Tue. Jun 23rd, 2026

ಲಿಂಗೈಕ್ಯ ಕನಕಪುರ ಶ್ರೀಗಳಿಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ: ಧ್ವಜ ಹಸ್ತಾಂತರಿಸುವಾಗ ಬಿಕ್ಕಿ ಬಿಕ್ಕಿ ಅತ್ತ ಸಿಎಂ ಡಿ.ಕೆ. ಶಿವಕುಮಾರ್

Share this with Friends

ಕನಕಪುರ: ಸೋಮವಾರ ಲಿಂಗೈಕ್ಯರಾದ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಮಠದ ಆವರಣದಲ್ಲಿ ಭಾವಪೂರ್ಣ ಅಂತಿಮ ನಮನ ಸಲ್ಲಿಸಿದರು. ಶ್ರೀಗಳ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದ ಮುಖ್ಯಮಂತ್ರಿಯವರು ನಂತರ ಅವರ ಪಾದುಕೆಗಳಿಗೆ ನಮಸ್ಕರಿಸಿದರು.

ಅಂತಿಮ ವಿಧಿವಿಧಾನಗಳ ಅಂಗವಾಗಿ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಿದರು. ಇದಾದ ಬಳಿಕ ಮುಖ್ಯಮಂತ್ರಿಗಳು ಪಾರ್ಥಿವ ಶರೀರದ ಮೇಲಿದ್ದ ರಾಷ್ಟ್ರಧ್ವಜವನ್ನು ದೇಗುಲಮಠದ ಕಿರಿಯ ಸ್ವಾಮೀಜಿಗಳಿಗೆ ಹಸ್ತಾಂತರಿಸಿದರು.

ಒಡೆದ ದುಃಖದ ಕಟ್ಟೆ, ಭಾವುಕರಾದ ಮುಖ್ಯಮಂತ್ರಿ:

ಕಿರಿಯ ಸ್ವಾಮೀಜಿಗಳಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದುಃಖದ ಕಟ್ಟೆ ಒಡೆಯಿತು. ತೀವ್ರ ಭಾವುಕರಾಗಿ ಬಿಕ್ಕಿ ಬಿಕ್ಕಿ ಅಳುತ್ತಲೇ ಅವರು ಧ್ವಜವನ್ನು ಕಿರಿಯ ಶ್ರೀಗಳಿಗೆ ನೀಡಿದರು. ಮುಖ್ಯಮಂತ್ರಿಗಳ ಈ ಭಾವುಕತೆ ಅಂತಿಮ ದರ್ಶನಕ್ಕೆ ನೆರೆದಿದ್ದ ಸಹಸ್ರಾರು ಭಕ್ತರ ಕಣ್ಣುಗಳನ್ನು ತೇವಗೊಳಿಸಿತು. ತದನಂತರ ಶ್ರೀಗಳ ಗದ್ದುಗೆಯ ಸ್ಥಳಕ್ಕೆ ತೆರಳಿದ ಅವರು ವಿಭೂತಿ ಗಟ್ಟಿಗಳನ್ನು ಅರ್ಪಿಸಿ ವಿಶೇಷ ಪೂಜೆ ನೆರವೇರಿಸಿದರು. ತಾವೇಕೆ ಇಷ್ಟೊಂದು ಭಾವುಕರಾದಿರಿ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ, “ಇದು ಭಕ್ತನಿಗೂ ಹಾಗೂ ಭಗವಂತನಿಗೂ ಇರುವ ಅವಿನಾಭಾವ ಸಂಬಂಧ” ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಚುನಾವಣಾ ಖರ್ಚಿಗೆ ಹಣ ನೀಡಿ ಆಶೀರ್ವದಿಸಿದ್ದರು:

