Sat. Sep 26th, 2026

ರೈತರ ಮೇಲಿನ ಪೊಲೀಸ್ ದಬ್ಬಾಳಿಕೆಗೆ ಹೆಚ್‌ಡಿಕೆ ಆಕ್ರೋಶ: ಅಧಿಕಾರಿಗಳಿಗೆ 2 ದಿನಗಳ ಗಡುವು

Share this with Friends

ರಾಮನಗರ/ಚನ್ನಪಟ್ಟಣ: ಬಿಡದಿ ಕೈಗಾರಿಕಾ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಬೈರಮಂಗಲದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರನ್ನು ಬಲವಂತವಾಗಿ ಬಂಧಿಸಿರುವುದನ್ನು ಖಂಡಿಸಿ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಖಂಡಿಸಿದರು.

ಚನ್ನಪಟ್ಟಣದ ಪೊಲೀಸ್ ಭವನಕ್ಕೆ ಜಂಟಿ ಭೇಟಿ ನೀಡಿ ರೈತರ ಆರೋಗ್ಯ ವಿಚಾರಿಸಿದ ಕುಮಾರಸ್ವಾಮಿ, ಬಂಧಿತ ರೈತರು ಮತ್ತು ಪ್ರತಿಭಟನಾನಿರತ ಮಹಿಳೆಯರ ಅಳಲನ್ನು ಆಲಿಸಿ, ಸರ್ಕಾರದ ಮತ್ತು ಪೊಲೀಸರ ದಬ್ಬಾಳಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಪ್ಪಿತಸ್ಥ ಅಧಿಕಾರಿಗಳಿಗೆ ಕುಮಾರಸ್ವಾಮಿ ಗಡುವು:

ಪ್ರತಿಭಟನಾ ನಿರತ ರೈತ ಮಹಿಳೆಯರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ಕಟು ಶಬ್ದಗಳಿಂದ ಖಂಡಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, “ರೈತರ ಒಪ್ಪಿಗೆಯಿಲ್ಲದೆ ಅವರ ಭೂಮಿಯನ್ನು ಕಸಿದುಕೊಳ್ಳಲು ಸರ್ಕಾರಕ್ಕೆ ಬಿಡುವುದಿಲ್ಲ. ಶಾಂತಿಯುತವಾಗಿ ಹೋರಾಡುತ್ತಿದ್ದ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸಿರುವ ಪೊಲೀಸರ ಕ್ರಮ ಅಕ್ಷಮ್ಯ,” ಎಂದು ಕಿಡಿಕಾರಿದರು. ಈ ಘಟನೆಗೆ ಕಾರಣರಾದ ಮತ್ತು ದೌರ್ಜನ್ಯ ಎಸಗಿದ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಐಜಿಪಿ (IGP) ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (SP) ಎರಡು ದಿನಗಳ ಕಟ್ಟುನಿಟ್ಟಿನ ಗಡುವು ನೀಡಿದರು.

ರೈತರ ಮನವೊಲಿಸಿ ಧರಣಿ ಅಂತ್ಯ:

ಅದಾಗ್ಯೂ, ಪೊಲೀಸ್ ಭವನದಲ್ಲೇ ಪ್ರತಿಭಟನೆ ಮುಂದುವರಿಸಿದ್ದ ರೈತರು ಹಾಗೂ ರೈತ ಮಹಿಳೆಯರೊಂದಿಗೆ ನಿರಂತರ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ ಅವರು ಧರಣಿ ಕೈಬಿಡುವಂತೆ ಮನವೊಲಿಸಿದರು. ನಂತರ ಕುಮಾರಣ್ಣ ಅವರು ನೀಡಿದ ಹಣ್ಣಿನ ರಸವನ್ನು ಸೇವಿಸುವ ಮೂಲಕ ರೈತರು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಅಧಿಕೃತವಾಗಿ ಅಂತ್ಯಗೊಳಿಸಿದರು.

