Wed. Oct 14th, 2026

ಝೆಕ್ ಹೂಡಿಕೆದಾರರಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹೂಡಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ಆಹ್ವಾನ

Share this with Friends

ಬೆಂಗಳೂರು: ಕರ್ನಾಟಕವು ಝೆಕ್ ಗಣರಾಜ್ಯದೊಂದಿಗೆ ಸುದೀರ್ಘಾವಧಿಯ ವ್ಯಾಪಾರ ಪಾಲುದಾರಿಕೆಗೆ ಸಿದ್ಧವಿದ್ದು, ಝೆಕ್ ದೇಶದ ಕಂಪನಿಗಳು ಕೇವಲ ಬೆಂಗಳೂರಿಗೆ ಸೀಮಿತವಾಗದೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಹೂಡಿಕೆ ಮಾಡಲು ಮುಂದಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ತಮ್ಮನ್ನು ಭೇಟಿ ಮಾಡಿದ ಝೆಕ್ ಗಣರಾಜ್ಯದ ಉಪ ಪ್ರಧಾನಮಂತ್ರಿ ಕಾರೆಲ್ ಹಾವ್ಲಿಕ್ ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ಅವರು ಈ ಮಹತ್ವದ ಸಮಾಲೋಚನೆ ನಡೆಸಿದರು.

ಕೃಷಿ, ತೋಟಗಾರಿಕೆ, ಪುಷ್ಪಕೃಷಿ ಮತ್ತು ಅರಣ್ಯ ರಕ್ಷಣೆಯಂತಹ ನೈಸರ್ಗಿಕ ಕ್ಷೇತ್ರಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ವಿವರಿಸಿದ ಮುಖ್ಯಮಂತ್ರಿಗಳು, ರಾಜ್ಯವನ್ನು ಪ್ರಮುಖ ಹೂಡಿಕೆ ತಾಣವಾಗಿ ಪರಿಗಣಿಸುವಂತೆ ಕೋರಿದರು. ವಿಶೇಷವಾಗಿ ಕರ್ನಾಟಕವು ದೇಶದಲ್ಲೇ ಬೃಹತ್ ಸೌರ ವಿದ್ಯುತ್ ಹಾಗೂ ಅತ್ಯಂತ ಹಳೆಯ ಜಲವಿದ್ಯುತ್ ಸ್ಥಾವರಗಳನ್ನು ಹೊಂದಿದ್ದು, ಇಲ್ಲಿನ ಇಂಧನ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅಪಾರ ಅವಕಾಶಗಳು ಮುಕ್ತವಾಗಿವೆ ಎಂದು ಅವರು ನಿಯೋಗಕ್ಕೆ ಮನವರಿಕೆ ಮಾಡಿಕೊಟ್ಟರು.

ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆ, ಎಲೆಕ್ಟ್ರಿಕ್ ವಾಹನಗಳು (EV), ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಹಯೋಗಕ್ಕೆ ಹೆಚ್ಚಿನ ಒತ್ತು ನೀಡುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು. ಉದ್ಯಮಿಗಳಿಗೆ ಅಗತ್ಯವಿರುವ ಭೂಮಿ, ಪರವಾನಗಿ ಹಾಗೂ ಆಡಳಿತಾತ್ಮಕ ನೆರವು ನೀಡಲು ಇನ್ವೆಸ್ಟ್ ಕರ್ನಾಟಕ, ಕರ್ನಾಟಕ ಉದ್ಯೋಗ ಮಿತ್ರ ಮತ್ತು ಕೆಐಎಡಿಬಿ ಸಂಸ್ಥೆಗಳ ಏಕ ಗವಾಕ್ಷಿ ವ್ಯವಸ್ಥೆ ಸನ್ನದ್ಧವಾಗಿದೆ. ಗುಣಮಟ್ಟದ ಉದ್ಯೋಗ ಸೃಷ್ಟಿ ಹಾಗೂ ಸ್ಥಳೀಯ ತಂತ್ರಜ್ಞಾನದ ಬಲವರ್ಧನೆಗೆ ಪೂರಕವಾದ ಹೂಡಿಕೆಗೆ ಸರ್ಕಾರ ಮೊದಲ ಆದ್ಯತೆ ನೀಡಲಿದೆ ಎಂದು ಅವರು ಭರವಸೆ ನೀಡಿದರು.

ಬೆಂಗಳೂರು ಕೇವಲ ತಂತ್ರಜ್ಞಾನದ ಹಬ್ ಮಾತ್ರವಲ್ಲದೆ ಸಂಶೋಧನೆ ಮತ್ತು ಸ್ಟಾರ್ಟ್‌ಅಪ್‌ಗಳ ಜಾಗತಿಕ ಕೇಂದ್ರವಾಗಿದೆ. ಹೀಗಾಗಿ ಭಾರತದಲ್ಲಿ ಉದ್ಯಮ ವಿಸ್ತರಿಸಲು ಬಯಸುವ ಝೆಕ್ ಕಂಪನಿಗಳಿಗೆ ಕರ್ನಾಟಕವು ಅತ್ಯುತ್ತಮ ವೇದಿಕೆಯಾಗಲಿದೆ. ಈ ಬಾಂಧವ್ಯವು ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ, ಉಭಯ ದೇಶಗಳ ತಾಂತ್ರಿಕ ವಿಶ್ವವಿದ್ಯಾಲಯಗಳು ಮತ್ತು ಕೈಗಾರಿಕೆಗಳ ನಡುವೆ ಶೈಕ್ಷಣಿಕ ಒಪ್ಪಂದ ಹಾಗೂ ಕೌಶಲ್ಯ ಅಭಿವೃದ್ಧಿಗೂ ವಿಸ್ತರಿಸಬೇಕು. ಸ್ಕೋಡಾ ಮತ್ತು ಬಾಟಾ ಕಂಪನಿಗಳ ಮಾದರಿಯಲ್ಲಿ ರೈಲ್ವೆ ಬಿಡಿಭಾಗಗಳ ಉತ್ಪಾದನೆಯಲ್ಲೂ ಸ್ಥಳೀಯ ಸಂಸ್ಥೆಗಳೊಂದಿಗೆ ಜಂಟಿ ಪಾಲುದಾರಿಕೆಯನ್ನು ಅನ್ವೇಷಿಸುವಂತೆ ಸಿಎಂ ಮನವಿ ಮಾಡಿದರು.

 

 


Share this with Friends

Related Post