Sat. Jun 6th, 2026

ವಿದ್ಯುತ್ ಜಾಲದ ಸ್ಥಿರತೆಗೆ ‘ಮೊದಲ ಬಾರಿ ಚಾರ್ಜಿಂಗ್’ (FTC) ಅನುಷ್ಠಾನ ಅನಿವಾರ್ಯ: ಡಾ. ಕೆ.ಜೆ. ರಾಮ್ ಪ್ರಸಾತ್ ಮನೋಹರ್

Share this with Friends

ಬೆಂಗಳೂರು: ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ವಿದ್ಯುತ್ ಜಾಲದ (ಗ್ರಿಡ್) ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ‘ಮೊದಲ ಬಾರಿ ಚಾರ್ಜಿಂಗ್’ (First Time Charging – FTC) ಪ್ರಕ್ರಿಯೆಯ ವೈಜ್ಞಾನಿಕ ಅನುಷ್ಠಾನ ಅತ್ಯಂತ ನಿರ್ಣಾಯಕವಾಗಿದೆ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಕೆ.ಜೆ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ನಗರದ ಇಂಧನ ಭವನದಲ್ಲಿ ಕೆಪಿಟಿಸಿಎಲ್ ಇಂಜಿನಿಯರ್‌ಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಎಫ್‌ಟಿಸಿ ಅನುಷ್ಠಾನ’ ಕುರಿತ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು,”ಯಾವುದೇ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಾಗ ಆರಂಭದಲ್ಲಿ ಸವಾಲುಗಳು ಎದುರಾಗುವುದು ಸಹಜ. ಆದರೆ, ಎಫ್‌ಟಿಸಿ ಪ್ರಕ್ರಿಯೆಯನ್ನು ಸರಿಯಾಗಿ ಅರ್ಥೈಸಿಕೊಂಡು ಜಾರಿಗೆ ತರುವುದರಿಂದ ಗ್ರಿಡ್‌ನ ದಕ್ಷತೆ ಹೆಚ್ಚುವುದಲ್ಲದೆ, ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತದೆ. ಈ ವರ್ಷ ದೇಶದ ಗರಿಷ್ಠ ವಿದ್ಯುತ್ ಬೇಡಿಕೆ 265 ಗಿಗಾ ವ್ಯಾಟ್‌ ಮುಟ್ಟುವ ನಿರೀಕ್ಷೆಯಿದ್ದು, ನಮ್ಮ ಇಂಜಿನಿಯರ್‌ಗಳ ಮೇಲಿರುವ ಜವಾಬ್ದಾರಿ ಹಿರಿದಾಗಿದೆ,” ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೆಇಆರ್‌ಸಿ (KERC) ಅಧ್ಯಕ್ಷ ಪಿ. ರವಿಕುಮಾರ್ ಅವರು, “ಭವಿಷ್ಯದ ವಿದ್ಯುತ್ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ನಾವು ಸಜ್ಜಾಗಬೇಕಿದೆ. ನಿಯಂತ್ರಣ ಮಂಡಳಿಯು ವಿದ್ಯುತ್ ಜಾಲದ ಸ್ಥಿರತೆ ಮತ್ತು ದಕ್ಷತೆಗೆ ಸದಾ ಆದ್ಯತೆ ನೀಡುತ್ತದೆ. ಎಫ್‌ಟಿಸಿ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ತಾಂತ್ರಿಕ ಅಡಚಣೆಗಳನ್ನು ತಡೆಯಬಹುದು ಮತ್ತು ಗ್ರಾಹಕರಿಗೆ ನಿರಂತರ ವಿದ್ಯುತ್ ಒದಗಿಸಲು ಸಾಧ್ಯವಾಗುತ್ತದೆ,” ಎಂದು ತಿಳಿಸಿದರು.

ದಕ್ಷಿಣ ವಲಯದ ಲೋಡ್ ಡಿಸ್ಪ್ಯಾಚ್ ಸೆಂಟರ್ (SRLDC) ಕಾರ್ಯನಿರ್ವಾಹಕ ನಿರ್ದೇಶಕ ಎಂ.ಕೆ. ರಮೇಶ್ ಅವರು ತಾಂತ್ರಿಕ ಅಂಶಗಳ ಮೇಲೆ ಬೆಳಕು ಚೆಲ್ಲುತ್ತಾ, “ರಾಷ್ಟ್ರೀಯ ಮಟ್ಟದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ಏರುತ್ತಿರುವ ಸಮಯದಲ್ಲಿ, ಗ್ರಿಡ್‌ನ ಸಮತೋಲನ ಕಾಪಾಡುವುದು ದೊಡ್ಡ ಸವಾಲು. ಯಾವುದೇ ಹೊಸ ಉಪಕರಣ ಅಥವಾ ಸಿಸ್ಟಮ್ ಅನ್ನು ಗ್ರಿಡ್‌ಗೆ ಸೇರಿಸುವ ಮುನ್ನ ಎಫ್‌ಟಿಸಿ ಪ್ರೋಟೋಕಾಲ್‌ಗಳನ್ನು ಅನುಸರಿಸುವುದು ಕಡ್ಡಾಯ. ಇದರಿಂದ ಅನಿರೀಕ್ಷಿತ ಅವಘಡಗಳನ್ನು ತಪ್ಪಿಸಿ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಬಹುದು,” ಎಂದರು

 

 


Share this with Friends

Related Post