ಮಠದ ಆವರಣದಲ್ಲಿ ನೆರೆದಿದ್ದ ಭಕ್ತರನ್ನುದ್ದೇಶಿಸಿ ಹಾಗೂ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಶ್ರೀಗಳೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು. “ಶ್ರೀಗಳು ಅತ್ಯಂತ ಮಿತಭಾಷಿಯಾಗಿದ್ದರು. ಆದರೆ ಮೌನವಾಗಿಯೇ ಎಲ್ಲಾ ಸಾಮಾಜಿಕ ಮತ್ತು ಧಾರ್ಮಿಕ ಕೆಲಸಗಳನ್ನು ಅಚ್ಚುಕಟ್ಟಾಗಿ ನೆರವೇರಿಸುತ್ತಿದ್ದರು. ಇತ್ತೀಚಿನ ಚುನಾವಣೆಗೆ ಮುಂಚಿತವಾಗಿ ನಾನು ಅವರ ಆಶೀರ್ವಾದ ಪಡೆಯಲು ಹೋಗಿದ್ದೆ. ಆಗ ಅವರು ತೀವ್ರ ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿದ್ದರೂ ಸಹ, ತಮ್ಮ ಕೈಯಾರೆ ಹಣದ ಕಟ್ಟನ್ನು ನೀಡಿ ‘ಇದು ನಿನ್ನ ಚುನಾವಣಾ ಖರ್ಚಿಗೆ ನನ್ನ ಸಣ್ಣ ಕೊಡುಗೆ’ ಎಂದು ಆಶೀರ್ವದಿಸಿದ್ದರು. ಅವರಿಗೆ ಭವಿಷ್ಯದಲ್ಲಿ ಏನಾಗಲಿದೆ ಎಂಬ ಮುನ್ಸೂಚನೆ ಮೊದಲೇ ತಿಳಿದಿತ್ತು” ಎಂದು ಕೃತಜ್ಞತೆಯಿಂದ ಸ್ಮರಿಸಿದರು

ಶ್ರೀಮಠ ಹಾಗೂ ನಮ್ಮ ಕುಟುಂಬಕ್ಕೆ ನೂರಾರು ವರ್ಷಗಳ ಒಡನಾಟ:

“ನನಗೆ ಮೊದಲಿಗೆ ಕೆಂಪೇಗೌಡ ಎಂದು ಹೆಸರಿಡಲು ತೀರ್ಮಾನಿಸಲಾಗಿತ್ತು. ಆದರೆ ಶಿವಗಿರಿ ಕ್ಷೇತ್ರದ ವಿಶೇಷ ಅನುಗ್ರಹವಿದ್ದ ಕಾರಣಕ್ಕಾಗಿಯೇ ಶಿವಕುಮಾರ್ ಎಂದು ನಾಮಕರಣ ಮಾಡಲಾಯಿತು ಎಂದು ನಮ್ಮ ತಾಯಿ ಸದಾ ಹೇಳುತ್ತಿರುತ್ತಾರೆ” ಎಂದು ಶ್ರೀಮಠದೊಂದಿಗಿನ ತಮ್ಮ ಹೆಸರಿನ ನಂಟನ್ನು ಭಾವುಕರಾಗಿ ಸ್ಮರಿಸಿದರು.

ಮಠ-ಮಾನ್ಯಗಳೊಂದಿಗೆ ತಮಗಿರುವ ಅವಿನಾಭಾವ ಸಂಬಂಧವನ್ನು ಹಂಚಿಕೊಂಡ ಮುಖ್ಯಮಂತ್ರಿಗಳು, “ಮನೆ ಹುಷಾರು, ಮಠ ಹುಷಾರು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಅದರಂತೆ ನಮ್ಮ ಸಂಸ್ಕೃತಿಯ ಪ್ರಮುಖ ಭಾಗವಾಗಿರುವ ಮಠಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಾವು ಯಾರನ್ನೂ ಕೇಳಿ ಬರುವುದಿಲ್ಲ, ಅತಿಥಿಗಳಿಗೆ ನಾಳೆ ಬನ್ನಿ ಎನ್ನಬಹುದು ಆದರೆ ಸಾವಿಗೆ ನಾಳೆ ಬಾ ಎನ್ನಲು ಸಾಧ್ಯವಿಲ್ಲ. ಶ್ರೀಗಳ ಭೌತಿಕ ಕಾಯ ಮರೆಯಾದರೂ ನಿರ್ವಾಣ ಸ್ವಾಮಿಗಳ ಆದರ್ಶಗಳು ಸದಾ ಶಾಶ್ವತವಾಗಿರುತ್ತವೆ” ಎಂದರು.