ರೈತರ ಬೆನ್ನಿಗೆ ನಿಲ್ಲುವೆ ಎಂದ ನಿಖಿಲ್ ಕುಮಾರಸ್ವಾಮಿ:

ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, “ನಮ್ಮ ಅನ್ನದಾತರಿಗೆ ನ್ಯಾಯ ಸಿಗುವವರೆಗೂ ಜೆಡಿಎಸ್ ಪಕ್ಷವು ಅವರ ಬೆನ್ನಿಗೆ ಬಂಡೆಯಂತೆ ನಿಂತು ಹೋರಾಟ ಮುಂದುವರಿಸಲಿದೆ. ರೈತರ ಒಪ್ಪಿಗೆಯಿಲ್ಲದೆ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುವ ಸರ್ಕಾರದ ರಿಯಲ್ ಎಸ್ಟೇಟ್ ತಂತ್ರಗಳಿಗೆ ನಾವು ಮಣಿಯುವುದಿಲ್ಲ,” ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮೈತ್ರಿಕೂಟದ ಸಂಸದರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ನೂರಾರು ರೈತರು ಹಾಗೂ ರೈತ ಮಹಿಳೆಯರು ಉಪಸ್ಥಿತರಿದ್ದರು.

ರಾತ್ರೋರಾತ್ರಿ ಪೋಸ್ಟರ್ ಅಂಟಿಸುವ ಪುಂಡ-ಪೋಕರಿಗಳಿಗೆ ನಾನು ಉತ್ತರಿಸಲ್ಲ; ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ

“ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ರಾತ್ರೋರಾತ್ರಿ ಕಳ್ಳರಂತೆ ಪೋಸ್ಟರ್ ಅಂಟಿಸುವ ಕಾಂಗ್ರೆಸ್‌ನ ಪುಂಡ-ಪೋಕರಿಗಳ ಕೆಲಸಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಿಜವಾಗಿಯೂ ಧೈರ್ಯವಿದ್ದರೆ ಸಾರ್ವಜನಿಕವಾಗಿ ಬಂದು ಗಂಡಸ್ತನದ ರಾಜಕೀಯ ಮಾಡಲಿ,” ಎಂದು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಡದಿ ಭಾಗದಲ್ಲಿ ನಡೆದಿರುವ ಪೋಸ್ಟರ್ ಅಭಿಯಾನದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಡಳಿತ ಪಕ್ಷದ ನಾಯಕರ ಕುಮ್ಮಕ್ಕಿನಿಂದಲೇ ಈ ರೀತಿಯ ಕೀಳುಮಟ್ಟದ ಕೃತ್ಯಗಳು ನಡೆಯುತ್ತಿವೆ ಎಂದು ನೇರ ಆರೋಪ ಮಾಡಿದರು.

ನಮಗೂ ಪೋಸ್ಟರ್ ರಾಜಕೀಯ ಗೊತ್ತು:

“ತಮ್ಮ ಚೇಳುಗಳನ್ನು ಬಿಟ್ಟು ರಾತ್ರೋರಾತ್ರಿ ಪೋಸ್ಟರ್ ಅಂಟಿಸುವ ಈ ನಾಟಕವನ್ನು ಕಾಂಗ್ರೆಸ್‌ನವರು ನಿಲ್ಲಿಸಬೇಕು. ನಮಗೂ ಪೋಸ್ಟರ್ ಅಭಿಯಾನ ಮಾಡುವುದು ಚೆನ್ನಾಗಿ ಗೊತ್ತು. ನಮ್ಮ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಬೀದಿಗಿಳಿದರೆ ಇವರಿಗೆ ತಡೆಯಲು ಸಾಧ್ಯವಿಲ್ಲ. ಆದರೆ ನಾವು ಇಂತಹ ಕೀಳುಮಟ್ಟದ ರಾಜಕೀಯ ಸಂಸ್ಕೃತಿಗೆ ಕೈಹಾಕುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂವಿಧಾನಿಕವಾಗಿ ಹೋರಾಡುವುದನ್ನು ನಮ್ಮ ತಾತ ಹೆಚ್.ಡಿ. ದೇವೇಗೌಡರು ಮತ್ತು ತಂದೆ ಕುಮಾರಸ್ವಾಮಿ ಅವರು ನಮಗೆ ಕಲಿಸಿಕೊಟ್ಟಿದ್ದಾರೆ,” ಎಂದು ತಿರುಗೇಟು ನೀಡಿದರು.

 

 


Share this with Friends

Related Post