂಲಿ’ಯಲ್ಲೇ ಮುಳುಗಿದೆ” ಎಂದು ಕುಮಾರಸ್ವಾಮಿ ಅವರು ಗಂಭೀರವಾಗಿ ಆರೋಪಿಸಿದರು.
ಸಿದ್ದರಾಮಯ್ಯನವರೇ, 2000 ರೂಪಾಯಿಯಿಂದ ಕಿಡ್ನಿ ಕಾಯಿಲೆ ವಾಸಿಯಾಗುತ್ತದೆಯೇ?:
“ರಾಜ್ಯ ಸರ್ಕಾರಕ್ಕೆ ಕೆಲಸ ಮಾಡುವ ಯೋಗ್ಯತೆ ಇಲ್ಲ. ಕೇವಲ 2000 ರೂಪಾಯಿ ನೀಡಿದರೆ ಕಿಡ್ನಿ ಅಥವಾ ಹೃದಯ ಸಂಬಂಧಿ ಕಾಯಿಲೆ ಇರುವ ಬಡವರನ್ನು ರಕ್ಷಿಸಲು ಸಾಧ್ಯವೇ?” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನೇರವಾಗಿ ಪ್ರಶ್ನಿಸಿದರು.”ನಾನು ಯಾವತ್ತೂ ಕೇಂದ್ರದ ಮುಂದೆ ಕೈಕಟ್ಟಿ ನಿಂತವನಲ್ಲ, ಮುಖ್ಯಮಂತ್ರಿಯಾಗಿ ಹೇಗೆ ಕೆಲಸ ಮಾಡಬೇಕೆಂದು ತೋರಿಸಿಕೊಟ್ಟಿದ್ದೇನೆ. ನನ್ನನ್ನು ಹುಡುಕಿಕೊಂಡು ಬರುವುದು ಸೂಟು-ಬೂಟು ಹಾಕಿದವರಲ್ಲ, ಬದಲಾಗಿ ಕಷ್ಟದಲ್ಲಿರುವ ಬಡವರು ಮತ್ತು ದೀನದಲಿತರು” ಎಂದರು.
ಶಿಕ್ಷಣ ವ್ಯವಸ್ಥೆ ಅಯೋಮಯ:
ರಾಜ್ಯದ ಶಿಕ್ಷಣ ಕ್ಷೇತ್ರದ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, “ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡದೆ ವ್ಯವಸ್ಥೆಯನ್ನೇ ನಾಶ ಮಾಡಿದ್ದಾರೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ, 70 ಸಾವಿರ ಶಿಕ್ಷಕರ ನೇಮಕಾತಿ ಬಾಕಿ ಉಳಿದಿದೆ. ಯುವಕರು ಉದ್ಯೋಗಕ್ಕಾಗಿ ಬೀದಿಗಿಳಿದು ಹೋರಾಡುತ್ತಿದ್ದಾರೆ. ಒಳ ಮೀಸಲಾತಿ ಜಾರಿ ವಿಷಯದಲ್ಲಿ ಸರ್ಕಾರದ ನಿಲುವೇನು?” ಎಂದು ಒತ್ತಾಯಿಸಿದರು.
ವರದಿಗಳ ಹೆಸರಲ್ಲಿ ಕಾಲಹರಣ:
ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, “ಕಾಂತರಾಜು ವರದಿ ಏನಾಯಿತು? ಜಯಪ್ರಕಾಶ್ ಹೆಗಡೆ ಅವರಿಂದ ಪಡೆದ ವರದಿ ಎಲ್ಲಿ ಅಡಗಿಸಿಟ್ಟಿದ್ದೀರಿ? ಕೇವಲ ಆಯೋಗಗಳ ಮೇಲೆ ಆಯೋಗ ರಚಿಸಿ ಜನರನ್ನು ದಾರಿ ತಪ್ಪಿಸುತ್ತಿದ್ದೀರಿ” ಎಂದು ಖಾರವಾಗಿ ಪ್ರಶ್ನಿಸಿದರು.
