ನವದೆಹಲಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ತನ್ನ ಅತ್ಯುತ್ತಮ ಸೇವೆ ಮತ್ತು ತಾಂತ್ರಿಕ ನಾವೀನ್ಯತೆಗಾಗಿ ರಾಷ್ಟ್ರ ಮಟ್ಟದ ‘ಆ್ಯಡ್ ವರ್ಲ್ಡ್ ಶೋಡೌನ್’ (AdWorld Showdown) ಸಮಾರಂಭದಲ್ಲಿ ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ನವದೆಹಲಿಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಹುಲ್ಟ್ ಇಂಟರ್ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ಮಾರ್ಕೆಟಿಂಗ್ ಲೀಡರ್ ನಿಧಿ ಎಸ್. ಮಿತ್ತಲ್ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ನಿಗಮದ ಪರವಾಗಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ. ಶ್ರೀಹರಿ ಬಾಬು ಮತ್ತು ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಎಸ್. ದಶರಥ್ ಅವರು ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಪ್ರಶಸ್ತಿ ವಿಜೇತ ವಿಭಾಗಗಳು:
ಅತ್ಯುತ್ತಮ ಬ್ರ್ಯಾಂಡಿಂಗ್: ಕೆಎಸ್‌ಆರ್‌ಟಿಸಿಯ ಐಷಾರಾಮಿ ಬಸ್‌ಗಳಾದ ಅಂಬಾರಿ ಉತ್ಸವ, ಪಲ್ಲಕ್ಕಿ, ಐರಾವತ ಕ್ಲಬ್ ಕ್ಲಾಸ್ 2.0 ಮತ್ತು ಅಶ್ವಮೇಧ ಬಸ್ಸುಗಳ ವಿಶಿಷ್ಟ ಬ್ರ್ಯಾಂಡಿಂಗ್‌ಗಾಗಿ ‘Best Customer Acquisition & Retention’ ಪ್ರಶಸ್ತಿ ಲಭಿಸಿದೆ.
ತಂತ್ರಜ್ಞಾನದ ಬಳಕೆ: ಯುಪಿಐ (UPI) ಪಾವತಿ ಸೌಲಭ್ಯ ಹೊಂದಿರುವ ‘ಅವತಾರ್ 4.0’ (AWATAR 4.0) ವ್ಯವಸ್ಥೆಯ ಮೂಲಕ ಆನ್‌ಲೈನ್ ಟಿಕೆಟ್ ಕಾಯ್ದಿರಿಸುವಿಕೆಯನ್ನು ಸರಳಗೊಳಿಸಿದ್ದಕ್ಕಾಗಿ ‘Best Use of Technology’ ಪ್ರಶಸ್ತಿ ಗೌರವ ಸಂದಿದೆ.
ಮಾನವ ಸಂಪನ್ಮೂಲ: ನೌಕರರ ಕ್ಷೇಮಾಭಿವೃದ್ಧಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಉತ್ತಮ ಉಪಕ್ರಮಗಳಿಗಾಗಿ ಮೂರನೇ ಪ್ರಶಸ್ತಿ ಲಭಿಸಿದೆ.
ಈ ಸಾಧನೆಯು ಕೆಎಸ್‌ಆರ್‌ಟಿಸಿಯು ಸಾರ್ವಜನಿಕರಿಗೆ ನೀಡುತ್ತಿರುವ ನವೀನ ಸಾರಿಗೆ ಸೇವೆ ಮತ್ತು ತಾಂತ್ರಿಕ ಪ್ರಗತಿಗೆ ಸಾಕ್ಷಿಯಾಗಿದೆ. ತಂತ್ರಜ್ಞಾನದ ಅಳವಡಿಕೆಯಿಂದ ಪ್ರಯಾಣಿಕರಿಗೆ ನೈಜ-ಸಮಯದ ಆಸನ ಮಾಹಿತಿ ಮತ್ತು ನಗದುರಹಿತ ವಹಿವಾಟು ಸುಲಭವಾಗಿದೆ ಎಂದು ನಿಗಮ ತಿಳಿಸಿದೆ.

