Thu. Aug 20th, 2026

15,000 ಶಿಕ್ಷಕರ ನೇಮಕಾತಿ ಗೊಂದಲಕ್ಕೆ ಇಲಾಖೆ ಬ್ರೇಕ್: ಅಭ್ಯರ್ಥಿಗಳ ನೆರವಿಗಾಗಿ FAQ ಹಾಗೂ ಸಹಾಯವಾಣಿ ಪ್ರಕಟಿಸಿದ ಸಚಿವ ಮಧು ಬಂಗಾರಪ್ಪ!

Share this with Friends

ಬೆಂಗಳೂರು:ಕರ್ನಾಟಕದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ 15 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಅರ್ಜಿ ಸಲ್ಲಿಸುವ ಸಮಯದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಎದುರಾಗುತ್ತಿರುವ ಗೊಂದಲಗಳನ್ನು ಪರಿಹರಿಸಲು ಶಿಕ್ಷಣ ಇಲಾಖೆಯು ಮಹತ್ವದ ಮಾರ್ಗಸೂಚಿ (FAQ) ಒಂದನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಗೊಂದಲ ನಿವಾರಣೆಗೆ ವಿಶೇಷ FAQ:

ಜಿಲ್ಲಾವಾರು ಪ್ರತ್ಯೇಕ ನೇಮಕಾತಿ ಪ್ರಕಟಣೆಗಳನ್ನು ಹೊರಡಿಸಲಾಗಿದ್ದರೂ, ಅಭ್ಯರ್ಥಿಗಳಲ್ಲಿ ವಯೋಮಿತಿ ಸಡಿಲಿಕೆ, ವಿದ್ಯಾರ್ಹತೆ ಮತ್ತು ಮೀಸಲಾತಿ ಪ್ರಮಾಣಪತ್ರಗಳ ಕುರಿತು ಹತ್ತಾರು ಅನುಮಾನಗಳು ಮೂಡಿದ್ದವು. ಇದನ್ನು ಮನಗಂಡು ಇಲಾಖೆಯು ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ (FAQ) ಸ್ಪಷ್ಟ ಉತ್ತರಗಳಿರುವ ಕೈಪಿಡಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ಅರ್ಹತೆಯನ್ನು ಖಚಿತಪಡಿಸಿಕೊಂಡು, ಸರಿಯಾದ ದಾಖಲೆಗಳೊಂದಿಗೆ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ.

ಅಧಿಕೃತ ಸಹಾಯವಾಣಿ ಸಂಖ್ಯೆಗಳು:

FAQ ಓದಿದ ನಂತರವೂ ಅಭ್ಯರ್ಥಿಗಳಿಗೆ ಯಾವುದೇ ಗೊಂದಲಗಳಿದ್ದರೆ, ಇಲಾಖೆಯ ಅಧಿಕೃತ ಸಹಾಯವಾಣಿ ಸಂಖ್ಯೆಗಳಾದ 080-22483145, 080-22483140 ಅಥವಾ ಮೊಬೈಲ್ ಸಂಖ್ಯೆ 9449588020 ಗೆ ಸಂಪರ್ಕಿಸಿ ನೇರವಾಗಿ ಪರಿಹಾರ ಕಂಡುಕೊಳ್ಳಬಹುದು.

ದಂಧೆಕೋರರ ಆಮಿಷಕ್ಕೆ ಬಲಿಯಾಗಬೇಡಿ – ಖಡಕ್ ಎಚ್ಚರಿಕೆ:

ಇದೇ ವೇಳೆ ಪಾರದರ್ಶಕ ನೇಮಕಾತಿಯ ಭರವಸೆ ನೀಡಿರುವ ಸಚಿವ ಮಧು ಬಂಗಾರಪ್ಪ, “ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ಸಂಪೂರ್ಣ ಮೆರಿಟ್ ಮತ್ತು ನಿಯಮಾವಳಿಗಳ ಆಧಾರದ ಮೇಲೆಯೇ ನಡೆಯಲಿದೆ. ಉದ್ಯೋಗ ಕೊಡಿಸುವುದಾಗಿ ಹಣ ಪೀಕುವ ಮಧ್ಯವರ್ತಿಗಳು ಅಥವಾ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಆಮಿಷ ಒಡ್ಡುವ ದಂಧೆಕೋರರ ಮಾತುಗಳನ್ನು ನಂಬಬೇಡಿ. ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೆ ತಕ್ಷಣವೇ ಇಲಾಖೆಯ ಗಮನಕ್ಕೆ ತನ್ನಿ” ಎಂದು ಉದ್ಯೋಗಾಕಾಂಕ್ಷಿಗಳಿಗೆ ಕಟ್ಟುನಿಟ್ಟಿನ ಕರೆ ನೀಡಿದ್ದಾರೆ.

 

 


Share this with Friends

Related Post