ಅಜ್ಜನ ಕಾಲದ ಕೌಟುಂಬಿಕ ಒಡನಾಟ:

ದೇಗುಲಮಠ ಹಾಗೂ ತಮ್ಮ ಕುಟುಂಬದ ನಡುವೆ ನೂರಾರು ವರ್ಷಗಳ ಭವ್ಯ ಇತಿಹಾಸವಿದೆ ಎಂದು ನೆನೆದ ಡಿ.ಕೆ. ಶಿವಕುಮಾರ್, “ನಮ್ಮ ಅಜ್ಜನ ಕಾಲದಿಂದಲೂ ಮನೆಯಲ್ಲಿ ಯಾವುದೇ ಕಾರ್ಯ ನಡೆದರೂ ಇವರಿಗಿಂತ ಮುಂಚೆ ಇದ್ದ ಹಿರಿಯ ಸ್ವಾಮೀಜಿಯವರು ಬಂದು ಆಶೀರ್ವದಿಸುತ್ತಿದ್ದರು. ನಮ್ಮ ಪ್ರತಿಯೊಂದು ಶುಭಕಾರ್ಯಕ್ಕೂ ಅವರ ಅಭಯ ಹಸ್ತ ಮತ್ತು ಮಾರ್ಗದರ್ಶನ ಇರುತ್ತಿತ್ತು. ಅವರ ಚಿಂತನೆಗಳೇ ನಮಗೆ ದಾರಿದೀಪ” ಎಂದು ಕೃತಜ್ಞತೆ ಸಲ್ಲಿಸಿದರು.

ಸರ್ಕಾರಕ್ಕಿಂತ ಮೊದಲೇ ಅನ್ನ, ಅಕ್ಷರ ನೀಡಿದ ಮಠ:

“ಈ ಮಠವು ನಮ್ಮ ಜಿಲ್ಲೆಯ ಆಧ್ಯಾತ್ಮಿಕ ದೀಪವಾಗಿದೆ. ಸರ್ಕಾರಗಳು ಅನ್ನ, ಅಕ್ಷರ ಮತ್ತು ಆಶ್ರಯ ನೀಡುವುದಕ್ಕಿಂತ ಮುಂಚೆಯೇ ಈ ದೇಗುಲ ಮಠ ಹಾಗೂ ಸಿದ್ದಗಂಗಾ ಮಠಗಳು ಜನರಿಗೆ ಆಸರೆಯಾಗಿದ್ದವು. ಮೈಸೂರು ಮಹಾರಾಜರ ಕಾಲದಿಂದಲೂ ಸುಮಾರು 700 ವರ್ಷಗಳಿಂದ ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಈ ಮಠವು ಅಚಲವಾಗಿ ಜನಸೇವೆ ಮಾಡುತ್ತಾ ಬಂದಿದೆ. ಪ್ರಸಿದ್ಧ ಕರಿಯಪ್ಪನವರ ವಿದ್ಯಾಸಂಸ್ಥೆಗಿಂತಲೂ ಮೊದಲೇ ಈ ಭಾಗದಲ್ಲಿ ಅಕ್ಷರ ದಾನ ಆರಂಭಿಸಿದ ಕೀರ್ತಿ ಮಠಕ್ಕ ಸಲ್ಲುತ್ತದೆ. ಇಂದು ಜಗತ್ತಿನಾದ್ಯಂತ ಹರಡಿಕೊಂಡಿರುವ ದೊಡ್ಡ ದೊಡ್ಡ ಅಧಿಕಾರಿಗಳು, ಉದ್ಯಮಿಗಳು ಹಾಗೂ ಜನಪ್ರತಿನಿಧಿಗಳು ಈ ಮಠದ ವಿದ್ಯಾರ್ಥಿಗಳಾಗಿದ್ದಾರೆ” ಎಂದು ಹೆಮ್ಮೆಯಿಂದ ನುಡಿದರು.

