ಬೆಂಗಳೂರು: ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 14 ವರ್ಷದ ಬಾಲಕಿಯ ನೆರವಿಗೆ ಧಾವಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ತಮ್ಮ ಸ್ವಂತ ಖರ್ಚಿನಲ್ಲಿ 2.50 ಲಕ್ಷ ಮೌಲ್ಯದ ಪೋರ್ಟಬಲ್ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡಿಸಿದ್ದಾರೆ.
ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಸುಂಡಘಟ್ಟ ಗ್ರಾಮದ ರಾಜಲಕ್ಷ್ಮಿ ಮತ್ತು ಚಂದ್ರು ದಂಪತಿಯ ಪುತ್ರಿ, 9ನೇ ತರಗತಿ ವಿದ್ಯಾರ್ಥಿನಿ ನವ್ಯಶ್ರೀ (14) ಅನಾರೋಗ್ಯದಿಂದ ಬಳಲುತ್ತಿದ್ದಳು. ವೈದ್ಯರು ಆಕೆಗೆ ಗುಣಮಟ್ಟದ ಆಕ್ಸಿಜನ್ ಕಾನ್ಸಂಟ್ರೇಟರ್ ಬಳಸಲು ಸಲಹೆ ನೀಡಿದ್ದರು. ಆದರೆ ಆರ್ಥಿಕ ಸಂಕಷ್ಟದಲ್ಲಿದ್ದ ಪೋಷಕರಿಗೆ ದುಬಾರಿ ಉಪಕರಣ ಖರೀದಿಸಲು ಸಾಧ್ಯವಾಗಿರಲಿಲ್ಲ.
ಮನವಿಗೆ ಸ್ಪಂದಿಸಿದ ಸಚಿವರು:
ಕಳೆದ ಆಗಸ್ಟ್ 30ರಂದು ಬೆಂಗಳೂರಿನ ಜೆ.ಪಿ. ನಗರದ ನಿವಾಸದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದ ಪೋಷಕರು, ತಮ್ಮ ಮಗಳ ಜೀವ ಉಳಿಸಲು ನೆರವಾಗುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು, ವೈದ್ಯರಿಂದ ಸಂಪೂರ್ಣ ಮಾಹಿತಿ ಪಡೆದು 2.50 ಲಕ್ಷ ಮೌಲ್ಯದ ‘ಇಗೋಜೆನ್ ರೋವ್ 6’ (Inogen Rove 6) ಪೋರ್ಟಬಲ್ ಆಕ್ಸಿಜನ್ ಕಾನ್ಸಂಟ್ರೇಟರ್ ತರಿಸಿದ್ದರು.
ಗುರುವಾರ ಬೆಳಿಗ್ಗೆ ಬಾಲಕಿ ಮತ್ತು ಪೋಷಕರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಕುಮಾರಸ್ವಾಮಿ ಅವರು ಉಪಕರಣವನ್ನು ಹಸ್ತಾಂತರಿಸಿದರು. ಇಗೋಜೆನ್ ಕಂಪನಿಯ ತಂತ್ರಜ್ಞರು ಉಪಕರಣ ಬಳಸುವ ವಿಧಾನದ ಕುರಿತು ಪೋಷಕರಿಗೆ ಮಾಹಿತಿ ನೀಡಿದರು.
ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ:
ವೈದ್ಯರು ನೀಡುವ ಚಿಕಿತ್ಸೆಯನ್ನು ತಪ್ಪದೇ ಪಡೆಯುವಂತೆ ಬಾಲಕಿಗೆ ಕಿವಿಮಾತು ಹೇಳಿದ ಸಚಿವರು, ಮಗುವಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಕಾಲಕಾಲಕ್ಕೆ ಚಿಕಿತ್ಸೆ ಕೊಡಿಸಿ ತಮಗೆ ಮಾಹಿತಿ ನೀಡುವಂತೆ ಪೋಷಕರಿಗೆ ಸೂಚಿಸಿದರು. ತಮ್ಮ ಸಂಕಷ್ಟಕ್ಕೆ ನೆರವಾದ ಸಚಿವರಿಗೆ ಬಾಲಕಿ ನವ್ಯಶ್ರೀ ಹಾಗೂ ಪೋಷಕರು ಭಾವುಕರಾಗಿ ಕೃತಜ್ಞತೆ ಸಲ್ಲಿಸಿದರು.