ಕೈಗಾರಿಕಾ ಪುನಶ್ಚೇತನಕ್ಕೆ ಅಡ್ಡಿ:
ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, “ಕುದುರೆಮುಖ ಕಂಪನಿ ಪುನರಾರಂಭಕ್ಕೆ ಮತ್ತು ಹೆಚ್.ಎಂ.ಟಿ ಕಾರ್ಖಾನೆಗೆ ಮರುಜೀವ ನೀಡಲು ನಾನು ಶ್ರಮಿಸುತ್ತಿದ್ದರೆ, ರಾಜ್ಯ ಸರ್ಕಾರ ಪ್ರತಿ ಹಂತದಲ್ಲೂ ಅಡ್ಡಿಪಡಿಸುತ್ತಿದೆ. ಅಭಿವೃದ್ಧಿ ವಿಷಯದಲ್ಲಿ ನಿಮಗೇಕೆ ಇಷ್ಟೊಂದು ಅಸಹನೆ?” ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೈತ್ರಿ ಧರ್ಮಕ್ಕೆ ನಾವು ಬದ್ಧ:
“ನಾವು ಬಿಜೆಪಿ ಜೊತೆಗಿನ ಮೈತ್ರಿಗೆ ಸಂಪೂರ್ಣ ಬದ್ಧರಾಗಿದ್ದೇವೆ. ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ರಾಜ್ಯದ ಅಭಿವೃದ್ಧಿಗೆ ಉತ್ತಮ ಅವಕಾಶ ಸಿಕ್ಕಿದೆ. ಮೈತ್ರಿ ಬಗ್ಗೆ ಹಾದಿಬೀದಿಯಲ್ಲಿ ಚರ್ಚೆ ಮಾಡುವುದು ಬೇಡ, ಅದನ್ನು ನನಗೆ ಬಿಡಿ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಪಕ್ಷ ಮತ್ತು ಕಾರ್ಯಕರ್ತರ ರಕ್ಷಣೆ ತಮ್ಮ ಮೊದಲ ಆದ್ಯತೆ ಎಂದರು.
ಗ್ಯಾರಂಟಿಗಳಿಂದಲೇ ಬದುಕು ಬದಲಾಗದು:
ತಮ್ಮ ಆಡಳಿತಾವಧಿಯನ್ನು ಸ್ಮರಿಸಿದ ಸಚಿವರು, “ನಾನು ಆರೂವರೆ ಕೋಟಿ ಕನ್ನಡಿಗರ ಪೂರ್ಣ ಆಶೀರ್ವಾದದಿಂದ ಸಿಎಂ ಆಗದಿದ್ದರೂ, ಕನ್ನಡಿಗರು ತಲೆತಗ್ಗಿಸುವ ಕೆಲಸ ಮಾಡಲಿಲ್ಲ. ಕೇಂದ್ರದ ಜೊತೆ ಅನಗತ್ಯವಾಗಿ ಜಗಳವಾಡದೆ, ವಿರೋಧದ ನಡುವೆಯೂ ರೈತರ ಸಾಲ ಮನ್ನಾ ಮಾಡಿದೆ. ಕೇವಲ ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಹಸನಾಗದು. ಬೆಂಗಳೂರಿನ ಗತವೈಭವ ಮರುಕಳಿಸಬೇಕಾದರೆ ಅದು ಜೆಡಿಎಸ್‌ನಿಂದ ಮಾತ್ರ ಸಾಧ್ಯ” ಎಂದು ಪ್ರತಿಪಾದಿಸಿದರು.
ಸ್ಥಳೀಯ ಶಾಸಕರ ವಿರುದ್ಧ ವಾಗ್ದಾಳಿ:
ಕ್ಷೇತ್ರದ ಶಾಸಕರ ಹೆಸರನ್ನು ಉಲ್ಲೇಖಿಸದೆ ತೀವ್ರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, “ಇಲ್ಲಿನ ಶಾಸಕರಿಗೆ ರಾಜಕೀಯಕ್ಕಾಗಿ ಯಾವ ಪಕ್ಷವಾದರೂ ಪರವಾಗಿಲ್ಲ ಎಂಬಂತಾಗಿದೆ. ಕಾಂಗ್ರೆಸ್ ಅಥವಾ ಬಿಜೆಪಿ ಎನ್ನುತ್ತಾರೆಯೇ ಹೊರತು ಜೆಡಿಎಸ್ ಹೆಸರು ಹೇಳುತ್ತಿಲ್ಲ. ಅವರಿಗೆ ತಿಳಿದಿರಲಿ, ಜೆಡಿಎಸ್ ಮಾರಾಟಕ್ಕಿರುವ ಪಕ್ಷವಲ್ಲ” ಎಂದು ಗುಡುಗಿದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಜವರಾಯಿಗೌಡರ ಪರವಾಗಿ ಮಾತನಾಡಿದ ಅವರು, “ಜವರಾಯಿಗೌಡರಿಗೆ ಕೆಲವು ಶಕ್ತಿಗಳಿಂದ ಅನ್ಯಾಯವಾಗಿದೆ. ನಾಲ್ಕು ಬಾರಿ ಸೋತಿದ್ದರೂ ಅವರ ಬೆನ್ನಿಗೆ ನಿಂತು ಆ ಅನ್ಯಾಯ ಸರಿಪಡಿಸುವ ಕೆಲಸ ಮಾಡಿದ್ದೇನೆ” ಎಂದರು.

