ಬೆಂಗಳೂರು: ನಮ್ಮ ಬೆಂಗಳೂರು ಮೆಟ್ರೋ ದೇಶದಲ್ಲೇ ಅತ್ಯಂತ ಹೆಚ್ಚು ಪ್ರಯಾಣ ದರವನ್ನು ಹೊಂದಿದ್ದು, ಸಾರ್ವಜನಿಕರ ಮೇಲೆ ಹೊರೆ ಹಾಕುವ ಬದಲು ಪರ್ಯಾಯ ಮೂಲಗಳಿಂದ ಆದಾಯ ಗಳಿಸಿ ದರವನ್ನು ತಕ್ಷಣವೇ ಕಡಿತಗೊಳಿಸಬೇಕು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಾರಿಗೆ ವ್ಯವಸ್ಥೆಯ ಲೋಪದೋಷಗಳ ಕುರಿತು ವಾಗ್ದಾಳಿ ನಡೆಸಿದ ಅವರು,ಪ್ರಸ್ತುತ ಬೆಂಗಳೂರು ಮೆಟ್ರೋದಲ್ಲಿ ಗರಿಷ್ಠ ಪ್ರಯಾಣ ದರ ₹90 ರಷ್ಟಿದ್ದು, ಇದು ಭಾರತದಲ್ಲೇ ಅತ್ಯಧಿಕವಾಗಿದೆ. ಇದರ ಜೊತೆಗೆ ಪ್ರತಿ ವರ್ಷ ಶೇಕಡಾ 5 ರಷ್ಟು ದರ ಹೆಚ್ಚಳ ಮಾಡುವ ಕಾನೂನೂ ಇದೆ. ಇತ್ತ ಮೆಟ್ರೋ ಎರಡನೇ ಹಂತದ (ಫೇಸ್ 2A) ಯೋಜನೆ ವೆಚ್ಚ ಬರೋಬ್ಬರಿ ₹15,000 ಕೋಟಿಗೆ ಏರಿಕೆಯಾಗಿದ್ದರೂ, ಹಲವು ಪ್ರಮುಖ ನಿಲ್ದಾಣಗಳನ್ನೇ ಯೋಜನೆಯಿಂದ ಕೈಬಿಡಲಾಗಿದೆ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು. ರಾಜಧಾನಿಯ ಸಾರಿಗೆ ಅಗತ್ಯಕ್ಕೆ ತಕ್ಕಂತೆ ಬಿಎಂಟಿಸಿಗೆ ಕನಿಷ್ಠ 15,000 ಬಸ್‌ಗಳ ಅಗತ್ಯವಿದ್ದರೂ ಸದ್ಯ ಕೇವಲ 7,000 ಬಸ್‌ಗಳು ಮಾತ್ರ ರಸ್ತೆಯಿಳಿಯುತ್ತಿವೆ ಎಂದು ಅವರು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸದರು ಮಂಡಿಸಿದ ಪ್ರಮುಖ ಬೇಡಿಕೆಗಳು:
ದರ ಕಡಿತಕ್ಕೆ ಪರ್ಯಾಯ ಮಾರ್ಗ: ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುವ ಬದಲು, ಮೆಟ್ರೋ ನಿಲ್ದಾಣಗಳಲ್ಲಿ ಜಾಹೀರಾತುಗಳು ಮತ್ತು ಆಸ್ತಿಗಳ ಸಮರ್ಪಕ ಬಳಕೆ ಮೂಲಕ ಆದಾಯ ಗಳಿಸಿ ದರ ಇಳಿಸಬೇಕು.
ವೇಗದ ಕಾಮಗಾರಿ: ಕಟ್ಟುನಿಟ್ಟಾದ ಗಡುವು ವಿಧಿಸುವ ಜೊತೆಗೆ ಸಾರ್ವಜನಿಕರ ನೇರ ಮೇಲ್ವಿಚಾರಣೆಯೊಂದಿಗೆ ಮೆಟ್ರೋ ಕಾಮಗಾರಿಗಳಿಗೆ ವೇಗ ನೀಡಬೇಕು.
ಕೊನೆಯ ಮೈಲಿ ಸಂಪರ್ಕ: ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೈಲಿ ಸಂಪರ್ಕವನ್ನು ಬಲಪಡಿಸಲು ಅನುಮೋದನೆ ದೊರೆತಿರುವ ಇ-ಬಸ್‌ಗಳನ್ನು ವ್ಯವಸ್ಥಿತವಾಗಿ ರಸ್ತೆಗಿಳಿಸಬೇಕು.
ಬಿಎಂಎಲ್‌ಟಿಎ ಜಾರಿ: ನಗರದ ಎಲ್ಲಾ ಸಾರಿಗೆ ನಿರ್ಧಾರಗಳನ್ನು ಕೈಗೊಳ್ಳಲು ಮತ್ತು ಗೊಂದಲ ನಿವಾರಿಸಲು ‘ಬಿಎಂಎಲ್‌ಟಿಎ’ (BMLTA) ಸಂಸ್ಥೆಯನ್ನು ತಕ್ಷಣವೇ ಏಕೈಕ ನೋಡಲ್ ಅಧಿಕಾರಿಯನ್ನಾಗಿ ಜಾರಿಗೆ ತರಬೇಕು.