ಶ್ರೀಮಠದ ಆಶೀರ್ವಾದದಿಂದ ಬೆಳೆದಿರುವ ಪ್ರತಿಯೊಬ್ಬ ಭಕ್ತರೂ ಮುಂದಿನ ದಿನಗಳಲ್ಲಿ ಒಟ್ಟಾಗಿ ಸೇರಿ, ಮಠದ ಸಮಾಜಮುಖಿ ಮತ್ತು ಜನಕಲ್ಯಾಣ ಕಾರ್ಯಗಳನ್ನು ಮತ್ತಷ್ಟು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಹೊಸ ಚಿಂತನೆ ನಡೆಸಲಾಗುವುದು ಎಂದು ಇದೇ ವೇಳೆ ಸಿಎಂ ಭರವಸೆ ನೀಡಿದರು.

“ಸುತ್ತೂರು ಶ್ರೀಗಳು ಈ ಮಠಕ್ಕೆ ಯಾವಾಗಲೂ ಆಧಾರಸ್ತಂಭವಾಗಿದ್ದರು. ಸಿದ್ದಗಂಗಾ ಮಠಕ್ಕೆ ಎಷ್ಟು ಹಿರಿತನ ಇದೆಯೋ ಅಷ್ಟೇ ಹಿರಿತನ ಹಳೇ ಮೈಸೂರು ಭಾಗದ ಈ ಮಠಕ್ಕೂ ಇದೆ. ಮರಣ ದೇಹಕ್ಕೆ ಹೊರತು ಜಂಗಮಕ್ಕಲ್ಲ. ಬಸವಣ್ಣವರ ತತ್ವ, ಚಿಂತನೆ ಆದರ್ಶಗಳನ್ನು ಮುನ್ನಡೆಸುತ್ತಿದ್ದರು. ಅಕ್ಷರ, ಅನ್ನ ದಾಸೋಹ ನಡೆಸುತ್ತಿದ್ದರು. ಕಿರಿಯ ಶ್ರೀಗಳ ಮಾರ್ಗದರ್ಶನದಂತೆ ಈ ಮಠದ ಸೇವೆಯನ್ನು ನಾವು ಮುಂದುವರೆಸುತ್ತೇವೆ. ಕನಕಪುರದ ಕಣ ಕಣದಲ್ಲೂ ದೇಗುಲ ಮಠವಿದೆ” ಎಂದರು.

“ನಿರ್ವಾಣ ಮಹಾಸ್ವಾಮಿಯವರಿಗೆ ಸರ್ಕಾರಿ ಗೌರವ ಸಲ್ಲಿಸುವ ಗೌರವ ಸಿಕ್ಕಿದ್ದು ನನ್ನ ಭಾಗ್ಯ. ಇದು ಭಾಗ್ಯ, ಇದು ಭಾಗ್ಯ ಇದು ಭಾಗ್ಯವಯ್ಯಾ ಪದುಮನಾಭನ ಪಾದ ಭಜನೆ ಪರಮ ಸುಖವಯ್ಯಾ. ನಾವೆಲ್ಲರೂ ಹಾಗೂ ಕಿರಿಯ ಶ್ರೀಗಳು ಸೇರಿ ಮಠದ ತತ್ವ, ಪರಂಪರೆಯನ್ನು ಉಳಿಸಿಕೊಂಡು ಹೋಗುತ್ತೇವೆ. ಇದು ನಮ್ಮ ಮಠ” ಎಂದು ಹೇಳಿದರು.

ಶ್ರೀಗಳ ಅಂತಿಮ ದರ್ಶನಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ನೆರೆಯ ತಮಿಳುನಾಡಿನಿಂದಲೂ ಸಹಸ್ರಾರು ಭಕ್ತರು ಆಗಮಿಸಿದ್ದರು.

 

 


Share this with Friends

Related Post