Sat. Oct 31st, 2026

ಕನ್ನಡ ರಾಜ್ಯೋತ್ಸವಕ್ಕೆ ಎಚ್‌ಎಂಟಿಯಿಂದ ವಿಶೇಷ ಕೊಡುಗೆ: ಇಂದು ‘HMT ಕನ್ನಡಿಗ’ ಕೈಗಡಿಯಾರ ಲೋಕಾರ್ಪಣೆ

Share this with Friends

ನವದೆಹಲಿ: ಹರಿದು ಹಂಚಿಹೋಗಿರುವ ನಾಡಿನ ಎಲ್ಲಾ ಕನ್ನಡಪರ ಸಂಘಟನೆಗಳು ಮತ್ತು ಹೋರಾಟಗಾರರು ಕರ್ನಾಟಕದ ಹಿತ ಕಾಯಲು ಒಂದೇ ವೇದಿಕೆಯಡಿ ಬರಬೇಕು. ನಿಮ್ಮೆಲ್ಲರ ದನಿ ಒಂದೇ ಆಗಿರಬೇಕು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕರೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಲಾಗಿರುವ ಬಹುನಿರೀಕ್ಷಿತ ‘HMT ಕನ್ನಡಿಗ’ ವಿಶೇಷ ಕೈಗಡಿಯಾರಗಳ ಬಿಡುಗಡೆ ಸಮಾರಂಭಕ್ಕೆ ಮುಖಂಡರನ್ನು ಆಹ್ವಾನಿಸಲು ನವದೆಹಲಿಯ ತಮ್ಮ ಸಚಿವಾಲಯದ ಕಚೇರಿಯಿಂದಲೇ ಸಚಿವರು ಆನ್‌ಲೈನ್ ಮೂಲಕ ಕನ್ನಡ ಹೋರಾಟಗಾರರ ಮಹತ್ವದ ಸಭೆ ನಡೆಸಿದರು. ಸುಮಾರು 25ಕ್ಕೂ ಹೆಚ್ಚು ಪ್ರಮುಖ ಕನ್ನಡ ಒಕ್ಕೂಟಗಳ ರಾಜ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಸಚಿವರು ಭಾಷೆ ಮತ್ತು ನಾಡಿನ ಉಳಿವಿಗಾಗಿ ಒಗ್ಗಟ್ಟಿನ ಮಂತ್ರ ಬೋಧಿಸಿದರು.

ಎಚ್‌ಎಂಟಿಗೆ ಮರು ವೈಭವದ ಸಂಕಲ್ಪ:

ಒಂದು ಕಾಲದಲ್ಲಿ ದೇಶದ ಹೆಮ್ಮೆಯಾಗಿದ್ದ ಎಚ್‌ಎಂಟಿ ಕಾರ್ಖಾನೆಗೆ ಮರಳಿ ಹಳೆಯ ವೈಭವವನ್ನು ತಂದುಕೊಡುವ ಪ್ರಾಮಾಣಿಕ ಪ್ರಯತ್ನವನ್ನು ತಾವು ಮಾಡುತ್ತಿರುವುದಾಗಿ ಸಚಿವರು ತಿಳಿಸಿದರು. ಇದರ ಮೊದಲ ಹೆಜ್ಜೆಯಾಗಿ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ತಮ್ಮ ಇಲಾಖೆಯ ವತಿಯಿಂದ ಸಿದ್ಧಪಡಿಸಲಾಗಿರುವ ‘HMT ಕನ್ನಡಿಗ’ ವಾಚ್‌ಗಳನ್ನು ಲೋಕಾರ್ಪಣೆಗೊಳಿಸುತ್ತಿರುವುದಾಗಿ ಹೆಮ್ಮೆಯಿಂದ ಪ್ರಕಟಿಸಿದರು.

ಸಂಪತ್ತಿನ ದುರುಪಯೋಗ ತಡೆಯಿರಿ:

ರಾಜ್ಯದ ತೆರಿಗೆ ಹಣ ಪೋಲಾಗುತ್ತಿರುವುದು ಹಾಗೂ ಸಂಪತ್ತು ದುರುಪಯೋಗವಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಕುಮಾರಸ್ವಾಮಿ, “ಕನ್ನಡದ ರಕ್ಷಣೆಯಲ್ಲಿ ಹೋರಾಟಗಾರರ ಪಾತ್ರ ಅನನ್ಯವಾಗಿದೆ. ನೀವೆಲ್ಲರೂ ಒಂದಾದರೆ ಅದೊಂದು ಮಹಾನ್ ಶಕ್ತಿಯಾಗಿ ಹೊರಹೊಮ್ಮಲಿದೆ. ಈ ರಾಜ್ಯೋತ್ಸವದ ಸಂದರ್ಭದಲ್ಲಿ ನೀವೆಲ್ಲರೂ ಒಟ್ಟಾಗುವ ಪಣ ತೊಡಬೇಕು. ನಿಮ್ಮ ಎಲ್ಲಾ ನೋವು-ಸಂಕಟಗಳಿಗೆ ನಾನು ಸದಾ ಸ್ಪಂದಿಸುತ್ತೇನೆ. ಯಾರೂ ಧೃತಿಗೆಡಬೇಕಾದ ಅಗತ್ಯವಿಲ್ಲ, ನಿಮ್ಮ ಬೆನ್ನಿಗೆ ನಾನಿದ್ದೇನೆ,” ಎಂದು ಭರವಸೆ ನೀಡಿದರು.

ಕೆಲವು ಸೂಕ್ಷ್ಮ ವಿಚಾರಗಳ ಮಧ್ಯೆಯೂ ತಮಗೆ ಸಿಕ್ಕಿರುವ ಇತಿಮಿತಿಯಲ್ಲೇ ಕನ್ನಡ ನಾಡಿನ ಸ್ವಾಭಿಮಾನ ಎತ್ತಿಹಿಡಿಯುವ ಕೆಲಸ ಮಾಡುತ್ತಿರುವುದಾಗಿ ಹೇಳಿದ ಸಚಿವರು, ಭಾನುವಾರ ನಡೆಯಲಿರುವ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಎಲ್ಲಾ ಕನ್ನಡ ಮುಖಂಡರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು.

 


Share this with Friends

Related Post