Sun. Nov 15th, 2026

ರಾಮನಗರ ಬಿಡುವ ಪ್ರಶ್ನೆಯೇ ಇಲ್ಲ; ರಾಜ್ಯ ರಾಜಕಾರಣಕ್ಕೆ ಮರಳುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

Share this with Friends

ರಾಮನಗರ: ನನ್ನನ್ನು ನಾಯಕನನ್ನಾಗಿ ಬೆಳೆಸಿ, ರಾಜಕೀಯವಾಗಿ ಜನ್ಮ ನೀಡಿದ ರಾಮನಗರ ಜಿಲ್ಲೆಯನ್ನು ಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯ ರಾಜಕಾರಣಕ್ಕೆ ಮರಳುವ ಕುರಿತು ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಭಾನುವಾರ ಶ್ರೀ ನಾಗಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಷ್ಟ್ರ ರಾಜಕಾರಣದಲ್ಲಿ ಎಷ್ಟೇ ಕಾರ್ಯನಿರತರಾಗಿದ್ದರೂ ರಾಮನಗರದ ನಾಲ್ಕೂ ವಿಧಾನಸಭಾ ಕ್ಷೇತ್ರಗಳಿಗಾಗಿ ಪ್ರತ್ಯೇಕ ಸಮಯ ಮೀಸಲಿಡುತ್ತೇನೆ. ನಾನು ಮತ್ತು ನಿಖಿಲ್ ಕುಮಾರಸ್ವಾಮಿ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆಗೆ ಮತ್ತಷ್ಟು ಶಕ್ತಿ ತುಂಬಲಿದ್ದೇವೆ. ನನ್ನ ಅನಾರೋಗ್ಯದ ನಡುವೆಯೂ ನಿಖಿಲ್ ಈಗಾಗಲೇ ರಾಜ್ಯದ 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಸಂಘಟನೆಯಲ್ಲಿ ತೊಡಗಿದ್ದಾರೆ. ನಾನು ಕೂಡ ಪ್ರತಿ ತಿಂಗಳು ಎರಡು-ಮೂರು ದಿನಗಳನ್ನು ರಾಮನಗರ ಜಿಲ್ಲೆಗಾಗಿ ಮೀಸಲಿಡುತ್ತೇನೆ ಎಂದರು.

ವಿರೋಧಿಗಳ ಭ್ರಮೆ ನಡೆಯುವುದಿಲ್ಲ:

ರಾಮನಗರ ಜಿಲ್ಲೆಯಿಂದ ನಮ್ಮ ಕುಟುಂಬವನ್ನು ಹೊರಹಾಕುತ್ತೇವೆ ಎಂದು ಕೆಲ ವಿರೋಧಿಗಳು ಭ್ರಮೆಯಲ್ಲಿದ್ದಾರೆ. ದೇವೇಗೌಡರ ಕಾಲದಿಂದಲೂ ಜಿಲ್ಲೆಯ ಜನರು ಮತ್ತು ಕಾರ್ಯಕರ್ತರು ನಮ್ಮ ಜೊತೆ ಗಟ್ಟಿಯಾಗಿ ನಿಂತಿದ್ದಾರೆ. ಜನರ ಪ್ರೀತಿ ಮತ್ತು ಆಶೀರ್ವಾದ ಇರುವವರೆಗೂ ವಿರೋಧಿಗಳ ರಾಜಕಾರಣ ನಡೆಯುವುದಿಲ್ಲ ಎಂದು ತಿರುಗೇಟು ನೀಡಿದರು.

ದೇವಾಲಯಕ್ಕೆ ಬೀಗ ಹಾಕಿದ ಘಟನೆಗೆ ಆಕ್ರೋಶ:

ದೊಡ್ಡ ಕುರುಬರಹಳ್ಳಿಯಲ್ಲಿ ದೇವಾಲಯಕ್ಕೆ ಬೀಗ ಹಾಕಿ ಅಡ್ಡಿಪಡಿಸಿರುವುದನ್ನು ಚಿಲ್ಲರೆ ರಾಜಕಾರಣ ಎಂದು ಟೀಕಿಸಿದ ಕುಮಾರಸ್ವಾಮಿ, 2004ರಲ್ಲೂ ಕೂಟಗಲ್ಲು ಹೊಸೂರು ಗ್ರಾಮದಲ್ಲಿ ನನಗೆ ಇದೇ ರೀತಿ ಪ್ರವೇಶ ನಿರಾಕರಿಸಲಾಗಿತ್ತು. ಆದರೆ ನಮ್ಮ ಕಾರ್ಯಕರ್ತರಿಗೆ ಶಾಂತಿಯಿಂದ ಇರುವಂತೆ ಸೂಚಿಸಿದ್ದೇನೆ. ದೇವಾಲಯಕ್ಕೆ ಬೀಗ ಹಾಕಿದ್ದು ತಪ್ಪು ಎಂದು ಕಾಂಗ್ರೆಸ್‌ನ ಕೆಲ ನಾಯಕರೇ ಒಪ್ಪಿಕೊಂಡಿರುವುದು ಸಮಾಧಾನದ ಸಂಗತಿ ಎಂದು ವ್ಯಂಗ್ಯವಾಡಿದರು.

ಸರ್ಕಾರದ ‘ಸಾಕ್ಷಿಗುಡ್ಡೆ’ ಕುರಿತು ವಾಗ್ದಾಳಿ:

ನಮ್ಮ ಸಾಕ್ಷಿಗುಡ್ಡೆ ಬಗ್ಗೆ ಪ್ರಶ್ನಿಸುವವರು ಕಳೆದ ಮೂರೂವರೆ ವರ್ಷಗಳಲ್ಲಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಕೇವಲ ಘೋಷಣೆಗಳೇ ಈ ಸರ್ಕಾರದ ಸಾಕ್ಷಿಗುಡ್ಡೆಯಾಗಿವೆ ಎಂದರು. ಕನಕಪುರದಲ್ಲಿ ಊರಿಗೆ ಊರುಗಳನ್ನೇ ಎತ್ತಂಗಡಿ ಮಾಡುತ್ತಿರುವುದು ಹಾಗೂ ಕಲ್ಲುಗಳನ್ನು ಹೊಡೆದು ವಿದೇಶಕ್ಕೆ ಸಾಗಿಸಿರುವುದೇ ಇವರ ಸಾಕ್ಷಿಗುಡ್ಡೆಯಾಗಿದೆ. ಈಗ ಜ್ಞಾನೋದಯವಾಗಿ ಮೆಟ್ರೋ ಕಾಮಗಾರಿಗೆ ರಾಜ್ಯದ ಕಲ್ಲು ಬಳಸಿ ಎಂದು ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

 


Share this with Friends

Related Post