ಬೆಂಗಳೂರು: “ಆಟಿಸಂ ಪೀಡಿತ ವಿಶೇಷ ಚೇತನ ಮಕ್ಕಳ ಸೇವೆ ಮಾಡುವುದು ದೈವ ಕಾರ್ಯಕ್ಕೆ ಸಮಾನ. ಈ ಮಕ್ಕಳಿಗೆ ಆಸರೆಯಾಗಿರುವ ಪೋಷಕರು ಮತ್ತು ಆರೈಕೆದಾರರ ಶ್ರಮ ನಿಜಕ್ಕೂ ಶ್ಲಾಘನೀಯ” ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದರು.
ನಗರದ ವಿ.ಎಸ್.ಎಚ್ (VSH) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ‘ಆಟಿಸಂ ಜಾಗೃತಿ ಮಾಸಾಚರಣೆ’ ಹಾಗೂ ವಿಶೇಷ ಚೇತನ ಮಕ್ಕಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಂದೆಯವರ ಸ್ಮರಣೆ – ಭಾವುಕ ಕ್ಷಣ:
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಚಿವರು ಹಳೆಯ ನೆನಪುಗಳನ್ನು ಸ್ಮರಿಸಿದರು. “ಈ ಆಸ್ಪತ್ರೆಯನ್ನು ಹಿಂದೆ ನನ್ನ ತಂದೆ ಬಂಗಾರಪ್ಪನವರು ಉದ್ಘಾಟಿಸಿದ್ದರು. ಇಂದು ಅವರ ಮಗನಾಗಿ ಅದೇ ಆಸ್ಪತ್ರೆಯಲ್ಲಿ ಇಂತಹದೊಂದು ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನಗೆ ಅತ್ಯಂತ ಆತ್ಮತೃಪ್ತಿ ನೀಡಿದೆ. ನನ್ನ ಪಾಲಿಗೆ ಈ ಆಸ್ಪತ್ರೆ ಕೇವಲ ಕಟ್ಟಡವಲ್ಲ, ಇದೊಂದು ಆರೋಗ್ಯ ನೀಡುವ ದೇವಸ್ಥಾನವಿದ್ದಂತೆ” ಎಂದು ಭಾವುಕರಾದರು.
ಸೃಜನಶೀಲ ಚಟುವಟಿಕೆಗಳಿಗೆ ಮೆಚ್ಚುಗೆ:
ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲು ಹಮ್ಮಿಕೊಂಡಿದ್ದ ಜೇಡಿಮಣ್ಣಿನ ಕಲೆ, ಫೇಸ್ ಪೇಂಟಿಂಗ್, ಸೆನ್ಸರಿ ಪ್ಲೇ ಮತ್ತು ಬಲೂನ್ ಕ್ರಾಫ್ಟ್‌ನಂತಹ ಚಟುವಟಿಕೆಗಳನ್ನು ಸಚಿವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ಮುಖದಲ್ಲಿನ ನಗು ಕಂಡು ಸಂತಸಪಟ್ಟ ಅವರು, ಈ ಪುಣ್ಯದ ಕೆಲಸವನ್ನು ಮುನ್ನಡೆಸುತ್ತಿರುವ ಆಸ್ಪತ್ರೆಯ ವೈದ್ಯಕೀಯ ತಂಡಕ್ಕೆ ಹಾಗೂ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು.
ವಿಶೇಷ ಮಕ್ಕಳಿಗಾಗಿ ಕೋಣಂದೂರಿನಲ್ಲಿ ಸುಸಜ್ಜಿತ ‘ವಸತಿ ಶಾಲೆ’:
ವಿಶೇಷ ಚೇತನ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ ವಿಶೇಷ ಮಕ್ಕಳಿಗಾಗಿ ಸುಸಜ್ಜಿತ ‘ವಸತಿ ಶಾಲೆ’ ನಿರ್ಮಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಪ್ರಕಟಿಸಿದರು.”ಕೋಣಂದೂರಿನಲ್ಲಿ ಲಭ್ಯವಿರುವ 13 ಎಕರೆ ಜಾಗದ ಪೈಕಿ, 7 ಎಕರೆ ಪ್ರದೇಶವನ್ನು ಈ ವಸತಿ ಶಾಲೆಗಾಗಿ ಮೀಸಲಿಡಲಾಗುವುದು. ಯಾವುದೇ ಸಂಬಳದ ನಿರೀಕ್ಷೆಯಿಲ್ಲದೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಲು ಮುಂದೆ ಬಂದ ನಿವೃತ್ತ ಶಿಕ್ಷಕಿಯೊಬ್ಬರ ಕಾರ್ಯವೈಖರಿ ಈ ನಿರ್ಧಾರಕ್ಕೆ ದೊಡ್ಡ ಪ್ರೇರಣೆಯಾಗಿದೆ. ಪ್ರಸಕ್ತ ವರ್ಷದಲ್ಲೇ ಶಾಲೆಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು” ಎಂದು ಸಚಿವರು ವಿವರಿಸಿದರು.
ತೆರಿಗೆ ಹಣದ ಸದ್ವಿನಿಯೋಗ:
ಜನರ ತೆರಿಗೆ ಹಣವನ್ನು ಇಂತಹ ಪುಣ್ಯದ ಕಾರ್ಯಗಳಿಗೆ ವಿನಿಯೋಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಈ ವಸತಿ ಶಾಲೆಯ ಯೋಜನೆಗಳನ್ನು ಸಮರ್ಪಕವಾಗಿ ರೂಪಿಸಲು VSH ಆಸ್ಪತ್ರೆಯ ತಜ್ಞರ ಮಾರ್ಗದರ್ಶನ ಮತ್ತು ಸಹಕಾರವನ್ನು ಪಡೆಯಲಾಗುವುದು ಎಂದು ಅವರು ತಿಳಿಸಿದರು.

