Wed. Oct 14th, 2026

ರಾಜ್ಯದಲ್ಲಿ ಹೆಚ್ಚಿದ ಭೀಕರತೆ: ಹೊಸದಾಗಿ 9 ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆ

Share this with Friends

ಬೆಂಗಳೂರು: ರಾಜ್ಯದಲ್ಲಿ ತಲೆದೂರಿರುವ ಕಠಿಣ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಸಂಕಷ್ಟಕ್ಕೆ ಸಿಲುಕಿರುವ ರೈತರ ಹಿತರಕ್ಷಣೆಗಾಗಿ ಸರ್ಕಾರ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಹಿಂದೆ ಸರ್ಕಾರವು ರಾಜ್ಯದ 217 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಗುರುತಿಸಿತ್ತು. ಆದರೆ ಇದೀಗ ವೈಜ್ಞಾನಿಕ ಮೌಲ್ಯಮಾಪನ ಹಾಗೂ ತಳಮಟ್ಟದ ಸ್ಥಳ ಪರಿಶೀಲನೆಯ ವರದಿಗಳ ಆಧಾರದ ಮೇಲೆ ಹೊಸದಾಗಿ ಮತ್ತೊಂದು 9 ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಇದರೊಂದಿಗೆ ಕರ್ನಾಟಕದಲ್ಲಿ ಒಟ್ಟು ಬರಪೀಡಿತ ತಾಲ್ಲೂಕುಗಳ ಸಂಖ್ಯೆ 226ಕ್ಕೆ ಏರಿಕೆಯಾಗಿದೆ ಎಂದರು‌

ಈ ನೂತನ ಆದೇಶದ ಪ್ರಕಾರ, ಹೊಸದಾಗಿ ಸೇರ್ಪಡೆಗೊಂಡಿರುವ ತಾಲ್ಲೂಕುಗಳ ಪೈಕಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕನ್ನು ಅತ್ಯಂತ ತೀವ್ರ ಬರಪೀಡಿತ ಪ್ರದೇಶ ಎಂದು ವರ್ಗೀಕರಿಸಲಾಗಿದೆ. ಉಳಿದಂತೆ ಬೆಳಗಾವಿ ಜಿಲ್ಲೆಯ ಖಾನಾಪುರ, ಶಿವಮೊಗ್ಗ ಜಿಲ್ಲೆಯ ಹೊಸನಗರ ಹಾಗೂ ಸಾಗರ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಮೂಡುಬಿದಿರೆ ಮತ್ತು ಮೂಲ್ಕಿ, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಹಾಗೂ ದಾಂಡೇಲಿ ಸೇರಿದಂತೆ ಒಟ್ಟು 8 ತಾಲ್ಲೂಕುಗಳನ್ನು ಮಧ್ಯಮ ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದೆ ಎಂದರು.

ರಾಜ್ಯದ ಉಳಿದ ತಾಲ್ಲೂಕುಗಳ ಪರಿಸ್ಥಿತಿಯ ಮೇಲೂ ಸರ್ಕಾರ ನಿರಂತರವಾಗಿ ನಿಗಾ ಇರಿಸಿದೆ. ಮುಂದಿನ ದಿನಗಳಲ್ಲಿ ನಿಗದಿಪಡಿಸಿದ ಮಾನದಂಡಗಳಿಗೆ ಒಳಪಡುವ ಇತರೆ ತಾಲ್ಲೂಕುಗಳಿದ್ದಲ್ಲಿ, ಅವುಗಳನ್ನು ಕೂಡ ಹಂತ-ಹಂತವಾಗಿ ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು. ಪ್ರಕೃತಿಯ ವಿಕೋಪದಿಂದ ಅನ್ನದಾತರ ಜೀವನೋಪಾಯಕ್ಕೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳುವುದು, ವ್ಯಾಪಕ ಬೆಳೆಹಾನಿಗೆ ತಕ್ಕ ಪರಿಹಾರ ಒದಗಿಸುವುದು ಹಾಗೂ ಗ್ರಾಮೀಣ ಭಾಗದ ಸಾರ್ವಜನಿಕರ ಹಿತ ಕಾಯುವುದೇ ನಮ್ಮ ಸರ್ಕಾರದ ಮುಖ್ಯ ಆದ್ಯತೆಯಾಗಿದೆ ಎಂದು ಡಿಸಿಎಂ  ಸ್ಪಷ್ಟಪಡಿಸಿದ್ದಾರೆ.

 

 


Share this with Friends

Related Post