Wed. Sep 23rd, 2026

BREAKING: ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ರಾಜಿನಾಮೆ; ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ!

Share this with Friends

ಬೆಂಗಳೂರು/ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಹೊರಗಿಟ್ಟಿರುವುದನ್ನು ಪ್ರತಿಭಟಿಸಿ, ಆಡಳಿತ ಪಕ್ಷದ ಹಿರಿಯ ಶಾಸಕರಾದ ಯಶವಂತರಾಯಗೌಡ ವಿ. ಪಾಟೀಲ ಅವರು ತಮ್ಮ ಶಾಸಕ ಸ್ಥಾನಕ್ಕೆ ಸ್ವ-ಇಚ್ಛೆಯಿಂದ ರಾಜಿನಾಮೆ ನೀಡಿದ್ದಾರೆ. ಈ ಕುರಿತು ಅವರು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಅಧಿಕೃತವಾಗಿ ರಾಜಿನಾಮೆ ಪತ್ರವನ್ನು ರವಾನಿಸಿದ್ದಾರೆ.

ಬರ ಘೋಷಣೆಯಲ್ಲಿ ತಾರತಮ್ಯದ ಆರೋಪ:

ತಮ್ಮ ರಾಜಿನಾಮೆ ಪತ್ರದಲ್ಲಿ ಕ್ಷೇತ್ರದ ತೀವ್ರ ಆರ್ಥಿಕ ಹಾಗೂ ಕೃಷಿ ಬಿಕ್ಕಟ್ಟನ್ನು ಉಲ್ಲೇಖಿಸಿರುವ ಅವರು, “ವಿಜಯಪುರ ಜಿಲ್ಲೆಯ ನಾನು ಪ್ರತಿನಿಧಿಸುವ ಇಂಡಿ ತಾಲೂಕು 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಬರಗಾಲಕ್ಕೆ ತುತ್ತಾಗಿದೆ. ಆರಂಭದಲ್ಲಿ ಬಿದ್ದ ಅಲ್ಪ ಮಳೆಯನ್ನು ನಂಬಿ ರೈತರು ಸಾಲಸೋಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದರು. ಆದರೆ ತದನಂತರ ಸಕಾಲಕ್ಕೆ ಮಳೆಯಾಗದ ಕಾರಣ ಇಡೀ ಬೆಳೆ ಒಣಗಿ ಹೋಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ತೀವ್ರ ತೊಂದರೆಯಾಗಿದೆ” ಎಂದು ವಿವರಿಸಿದ್ದಾರೆ.

ಈ ಹಿಂದೆ ಆಗಸ್ಟ್ 28, 2026 ರಂದು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳನ್ನು ಖುದ್ದಾಗಿ ಭೇಟಿ ಮಾಡಿ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ ಸರ್ಕಾರ ಬಿಡುಗಡೆ ಮಾಡಿದ ರಾಜ್ಯದ 188 ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ವಿಜಯಪುರ ಜಿಲ್ಲೆಯ ಒಟ್ಟು 13 ತಾಲೂಕುಗಳ ಪೈಕಿ ಕೇವಲ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಮಾತ್ರ ಕೈಬಿಡಲಾಗಿದೆ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಶಾಸಕನ ಅಸಮಾಧಾನ:

“ನಾನು ಆಡಳಿತ ಪಕ್ಷದ ಶಾಸಕನಾಗಿದ್ದು, ನಮ್ಮ ಸರ್ಕಾರಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸೂಕ್ಷ್ಮಮತಿಯಾಗಿ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇನೆ. ಆದರೂ ಸಹ ನಮ್ಮ ಮಾಹಿತಿಗೆ ಮತ್ತು ಜನರ ಭಾವನೆಗಳಿಗೆ ಯಾವುದೇ ಬೆಲೆ ಸಿಕ್ಕಿಲ್ಲ. ಈಗಿನ ರಾಜಕೀಯ ವಾತಾವರಣದಲ್ಲಿ ಬಲಾಢ್ಯರಿಗೆ, ಒತ್ತಡ ತಂತ್ರಗಳನ್ನು ಬಳಸುವವರಿಗೆ ಮಾತ್ರ ಮನ್ನಣೆ ಸಿಗುತ್ತಿದ್ದು, ನಮ್ಮಂತಹ ಸೌಮ್ಯ ಸ್ವಭಾವದವರ ಕ್ಷೇತ್ರಗಳ ಕೆಲಸಗಳಿಗೆ ಮನ್ನಣೆ ದೊರೆಯುತ್ತಿಲ್ಲ” ಎಂದು ಸರ್ಕಾರದ ವಿರುದ್ಧ ಪತ್ರದಲ್ಲಿ ನೇರ ಆಕ್ರೋಶ ಹೊರಹಾಕಿದ್ದಾರೆ.

ತಮ್ಮ ಕ್ಷೇತ್ರದ ಜನ ಸಾಮಾನ್ಯರ ಆಶೋತ್ತರಗಳಿಗೆ ಹಾಗೂ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯವಾಗದ ಕಾರಣಕ್ಕೆ ತೀವ್ರ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ತಿಳಿಸಿರುವ ಅವರು, ಇದನ್ನು ತಕ್ಷಣವೇ ಅಂಗೀಕರಿಸುವಂತೆ ಸ್ಪೀಕರ್ ಅವರಿಗೆ ಕೋರಿದ್ದಾರೆ. ಆಡಳಿತ ಪಕ್ಷದ ಶಾಸಕರೊಬ್ಬರೇ ಸರ್ಕಾರದ ವಿರುದ್ಧ ಬಂಡೆದ್ದು ರಾಜಿನಾಮೆ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.

 

 


Share this with Friends

Related Post