ಮೈಸೂರು: ರಾಜ್ಯದ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ತೃತೀಯ ಭಾಷೆಯ (ಹಿಂದಿ ಸೇರಿದಂತೆ ಇತರ ಭಾಷೆಗಳು) ಅಂಕಗಳನ್ನು ಒಟ್ಟು ಫಲಿತಾಂಶದ ಲೆಕ್ಕಾಚಾರದಿಂದ ಕೈಬಿಟ್ಟಿರುವ ಸರ್ಕಾರದ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕೇವಲ ಭಾಷಾ ನೀತಿಯಲ್ಲ, ಬದಲಾಗಿ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತೆಗೆದುಕೊಂಡ ಮಹತ್ವದ ನಿರ್ಧಾರ ಎಂದು ಅವರು ಪ್ರತಿಪಾದಿಸಿದ್ದಾರೆ.
ಹಿಂದಿ ಹೇರಿಕೆ ವಿರುದ್ಧ ಖಡಕ್ ನಿಲುವು: “ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ನಾವು ಮೊದಲಿನಿಂದಲೂ ದ್ವಿಭಾಷಾ ಸೂತ್ರಕ್ಕೆ (ಕನ್ನಡ ಮತ್ತು ಇಂಗ್ಲಿಷ್) ಬದ್ಧರಾಗಿದ್ದೇವೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಹಿಂದಿಯನ್ನು ಬಲವಂತವಾಗಿ ಹೇರುವುದನ್ನು ನಾವು ಒಪ್ಪುವುದಿಲ್ಲ. ನಮ್ಮ ರಾಜ್ಯದ ಶೈಕ್ಷಣಿಕ ಸ್ವಾಯತ್ತತೆಯನ್ನು ಕಾಪಾಡುವುದು ನಮ್ಮ ಆದ್ಯತೆ,” ಎಂದು ತಿಳಿಸಿದರು.
ಲಕ್ಷಾಂತರ ವಿದ್ಯಾರ್ಥಿಗಳ ಹಿತರಕ್ಷಣೆ:
ಕಳೆದ ಸಾಲಿನ ಫಲಿತಾಂಶದ ಅಂಕಿಅಂಶಗಳನ್ನು ಉಲ್ಲೇಖಿಸಿದ ಸಿಎಂ, “ಹಿಂದಿನ ವರ್ಷ ಸುಮಾರು 1.64 ಲಕ್ಷ ವಿದ್ಯಾರ್ಥಿಗಳು ತೃತೀಯ ಭಾಷೆಯಲ್ಲಿ ಅನುತ್ತೀರ್ಣರಾಗಿದ್ದರು. ಇದರಲ್ಲಿ 1.48 ಲಕ್ಷದಷ್ಟು ವಿದ್ಯಾರ್ಥಿಗಳು ಕೇವಲ ಹಿಂದಿ ವಿಷಯದಲ್ಲಿ ಫೇಲ್ ಆಗಿದ್ದರಿಂದ ಅವರ ಒಟ್ಟಾರೆ ಫಲಿತಾಂಶ ಕುಸಿದಿತ್ತು. ಈ ಹೊರೆಯನ್ನು ತಪ್ಪಿಸಲು ಅಂಕಗಳ ಬದಲಿಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ವಿದ್ಯಾರ್ಥಿಗಳು ಹೆಚ್ಚು ನಿರಾಳವಾಗಿ ಇತರ ಪ್ರಮುಖ ವಿಷಯಗಳ ಮೇಲೆ ಗಮನ ಹರಿಸಬಹುದು,” ಎಂದರು.
ಇನ್ಮುಂದೆ ಎಸ್‌ಎಸ್‌ಎಲ್‌ಸಿ ಒಟ್ಟು ಅಂಕಗಳನ್ನು 625ರ ಬದಲಾಗಿ 525 ಅಂಕಗಳಿಗೆ ಮಾತ್ರ ಪರಿಗಣಿಸಲಾಗುತ್ತದೆ. ತೃತೀಯ ಭಾಷೆಯ ಪರೀಕ್ಷೆ ಬರೆಯುವುದು ಕಡ್ಡಾಯ. ಆದರೆ ಅಂಕಗಳ ಬದಲಿಗೆ A, B, C ಅಥವಾ D ಗ್ರೇಡ್‌ಗಳನ್ನು ನೀಡಲಾಗುತ್ತದೆ. “ಭಾಷಾ ಪರೀಕ್ಷೆಯನ್ನು ರದ್ದು ಮಾಡಿಲ್ಲ, ಕೇವಲ ಅಂಕಗಳ ಲೆಕ್ಕಾಚಾರ ಕೈಬಿಡಲಾಗಿದೆ. ಆದ್ದರಿಂದ ತೃತೀಯ ಭಾಷೆ ಬೋಧಿಸುವ ಶಿಕ್ಷಕರ ಉದ್ಯೋಗಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ,” ಎಂದು ಸಿಎಂ ಭರವಸೆ ನೀಡಿದ್ದಾರೆ.
ಎಲ್ಲಾ ಭಾಷೆಗಳಿಗೂ ಅನ್ವಯ: ಈ ನಿಯಮವು ಹಿಂದಿ ಮಾತ್ರವಲ್ಲದೆ ಸಂಸ್ಕೃತ, ಉರ್ದು, ಮರಾಠಿ ಸೇರಿದಂತೆ ಎಲ್ಲಾ ತೃತೀಯ ಭಾಷೆಗಳಿಗೂ ಅನ್ವಯವಾಗಲಿದೆ,
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪರ ಸಂಘಟನೆಗಳ ದಶಕಗಳ ಬೇಡಿಕೆಗೆ ಈ ಮೂಲಕ ನ್ಯಾಯ ಒದಗಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

