ಬೆಂಗಳೂರು: ರಾಜ್ಯದ ಕೈಗಾರಿಕಾ ವಲಯದಲ್ಲಿ ಹೊಸ ಸಂಚಲನ ಮೂಡಿಸಿರುವ ‘ಇನ್ವೆಸ್ಟ್ ಕರ್ನಾಟಕ ಸಮಾವೇಶ 2026’ರಲ್ಲಿ ಗುರುವಾರ ಬರೋಬ್ಬರಿ 51,469 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವೈಮಾಂತರಿಕ್ಷ, ವಾಹನ ಹಾಗೂ ಜೈವಿಕ ತಂತ್ರಜ್ಞಾನ ಸೇರಿದಂತೆ ವಿವಿಧ ವಲಯಗಳ 48 ಬಹುರಾಷ್ಟ್ರೀಯ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಬದ್ಧತೆ ಪ್ರದರ್ಶಿಸಿವೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ಸಮ್ಮುಖದಲ್ಲಿ ಈ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಈ ಹೂಡಿಕೆಯಿಂದ ರಾಜ್ಯದಲ್ಲಿ ಅಂದಾಜು 70,000 ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, “ಇದು ಕಳೆದ ಎರಡು ತಿಂಗಳ ಸತತ ಪರಿಶ್ರಮದ ಫಲವಾಗಿದೆ. ಜಾಗತಿಕ ಹೂಡಿಕೆದಾರರ ಸಮಾವೇಶ ಹಾಗೂ ದಾವೋಸ್ ಶೃಂಗಸಭೆಯ ಹೊರತಾಗಿ ಈ ಹೂಡಿಕೆಗಳು ಹರಿದುಬಂದಿರುವುದು ವಿಶೇಷ. ಕರ್ನಾಟಕದ ಕೈಗಾರಿಕಾ ಸ್ನೇಹಿ ನೀತಿ ಹಾಗೂ ಕುಶಲ ಮಾನವ ಸಂಪನ್ಮೂಲದ ಮೇಲೆ ಹೂಡಿಕೆದಾರರು ಇಟ್ಟಿರುವ ನಂಬಿಕೆಗೆ ಇದು ಸಾಕ್ಷಿ,” ಎಂದು ಹರ್ಷ ವ್ಯಕ್ತಪಡಿಸಿದರು.
ಈ ಬೃಹತ್ ಹೂಡಿಕೆಯು ದೇಶದ ಕೈಗಾರಿಕಾ ಭೂಪಟದಲ್ಲಿ ಕರ್ನಾಟಕದ ಸ್ಥಾನಮಾನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಮುಖ ಕಂಪನಿಗಳೊಂದಿಗೆ ಒಪ್ಪಂದ:
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಏಕಸ್, ಅಲ್ಟ್ರಾವಯಲೆಟ್, ಎಸ್‌ಎಫ್‌ಒ ಟೆಕ್ನಾಲಜೀಸ್, ಮಹೀಂದ್ರಾ ಏರೊಸ್ಪೇಸ್ ಮತ್ತು ಯಜಕಿ ಸೇರಿದಂತೆ ಪ್ರಮುಖ ಕಂಪನಿಗಳೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಲಾಯಿತು. ಈ ಹೂಡಿಕೆಗಳಿಂದ ರಾಜ್ಯದಲ್ಲಿ ಸುಮಾರು 70,000 ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಉದ್ಯಮ ಸ್ನೇಹಿ ಸುಧಾರಣೆಗಳು:
ಸಮಾವೇಶದಲ್ಲಿ ಭಾಗವಹಿಸಿದ್ದ 100ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, ರಾಜ್ಯ ಸರ್ಕಾರವು ಕೈಗೊಂಡಿರುವ ಕ್ರಾಂತಿಕಾರಿ ಸುಧಾರಣೆಗಳನ್ನು ವಿವರಿಸಿದರು:
ಭೂ ಬಳಕೆಯಲ್ಲಿ ರಿಯಾಯಿತಿ: ಕೈಗಾರಿಕಾ ಪಾರ್ಕ್‌ಗಳಲ್ಲಿ ಭೂ ಬಳಕೆಯ ಮಿತಿಯನ್ನು ಶೇ. 68ರಿಂದ 70ಕ್ಕೆ ಹೆಚ್ಚಿಸಲಾಗಿದೆ. ವೈಯಕ್ತಿಕ ನಿವೇಶನಗಳ ಮಟ್ಟದಲ್ಲೂ ಶೇ. 48-53ರವರೆಗೆ ವಿಸ್ತರಿಸಲು ನಿಯಮಗಳನ್ನು ಸಡಿಲಗೊಳಿಸಲಾಗಿದೆ.
ವಿಶೇಷ ಹೂಡಿಕೆ ವಲಯ: ರಾಜ್ಯಾದ್ಯಂತ 20 ವಿಶೇಷ ಹೂಡಿಕೆ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಲ್ಲಿ ಸಂಗ್ರಹವಾಗುವ ಆಸ್ತಿ ತೆರಿಗೆಯನ್ನು ಅದೇ ಪ್ರದೇಶದ ಅಭಿವೃದ್ಧಿಗೆ ಬಳಸಲಾಗುವುದು.
ಏಕ ಗವಾಕ್ಷಿ ವ್ಯವಸ್ಥೆ: ಹೂಡಿಕೆದಾರರಿಗೆ ತೊಂದರೆಯಾಗದಂತೆ ಯೋಜನೆಗಳಿಗೆ ಅನುಮೋದನೆ ನೀಡಲು ಹೊಸ ‘ಏಕ ಗವಾಕ್ಷಿ’ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
“ದಾವೋಸ್ ಶೃಂಗಸಭೆಯ ಹೊರತಾಗಿ, ಕಳೆದ ಎರಡು ತಿಂಗಳ ಸತತ ಪ್ರಯತ್ನದಿಂದ ಈ ಹೂಡಿಕೆಗಳು ಹರಿದುಬಂದಿವೆ. ಇದು ಕರ್ನಾಟಕದ ಕೈಗಾರಿಕಾ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು” ಎಂದು ಸಚಿವರು ತಿಳಿಸಿದರು.
ಎಲ್ಲ 48 ಕಂಪನಿಗಳ ಮುಖ್ಯಸ್ಥರು ಒಡಂಬಡಿಕೆ ಪತ್ರಗಳನ್ನು ಸಚಿವರಿಂದ ಪಡೆದರು.

