ಬೆಂಗಳೂರು: ದೇಶದಲ್ಲಿಯೇ ಅತ್ಯಂತ ಸುಧಾರಿತ ಮತ್ತು ಪರಿಣಾಮಕಾರಿ ಫೊರೆನ್ಸಿಕ್ ತನಿಖಾ ವ್ಯವಸ್ಥೆಯನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ಪ್ರಧಾನ ಕಚೇರಿಗೆ ಭೇಟಿ ನೀಡಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಈ ವಿಷಯ ಹಂಚಿಕೊಂಡಿದ್ದಾರೆ.
ಅಪರಾಧ ತನಿಖಾ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ನಿಖರತೆ, ಅತ್ಯಾಧುನಿಕ ತಾಂತ್ರಿಕ ಸಾಮರ್ಥ್ಯ ಹಾಗೂ ಅತ್ಯಂತ ವೇಗವಾಗಿ ವರದಿಗಳನ್ನು ನೀಡುವ ವ್ಯವಸ್ಥೆಯಲ್ಲಿ ರಾಜ್ಯದ ಎಫ್‌ಎಸ್‌ಎಲ್ ದೇಶದಲ್ಲೇ ಮಾದರಿಯಾಗಿ ಬೆಳೆದಿದೆ ಎಂದು ಸಚಿವರು ಶ್ಲಾಘಿಸಿದರು.
ಅಂತರರಾಷ್ಟ್ರೀಯ ಗುಣಮಟ್ಟದ ಮನ್ನಣೆ:
ರಾಜ್ಯದ ವಿಧಿವಿಜ್ಞಾನ ಪ್ರಯೋಗಾಲಯವು ರಾಷ್ಟ್ರೀಯ ಮಾನ್ಯತಾ ಮಂಡಳಿಯ (NABL) ಅಧಿಕೃತ ಮಾನ್ಯತೆ ಪಡೆದುಕೊಂಡಿದ್ದು, ಅಂತರರಾಷ್ಟ್ರೀಯ ಗುಣಮಟ್ಟದ ಮಾನದಂಡಗಳ ಅನ್ವಯ ಕಾರ್ಯನಿರ್ವಹಿಸುತ್ತಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ರಾಜ್ಯದ ಡಿಜಿಟಲ್ ಹಾಗೂ ಮೊಬೈಲ್ ಫೊರೆನ್ಸಿಕ್ ವಿಭಾಗಗಳಿಗೆ ‘ಎಲೆಕ್ಟ್ರಾನಿಕ್ ಎವಿಡೆನ್ಸ್ ಎಕ್ಸಾಮಿನರ್’ (ವಿದ್ಯುನ್ಮಾನ ಸಾಕ್ಷ್ಯಗಳ ಪರೀಕ್ಷಕರು) ಎಂಬ ಉನ್ನತ ಸ್ಥಾನಮಾನ ದೊರೆತಿದೆ. ಇಂತಹ ಸಾಧನೆ ಮಾಡಿದ ದೇಶದ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕ ಪ್ರಮುಖವಾಗಿದೆ ಎಂದು ಅವರು ವಿವರಿಸಿದರು.
ಪ್ರತಿಷ್ಠಿತ ಪ್ರಶಸ್ತಿ ಗರಿ:
ಇತ್ತೀಚೆಗೆ ಡಿಜಿಟಲ್ ಫೊರೆನ್ಸಿಕ್ ತಂತ್ರಜ್ಞಾನ ವಲಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಸರ್ಕಾರಿ ಸಂಸ್ಥೆಗಳಿಗೆ ನೀಡಲಾಗುವ ಪ್ರತಿಷ್ಠಿತ ‘ಡಿ.ಎಸ್.ಸಿ.ಐ’ (DSCI) ಪ್ರಶಸ್ತಿಯನ್ನು ಕರ್ನಾಟಕ ಎಫ್‌ಎಸ್‌ಎಲ್ ಮುಡಿಗೇರಿಸಿಕೊಂಡಿದೆ. ಈ ಪ್ರಶಸ್ತಿಯು ರಾಜ್ಯದ ತನಿಖಾ ದಕ್ಷತೆ ಮತ್ತು ತಾಂತ್ರಿಕ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೆಮ್ಮೆಯಿಂದ ವ್ಯಕ್ತಪಡಿಸಿದರು.
ನಾಲ್ಕು ಪ್ರಮುಖ ಹತ್ಯೆ ಪ್ರಕರಣಗಳ ವೈಜ್ಞಾನಿಕ ನಂಟು ಪತ್ತೆಹಚ್ಚಿದ ರಾಜ್ಯ ಎಫ್‌ಎಸ್‌ಎಲ್:
ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ಗೌರಿ ಲಂಕೇಶ್, ಎಂ.ಎಂ. ಕಲಬುರ್ಗಿ, ನರೇಂದ್ರ ದಭೋಲ್ಕರ್ ಹಾಗೂ ಗೋವಿಂದ ಪನ್ಸಾರೆ ಅವರ ಹತ್ಯೆ ಪ್ರಕರಣಗಳ ನಡುವಿನ ವೈಜ್ಞಾನಿಕ ಸಂಪರ್ಕವನ್ನು ನಿಖರವಾದ ಫೊರೆನ್ಸಿಕ್ ವಿಶ್ಲೇಷಣೆಯ ಮೂಲಕ ಪತ್ತೆಹಚ್ಚುವಲ್ಲಿ ಕರ್ನಾಟಕ ವಿಧಿವಿಜ್ಞಾನ ಪ್ರಯೋಗಾಲಯವು (ಎಫ್‌ಎಸ್‌ಎಲ್) ಯಶಸ್ವಿಯಾಗಿದೆ. ರಾಜ್ಯ ಎಫ್‌ಎಸ್‌ಎಲ್‌ನ ಈ ಮಹೋನ್ನತ ತನಿಖಾ ದಕ್ಷತೆ ರಾಷ್ಟ್ರಮಟ್ಟದಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ ಎಂದು ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಶ್ಲಾಘಿಸಿದರು.
