ದಾವಣಗೆರೆ: “ಬಿಜೆಪಿಯವರು ನನ್ನನ್ನು ಸಾಲದ ರಾಮಯ್ಯ ಎಂದು ಟೀಕಿಸುತ್ತಾರೆ. ಆದರೆ, ಹಸಿದವರ ಹೊಟ್ಟೆ ತುಂಬಿಸುತ್ತಿರುವ ನಾನು ಜನರ ಪಾಲಿನ ‘ಅನ್ನದ ರಾಮಯ್ಯ’. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ನೀವು ಅದಕ್ಕೆ ಉತ್ತರ ನೀಡಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷಗಳಿಗೆ ಸವಾಲು ಹಾಕಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ ಪರವಾಗಿ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಅಬ್ಬರದ ರೋಡ್ ಶೋನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕುಟುಂಬ ರಾಜಕಾರಣದ ಆರೋಪಕ್ಕೆ ತಿರುಗೇಟು:
ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ ಎಂಬ ಬಿಜೆಪಿ ನಾಯಕರ ಟೀಕೆಗೆ ಕಿಡಿಕಾರಿದ ಸಿಎಂ, “ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಿ.ವೈ. ರಾಘವೇಂದ್ರ ಹಾಗೂ ದೇವೇಗೌಡರ ಕುಟುಂಬದ ಮಕ್ಕಳು, ಮೊಮ್ಮಕ್ಕಳು ಚುನಾವಣೆಗೆ ಸ್ಪರ್ಧಿಸುತ್ತಿಲ್ಲವೇ? ಅದು ಕುಟುಂಬ ರಾಜಕಾರಣವಲ್ಲವೇ? ನಮ್ಮ ಅಭ್ಯರ್ಥಿ ಸಮರ್ಥ್ ಒಬ್ಬ ಸುಶಿಕ್ಷಿತ ಯುವಕ. ರಾಜಕಾರಣಕ್ಕೆ ಬೇಕಾದ ಎಲ್ಲಾ ಅರ್ಹತೆಗಳು ಅವರಲ್ಲಿದೆ. ದಾವಣಗೆರೆ ಜಿಲ್ಲೆಗೆ ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಅಪಾರವಾಗಿದ್ದು, ಸಮರ್ಥ್ ಗೆಲುವಿನಿಂದ ನಮಗೆ ಆನೆಬಲ ಬಂದಂತಾಗುತ್ತದೆ” ಎಂದರು.
ಗ್ಯಾರಂಟಿ ಯೋಜನೆಗಳೇ ನಮ್ಮ ಶಕ್ತಿ:
ಸರ್ಕಾರದ ಸಾಧನೆಗಳನ್ನು ತೆರೆದಿಟ್ಟ ಮುಖ್ಯಮಂತ್ರಿಗಳು, “ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಬರೊಬ್ಬರಿ 1.43 ಲಕ್ಷ ಕೋಟಿ ರೂಪಾಯಿ ವಿನಿಯೋಗಿಸಿದ್ದೇವೆ. ದಾವಣಗೆರೆ ಒಂದಕ್ಕೇ 538 ಕೋಟಿ ರೂಪಾಯಿ ತಲುಪಿದೆ. ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ಬಡವರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದೆ. ಈ ಹಿಂದೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 600 ಭರವಸೆಗಳಲ್ಲಿ ಶೇ.10ನ್ನೂ ಈಡೇರಿಸಲಿಲ್ಲ. ಆದರೆ ನಾವು ಕೊಟ್ಟ ಮಾತಿನಂತೆ 5ಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ” ಎಂದು ಹೆಮ್ಮೆಯಿಂದ ನುಡಿದರು.
ಸಿದ್ದಾಂತದ ಹೋರಾಟ:
“ಕಾಂಗ್ರೆಸ್ ಪಕ್ಷವು ಮಹಾತ್ಮ ಗಾಂಧಿ, ಅಂಬೇಡ್ಕರ್ ಮತ್ತು ಬಸವಣ್ಣನವರ ತತ್ವಗಳ ಅಡಿಯಲ್ಲಿ ‘ಸರ್ವ ಜನಾಂಗದ ಶಾಂತಿಯ ತೋಟ’ ನಿರ್ಮಿಸಲು ಶ್ರಮಿಸುತ್ತಿದೆ. ಆದರೆ ಬಿಜೆಪಿ ಗೋಡ್ಸೆ ಮತ್ತು ಮನುವಾದಿಗಳ ಸಿದ್ಧಾಂತದ ಹಾದಿಯಲ್ಲಿ ನಡೆಯುತ್ತಿದೆ. ತಳ ಸಮುದಾಯದ ಅಭಿವೃದ್ಧಿಯೇ ನಮ್ಮ ಸರ್ಕಾರದ ಮೂಲ ಮಂತ್ರ” ಎಂದು ಅವರು ಪ್ರತಿಪಾದಿಸಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ ಅವರು ಭಾರಿ ಬಹುಮತದಿಂದ ಗೆಲ್ಲುವ ವಿಶ್ವಾಸವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.

