ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ವಿರೋಧಿಗಳು ಹಾಗೂ ಅವರ ಕುಟುಂಬಗಳನ್ನು ಗುರಿ ಮಾಡಿಕೊಂಡು ನಡೆಸಲಾಗುತ್ತಿರುವ ಸ್ಟಿಂಗ್ ಆಪರೇಷನ್ಗಳು, ಫೋನ್ ಟ್ಯಾಪಿಂಗ್ ಮತ್ತು ಪೆನ್ಡ್ರೈವ್ ಹಂಚಿಕೆಯ ವಿಕೃತ ರಾಜಕೀಯದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಪ್ರಕರಣಗಳ ಹಿಂದೆ ಇರುವ ಬ್ಲ್ಯಾಕ್ಮೇಲ್ ಜಾಲವನ್ನು ಪತ್ತೆಹಚ್ಚಲು ಯಾವುದೇ ರಾಜಕೀಯ ಪ್ರಭಾವವಿಲ್ಲದ ನಿಷ್ಪಕ್ಷಪಾತ ಸಿಬಿಐ (CBI) ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದು, ಈ ಕುರಿತು ಶೀಘ್ರದಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಧಿಕೃತ ದೂರು ನೀಡುವುದಾಗಿ ಪ್ರಕಟಿಸಿದ್ದಾರೆ.
ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದಾಶಿವನಗರದ ನಿವಾಸದಲ್ಲಿ ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ಅತ್ಯಾಧುನಿಕ ಉಪಕರಣಗಳ ಮೂಲಕ ಹಾಲಿ ಸಚಿವರು ಹಾಗೂ ರಾಜಕೀಯ ನಾಯಕರ ಫೋನ್ಗಳನ್ನು ಟ್ಯಾಪ್ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ತಮಗೆ ಲಭಿಸಿದೆ ಎಂದು ಸ್ಪೋಟಕ ಸಂಗತಿಯನ್ನು ಬಹಿರಂಗಪಡಿಸಿದರು. ಇಂತಹ ವಾತಾವರಣ ಸೃಷ್ಟಿಸಿರುವುದೇ ಮುಖ್ಯಮಂತ್ರಿಯವರ (ಡಿ.ಕೆ. ಶಿವಕುಮಾರ್) ನಿರಂತರ ಕಸುಬಾಗಿದ್ದು, ಅವರ ಈ ಆಡಳಿತ ವೈಖರಿಯನ್ನು ಕಂಡು ತಾವು ಇಂದಿಗೂ ಅವರನ್ನು ಮುಖ್ಯಮಂತ್ರಿ ಎಂದು ಒಪ್ಪಲು ಸಿದ್ಧರಿಲ್ಲ ಎಂದರು.
ಇದೇ ವೇಳೆ ಲೋಕಸಭಾ ಚುನಾವಣೆಗೂ ಮುನ್ನ ಮಹಿಳೆಯರ ಮುಖವನ್ನು ಮಸುಕುಗೊಳಿಸದೆ ಪೆನ್ಡ್ರೈವ್ಗಳನ್ನು ಸಿದ್ಧಪಡಿಸಿ ಹಂಚಿದ ದುರುಳರು ಇಂದು ಹಾಸನದಲ್ಲಿ ರಾಜಾರೋಷವಾಗಿ ತಿರುಗುತ್ತಿದ್ದಾರೆ. ಆರೋಪಿಯನ್ನು ಜೈಲಿಗೆ ಕಳುಹಿಸಲು ಎಸ್ಐಟಿಗೆ 35 ಲಕ್ಷ ರೂ. ಬಹುಮಾನ ನೀಡಿದ ಸರ್ಕಾರ, ವಿಡಿಯೋ ಹಂಚಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು. ಬಿಡದಿ ರೈತರ ಹೋರಾಟ ಮತ್ತು ನೈಸ್ ಅಕ್ರಮದಂತಹ ಗಂಭೀರ ವಿಷಯಗಳು ಮುನ್ನೆಲೆಗೆ ಬಂದಾಗಲೆಲ್ಲಾ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಜ್ವಲ್ ರೇವಣ್ಣ ಅವರ ಜೈಲು ಘಟನೆಗಳನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂದು ಅವರು ಆರೋಪಿಸಿದರು. ದೇವರ ಕೋಣೆಯಲ್ಲೇ ಬದುಕುವ ತಮ್ಮ ವೃದ್ಧ ತಾಯಿಯ ಬಗ್ಗೆಯೂ ಇವರು ಸುಳ್ಳು ಕಥೆಗಳನ್ನು ಸೃಷ್ಟಿಸಿ ನಿಂದಿಸಿದ್ದರೂ, ತಮ್ಮ ಕುಟುಂಬ ಎಂದಿಗೂ ರಕ್ಷಣೆಗಾಗಿ ಕೋರ್ಟ್ ಮೆರೆ ಹೋಗಿಲ್ಲ ಎಂದು ಸ್ಮರಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಹೆಚ್ಡಿಕೆ, “ಎಂಟು ವರ್ಷಗಳ ಕಾಲ ಸಿಎಂ ಆಗಿದ್ದ ನಿಮ್ಮ ವಿರುದ್ಧ ನಿಮ್ಮದೇ ಪಕ್ಷದಲ್ಲಿ ದೊಡ್ಡ ಸಂಚು ನಡೆದಿದೆ. ಇಂತಹ ಕುತಂತ್ರಗಳಿಗೆ ಹೆದರಿ ನ್ಯಾಯಾಲಯಗಳಿಂದ ತಡೆಯಾಜ್ಞೆ (Stay) ಪಡೆಯುವ ಬದಲು, ನಿಮ್ಮ ಹಳೆಯ ಹೋರಾಟದ ದನಿಯಲ್ಲಿ ಮಾತನಾಡಿ ಈ ಬ್ಲ್ಯಾಕ್ಮೇಲ್ ಸಂಸ್ಕೃತಿಗೆ ಅಂತ್ಯ ಹಾಡಿ” ಎಂದು ಕರೆ ನೀಡಿದರು. ರಾಜ್ಯದಲ್ಲಿ ಬರಗಾಲ, ರೈತರ ಸಂಕಷ್ಟಗಳಿದ್ದರೂ ಕೆಲವರು ತಮ್ಮ ಸ್ವಾರ್ಥಕ್ಕಾಗಿ 14 ವರ್ಷದ ಬಾಲಕಿಯನ್ನು ಪ್ರೇರೇಪಿಸಿ ಸ್ಟಿಂಗ್ ಆಪರೇಷನ್ ಮಾಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದ ಅವರು, ಇಂತಹ ಪಿಡುಗಿನ ವಿರುದ್ಧ ಎಲ್ಲಾ ಪಕ್ಷಗಳ ನಾಯಕರು ಧ್ವನಿ ಎತ್ತದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲರೂ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
Karnataka Politics News,

