Sat. Jun 6th, 2026

ಜಿಬಿಎ ಚುನಾವಣೆಯಲ್ಲಿ ಪಂಚ ಪಾಲಿಕೆಗಳನ್ನೂ ಗೆಲ್ಲುವ ಗುರಿ :ಬಿ.ವೈ. ವಿಜಯೇಂದ್ರ

Share this with Friends

ಬೆಂಗಳೂರು: ಮುಂಬರುವ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಇಂದು ನಗರದಲ್ಲಿ ಆಯೋಜಿಸಲಾಗಿದ್ದ ‘ಪಂಚ ಪಾಲಿಕೆಗಳ ಸಭೆ’ಯು ಪಕ್ಷದ ಪ್ರಮುಖ ನಾಯಕರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, “ಕಳೆದ ಎರಡೂವರೆ ವರ್ಷಗಳಿಂದ ಬೆಂಗಳೂರಿನ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯದಿಂದ ನಗರದ ಜನತೆ ಬೇಸತ್ತಿದ್ದಾರೆ. ಜಿಬಿಎ ವ್ಯಾಪ್ತಿಯ ಎಲ್ಲಾ ಐದು ಪಾಲಿಕೆಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಬೆಂಗಳೂರನ್ನು ಮತ್ತೆ ಅಭಿವೃದ್ಧಿಯ ಪಥಕ್ಕೆ ಕೊಂಡೊಯ್ಯುವುದು ನಮ್ಮ ಗುರಿ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಬಿಎ ಚುನಾವಣಾ ಉಸ್ತುವಾರಿ ರಾಮ್ ಮಾಧವ್ ಮಾತನಾಡಿ, “ಈ ಚುನಾವಣೆ ಕೇವಲ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲ, ಇದು ಬೆಂಗಳೂರಿನ ಭವಿಷ್ಯವನ್ನು ನಿರ್ಧರಿಸುವ ಅಸೆಂಬ್ಲಿ ಸಮರದಷ್ಟೇ ಪ್ರಮುಖವಾದದ್ದು. ಬೂತ್ ಮಟ್ಟದಿಂದ ಕಾರ್ಯಕರ್ತರು ಸಂಘಟಿತರಾಗಿ ಪ್ರತಿ ಮನೆಗೂ ಪಕ್ಷದ ಸಂದೇಶ ತಲುಪಿಸಬೇಕು,” ಎಂದು ಕರೆ ನೀಡಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಟೀಕಿಸುತ್ತಾ, ರಸ್ತೆ ಗುಂಡಿ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕರ್ತರಿಗೆ ಸೂಚಿಸಿದರು.

ಸಹ-ಉಸ್ತುವಾರಿಗಳಾದ ಸತೀಶ್ ಪೂನಿಯಾ ಮತ್ತು ಸಂಜಯ್ ಉಪಾಧ್ಯಾಯ ಅವರು ಚುನಾವಣಾ ಕಾರ್ಯತಂತ್ರಗಳ ಕುರಿತು ಮಾರ್ಗದರ್ಶನ ನೀಡಿದರು. ಸಮಾರಂಭದಲ್ಲಿ ಮಾಜಿ ಸಚಿವರಾದ ಬೈರತಿ ಬಸವರಾಜ್‌, ಶಾಸಕ ಸಿ.ಕೆ. ರಾಮಮೂರ್ತಿ, ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್‌, ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ಹಾಗೂ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು


Share this with Friends

Related Post