Tue. Oct 13th, 2026

ಮೈಸೂರಿನಲ್ಲಿ ‘ಮನೆಮನೆಗೆ ಶುದ್ಧ ಜಲ’ ಯೋಜನೆ:ಒಂದು ವರ್ಷದ ಗಡುವು ನೀಡಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ 

Share this with Friends

ಮೈಸೂರು: ಪ್ರತಿಯೊಂದು ಮನೆಗೂ ನಲ್ಲಿಯ (Tap) ಮೂಲಕ ನೇರವಾಗಿ ಶುದ್ಧ ಕುಡಿಯುವ ನೀರನ್ನು ಪೂರೈಸುವ ಉದ್ದೇಶದ ಮಹತ್ವಾಕಾಂಕ್ಷೆಯ ‘ಮನೆಮನೆಗೆ ಶುದ್ಧ ಜಲ’ (Drink Directly from Tap) ಅಭಿಯಾನವನ್ನು ಮೈಸೂರು ನಗರದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.

ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಒಂದು ವರ್ಷದೊಳಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಗಡುವು ನೀಡಲಾಗಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಮುಖ ನಗರಗಳಲ್ಲಿ ಜಾರಿಯಲ್ಲಿರುವ ಮಾದರಿಯಲ್ಲೇ ಕರ್ನಾಟಕದಲ್ಲೂ ಈ ಆಧುನಿಕ ನೀರು ಸರಬರಾಜು ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ಒಡಿಶಾ ರಾಜ್ಯದ ಪುರಿ ನಗರದಲ್ಲಿ ಯಶಸ್ವಿಯಾಗಿರುವ ಈ ಯೋಜನೆಯನ್ನು, ರಾಜ್ಯದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಸಾಂಸ್ಕೃತಿಕ ನಗರಿ ಮೈಸೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಒಡಿಶಾ ಮಾದರಿಯ ಅನುಷ್ಠಾನ ಮತ್ತು ತಾಂತ್ರಿಕ ಸಮಾಲೋಚನೆ:

ಯೋಜನೆಯ ತಾಂತ್ರಿಕ ಅಂಶಗಳು, ಕಾರ್ಯಸಾಧ್ಯತೆ ಹಾಗೂ ಎದುರಾಗಬಹುದಾದ ಸವಾಲುಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಒಡಿಶಾ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ. ಜಿ. ಮತಿ ವಾತನನ್ ಅವರು ಸಭೆಯಲ್ಲಿ ಉಪಸ್ಥಿತರಿದ್ದು, ಒಡಿಶಾದಲ್ಲಿ ತಾವು ಈ ಯೋಜನೆಯನ್ನು ಜಾರಿಗೊಳಿಸಿದ ಅನುಭವಗಳು ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯವಿರುವ ತಾಂತ್ರಿಕ ಸಲಹೆಗಳನ್ನು ಹಂಚಿಕೊಂಡರು.

ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಒತ್ತು:

ಕೇವಲ ನೀರು ಪೂರೈಕೆಯಷ್ಟೇ ಅಲ್ಲದೆ, ನಗರದ ಕೊಳಗೇರಿ ಪ್ರದೇಶಗಳ ಸಮಗ್ರ ಪರಿವರ್ತನೆಗೆ ಸಭೆಯಲ್ಲಿ ಒತ್ತು ನೀಡಲಾಯಿತು. ತಂತ್ರಜ್ಞಾನ ಆಧಾರಿತ ಅನುಷ್ಠಾನ, ಸಾಮಾಜಿಕ ಮೂಲಸೌಕರ್ಯಗಳ ಬಲವರ್ಧನೆ ಮತ್ತು ಸುಸ್ಥಿರ ಜೀವನೋಪಾಯ ಮಾದರಿಗಳ ಮೂಲಕ ನಗರವಾಸಿಗಳ ಜೀವನಮಟ್ಟವನ್ನು ಸುಧಾರಿಸುವ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ನಗರಾಭಿವೃದ್ಧಿಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ಕಾರ್ಯತಂತ್ರಗಳನ್ನು ರೂಪಿಸಲು ಸಚಿವರು ಸೂಚಿಸಿದರು.

ರಾಜ್ಯದ ಇತರ ನಗರಗಳಿಗೂ ವಿಸ್ತರಣೆ:

ಮೈಸೂರು ನಗರದಲ್ಲಿ ಈ ಕುಡಿಯುವ ನೀರಿನ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದ ಬಳಿಕ, ಅಲ್ಲಿನ ಸಾಧಕ-ಬಾಧಕಗಳು ಹಾಗೂ ಫಲಿತಾಂಶಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತದೆ. ಆ ನಂತರ ಈ ಯೋಜನೆಯನ್ನು ರಾಜ್ಯದ ಇತರ ಪ್ರಮುಖ ನಗರ ಪ್ರದೇಶಗಳಿಗೂ ಹಂತ-ಹಂತವಾಗಿ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.

ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ. ಬಿ. ಕಾವೇರಿ, ಪೌರಾಡಳಿತ ನಿರ್ದೇಶನಾಲಯದ (DMA) ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (KUWSDB) ನಿರ್ದೇಶಕರು ಸೇರಿದಂತೆ ಇಲಾಖೆಯ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

 


Share this with Friends

Related Post