ಬೆಂಗಳೂರು: ರಾಜ್ಯದ ವಿದ್ಯಾರ್ಥಿ ಸಮೂಹಕ್ಕೆ ಕರ್ನಾಟಕ ಸರ್ಕಾರವು ಮಹತ್ತರ ಕೊಡುಗೆಯೊಂದನ್ನು ನೀಡಿದೆ. ಜೂನ್ 3, 2026 ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯದ ಅನ್ವಯ, ರಾಜ್ಯದ ಶಾಲಾ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ವಿಸ್ತರಿಸಿ ಸಾರಿಗೆ ಇಲಾಖೆಯು ಜೂನ್ 4, 2026 ರಂದು ಅಧಿಕೃತವಾಗಿ ಆದೇಶ ಹೊರಡಿಸಿದೆ.
ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್. ಅವರ ಹೆಸರಿನಲ್ಲಿ ಈ ಆದೇಶ ಪತ್ರ ಬಿಡುಗಡೆಯಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ.
ನಾಲ್ಕೂ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಉಚಿತ ಪ್ರಯಾಣ:
ಸರ್ಕಾರದ ಈ ಹೊಸ ಆದೇಶದ ಪ್ರಕಾರ, ರಾಜ್ಯದ ನಾಲ್ಕು ಪ್ರಮುಖ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC)
ತಾತ್ವಿಕ ಅನುಮೋದನೆ ಮುದ್ರೆ:
ಸಚಿವ ಸಂಪುಟದ ಪ್ರಕರಣ ಸಂಖ್ಯೆ: ಸಿ.310/2026 ರ ಅನ್ವಯ ಈ ಯೋಜನೆಗೆ ತಾತ್ವಿಕ ಅನುಮೋದನೆ ದೊರೆತಿದ್ದು, ರಾಜ್ಯಪಾಲರ ಆದೇಶದ ಮೇರೆಗೆ ಇದನ್ನು ಜಾರಿಗೊಳಿಸಲಾಗಿದೆ. ಉಚಿತ ಬಸ್ ಪಾಸ್ ಯೋಜನೆಯ ಸಂಪೂರ್ಣ ಅನುಷ್ಠಾನ, ಉಚಿತ ಪ್ರಯಾಣದ ನಿಖರ ವ್ಯಾಪ್ತಿ ಹಾಗೂ ಅದಕ್ಕೆ ಸಂಬಂಧಿಸಿದ ಸವಿಸ್ತಾರವಾದ ಷರತ್ತು ಮತ್ತು ನಿಬಂಧನೆಗಳ ಅಧಿಕೃತ ಮಾರ್ಗಸೂಚಿಯನ್ನು ಸರ್ಕಾರವು ಶೀಘ್ರದಲ್ಲೇ ಪ್ರತ್ಯೇಕವಾಗಿ ಪ್ರಕಟಿಸಲಿದೆ.