ರಾಜ್ಯದಲ್ಲೇ ಮೊದಲ ‘ವೈಲ್ಡ್‌ಲೈಫ್ ಫೊರೆನ್ಸಿಕ್ ಘಟಕ’:
ರಾಜ್ಯದಲ್ಲಿ ವನ್ಯಜೀವಿಗಳ ಮೇಲಿನ ಅಪರಾಧಗಳು, ಬೇಟೆ ಹಾಗೂ ಅಕ್ರಮ ಚರ್ಮ, ದಂತ ಸಾಗಾಟ ಪ್ರಕರಣಗಳಿಗೆ ತಡೆ ಹಾಕಲು ಮೊದಲ ಬಾರಿಗೆ ವಿಶೇಷ “ವೈಲ್ಡ್ ಲೈಫ್ ಫೊರೆನ್ಸಿಕ್ ಘಟಕ” (Wildlife Forensic Unit) ಆರಂಭಿಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಶೀಘ್ರದಲ್ಲೇ ಈ ನೂತನ ಘಟಕವು ಕಾರ್ಯಾರಂಭ ಮಾಡಲಿದ್ದು, ಕಾಡು ಪ್ರಾಣಿಗಳ ಹತ್ಯೆ ಹಾಗೂ ಪರಿಸರಕ್ಕೆ ಸಂಬಂಧಿಸಿದ ಅಪರಾಧಗಳ ವೈಜ್ಞಾನಿಕ ತನಿಖೆಗೆ ಇದು ಹೊಸ ಶಕ್ತಿ ತುಂಬಲಿದೆ ಎಂದು ಸಚಿವರು ಪ್ರಕಟಿಸಿದರು.
40 ತಿಂಗಳ ಕಾಯುವಿಕೆ ಈಗ ಕೇವಲ 1 ತಿಂಗಳಿಗೆ ಇಳಿಕೆ:
ಕಳೆದ ಕೆಲವು ವರ್ಷಗಳಲ್ಲಿ ಸೈಬರ್ ಹಾಗೂ ಡಿಜಿಟಲ್ ಅಪರಾಧಗಳ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದ್ದರೂ, ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ ವರದಿ ನೀಡುವ ಅವಧಿಯನ್ನು ಇಲಾಖೆಯು ಗಣನೀಯವಾಗಿ ಕಡಿಮೆ ಮಾಡಿದೆ. ಹಿಂದೆ ಫೊರೆನ್ಸಿಕ್ ವರದಿಗಾಗಿ ಸರಿಸುಮಾರು 40 ತಿಂಗಳುಗಳ ಕಾಲ ಕಾಯಬೇಕಾಗಿದ್ದ ಪರಿಸ್ಥಿತಿ ಇತ್ತು. ಆದರೆ ಈಗ ಕೇವಲ 1 ರಿಂದ 4 ತಿಂಗಳ ಒಳಗಾಗಿ ನಿಖರ ವರದಿಗಳನ್ನು ನೀಡುತ್ತಿರುವುದು ಇಲಾಖೆಯ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಸಚಿವರು ಶ್ಲಾಘಿಸಿದರು.
ಖಾಲಿ ಹುದ್ದೆಗಳ ಶೀಘ್ರ ಭರ್ತಿ:
ಇಲಾಖೆಯ ಕೆಲಸದ ವೇಗವನ್ನು ಮತ್ತಷ್ಟು ಹೆಚ್ಚಿಸಲು ಎಫ್‌ಎಸ್‌ಎಲ್‌ನಲ್ಲಿ ಪ್ರಸ್ತುತ ಖಾಲಿ ಇರುವ ವೈಜ್ಞಾನಿಕ ಅಧಿಕಾರಿಗಳು ಸೇರಿದಂತೆ ವಿವಿಧ ಅಗತ್ಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರ ಮೊದಲ ಆದ್ಯತೆ ನೀಡಲಿದೆ. ಈ ನೇಮಕಾತಿ ಪ್ರಕ್ರಿಯೆಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಒಟ್ಟಾರೆಯಾಗಿ ಅಪರಾಧ ತನಿಖೆಯಲ್ಲಿ ನಿಖರತೆ, ವೇಗ ಮತ್ತು ಸಂಪೂರ್ಣ ಪಾರದರ್ಶಕತೆ ತರಲು ಕರ್ನಾಟಕ ಸರ್ಕಾರವು ಫೊರೆನ್ಸಿಕ್ ವ್ಯವಸ್ಥೆಯನ್ನು ಇನ್ನಷ್ಟು ಆಧುನೀಕರಿಸಿ ದೇಶದಲ್ಲೇ ನಂಬರ್ ಒನ್ ಮಾದರಿಯನ್ನಾಗಿ ಮಾಡಲು ಬದ್ಧವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಡಿಜಿಪಿ ಡಾ.ಎಂ.ಎ.ಸಲೀಂ, ಎಡಿಜಿಪಿ ಪಿ.ಹರಿಶೇಖರ್, ಸಂಸ್ಥೆಯ ನಿರ್ದೇಶಕಿ ದಿವ್ಯಾ ಗೋಪಿನಾಥ್ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

