ಬೆಂಗಳೂರು: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿ ಮುಂದಿನ ವರ್ಷ ವಿಶ್ವ ಕನ್ನಡ ಸಮ್ಮೇಳನ ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಹೇಳಿಕೆಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ಕನ್ನಡಿಗರ ಬದುಕು, ಉದ್ಯೋಗ ಮತ್ತು ಶಿಕ್ಷಣ ವ್ಯವಸ್ಥೆ ಸಂಕಷ್ಟದಲ್ಲಿರುವಾಗ ಇಂತಹ ಸಂಭ್ರಮದ ಸಮ್ಮೇಳನಗಳನ್ನು ನಡೆಸುವುದು ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಮುಡಿದಂತಿದೆ ಎಂದು ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.
ನಾಯಕತ್ವ ಮತ್ತು ಭಾಷಾ ನೀತಿಗೆ ವಿರೋಧ:
ತ್ರಿಭಾಷಾ ನೀತಿ ಹಾಗೂ ಹಿಂದಿ ಕಲಿಕೆಯ ಪರವಾಗಿರುವ ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಸರ್ಕಾರದ ತೀರ್ಮಾನವನ್ನು ನಾರಾಯಣಗೌಡ ಪ್ರಶ್ನಿಸಿದ್ದಾರೆ. ಉತ್ತರ ಭಾರತದ ರಾಜ್ಯಗಳ ಮಕ್ಕಳು ಎರಡು ಭಾಷೆಗಳನ್ನು ಮಾತ್ರ ಕಲಿತು ತಾಂತ್ರಿಕ ಕೌಶಲ್ಯದತ್ತ ಗಮನಹರಿಸುತ್ತಿದ್ದರೆ, ಕರ್ನಾಟಕದ ಮಕ್ಕಳು ಮೂರನೇ ಭಾಷೆಯ ಹೊರೆ ಹೊರಬೇಕಾಗಿದೆ. ದ್ವಿಭಾಷಾ ನೀತಿ ಜಾರಿಗೆ ತರುವ ವಿಚಾರದಲ್ಲಿ ಸರ್ಕಾರ ಮೌನವಹಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಉದ್ಯೋಗ ಮತ್ತು ಮೀಸಲಾತಿ ಆಗ್ರಹ:
ಸರ್ಕಾರದ ಉನ್ನತ ಮಟ್ಟದ ಸಮಿತಿಯ ವರದಿಯ ಪ್ರಕಾರ ರಾಜ್ಯದ ಎಂಜಿನಿಯರಿಂಗ್ ಪದವೀಧರರಲ್ಲಿ ಕೇವಲ ಶೇ. 17ರಷ್ಟು ಮಂದಿಗೆ ಮಾತ್ರ ಉದ್ಯೋಗ ದೊರೆತಿದೆ. ಐಟಿ-ಬಿಟಿ ಸೇರಿದಂತೆ ಖಾಸಗಿ ವಲಯದಲ್ಲಿ ಹೊರರಾಜ್ಯದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ. 80ರಷ್ಟು ಮೀಸಲಾತಿ ಕಲ್ಪಿಸುವ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಖಾಸಗಿ ಕಂಪನಿಗಳಲ್ಲಿ ಕನ್ನಡಿಗರ ಉದ್ಯೋಗದ ವಿವರ ಕೇಳಲು ಕರವೇ ಕಾರ್ಯಕರ್ತರು ಮುಂದಾದರೆ ಮುಖ್ಯಮಂತ್ರಿಗಳು ‘ಮಾರಲ್ ಪೋಲೀಸಿಂಗ್’ ಎಂದು ಉಪದೇಶ ನೀಡುತ್ತಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಪಿಎಸ್ಸಿ ಮತ್ತು ಕನ್ನಡ ಶಾಲೆಗಳ ಸ್ಥಿತಿ:
ರಾಜ್ಯದ ಇಲಾಖೆಗಳಿಗೆ ನೇಮಕಾತಿ ನಡೆಸುವ ಕೆಪಿಎಸ್ಸಿ (KPSC) ವ್ಯವಸ್ಥೆ ಭ್ರಷ್ಟಾಚಾರ ಮತ್ತು ಪರೀಕ್ಷೆಗಳ ರದ್ದತಿಯಿಂದಾಗಿ ಉದ್ಯೋಗಾಕಾಂಕ್ಷಿಗಳ ಬದುಕನ್ನು ಅತಂತ್ರಗೊಳಿಸಿದೆ. ಇನ್ನೊಂದೆಡೆ, ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ಮತ್ತು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುತ್ತಿರುವುದು ಸರಿಯಲ್ಲ ಎಂದು ಅವರು ದೂರಿದ್ದಾರೆ.
ಕನ್ನಡಿಗರ ರಕ್ಷಣೆಗೆ ಕಠಿಣ ಕಾಯ್ದೆಗಳನ್ನು ರೂಪಿಸದೆ ಕೇವಲ ರಾಜಕೀಯ ಲಾಭಕ್ಕಾಗಿ ಸಮ್ಮೇಳನ ನಡೆಸಿದರೆ, ಸರ್ಕಾರದ ನೀತಿಗಳ ವಿರುದ್ಧ ಜನರು ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಟಿ.ಎ. ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

