Wed. Aug 26th, 2026

ಕಸ್ತೂರಿ ರಂಗನ್ ವರದಿ ವಿರುದ್ಧ ಸರ್ಕಾರಿ ನಿಲುವು ಸ್ಪಷ್ಟ: ಮಲೆನಾಡಿನ ರೈತರು ಆತಂಕ ಪಡುವ ಅಗತ್ಯವಿಲ್ಲ

Share this with Friends

ಬೆಂಗಳೂರು:ಪಶ್ಚಿಮ ಘಟ್ಟಗಳ ರಕ್ಷಣೆ ಹೆಸರಿನಲ್ಲಿ ಕಸ್ತೂರಿ ರಂಗನ್ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ 7ನೇ ಬಾರಿಗೆ ಕರಡು ಅಧಿಸೂಚನೆ ಪ್ರಕಟಿಸಿರುವುದಕ್ಕೆ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ವರದಿಯನ್ನು ಈಗಾಗಲೇ ಕರ್ನಾಟಕ ವಿಧಾನಸಭೆಯು ಅಧಿಕೃತವಾಗಿ ತಿರಸ್ಕರಿಸಿರುವುದರಿಂದ, ಮಲೆನಾಡು ಭಾಗದ ಜನವಸತಿ ಮತ್ತು ರೈತಾಪಿ ವರ್ಗ ಯಾವುದೇ ಕಾರಣಕ್ಕೂ ಗಾಬರಿಗೊಳ್ಳಬೇಕಾಗಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಅವರು ಇಂದು ಬೆಂಗಳೂರಿನ ಗೃಹ ಕಚೇರಿಯಲ್ಲಿ ಕಸ್ತೂರಿ ರಂಗನ್ ವರದಿ ವಿಚಾರವಾಗಿ ಮಾಧ್ಯಮ ಹೇಳಿಕೆ ಬಿಡಿಗಡೆ ಮಾಡಿದ್ದು, ಕರ್ನಾಟಕ ಸರ್ಕಾರವು ಈ ವರದಿಯ ಅನುಷ್ಠಾನ ಸಾಧ್ಯವಿಲ್ಲ ಎಂದು ಕೇಂದ್ರಕ್ಕೆ ಲಿಖಿತವಾಗಿ ತಿಳಿಸಿದ್ದರೂ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯವನ್ನು (ESA) ಗುರುತಿಸಿ ಮತ್ತೆ ಹೊಸ ಕರಡು ಹೊರಡಿಸಿರುವುದು ಸರಿಯಲ್ಲ. ಈ ಕ್ರಮವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆಯೇ ಅರಣ್ಯ ಸಚಿವರಾದ ರಾಮಲಿಂಗರೆಡ್ಡಿ ಅವರು ಸದನದಲ್ಲಿ ಸರ್ಕಾರದ ದೃಢ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎಂಬುದನ್ನು ನೆನಪಿಸಿದರು.

ರೈತರ ಬದುಕಿಗೆ ಆತಂಕ ತಂದ ಕರಡು

ಕೇಂದ್ರದ ಹೊಸ ಅಧಿಸೂಚನೆಯ ಪ್ರಕಾರ, ಕರ್ನಾಟಕದ ಒಟ್ಟು 1,576 ಹಳ್ಳಿಗಳ ವ್ಯಾಪ್ತಿಯ 20,668 ಚದರ ಕಿಲೋಮೀಟರ್ ಪ್ರದೇಶವನ್ನು ಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 484 ಹಳ್ಳಿಗಳು ಒಳಪಡುತ್ತವೆ. ಇವುಗಳಲ್ಲಿ ಕೃಷಿ ಭೂಮಿ ಹಾಗೂ ಜನರ ವಾಸಸ್ಥಳಗಳು ಸೇರಿರುವುದರಿಂದ ಮಲೆನಾಡಿನ ರೈತರಲ್ಲಿ ಆತಂಕ ಮೂಡುವುದು ಸಹಜ. ಆದರೆ, ರಾಜ್ಯ ಸರ್ಕಾರ ಈ ಕರಡು ಅಧಿಸೂಚನೆಯನ್ನು ಕಡಾಖಂಡಿತವಾಗಿ ವಿರೋಧಿಸಲಿದ್ದು, ಯಾವುದೇ ಜಾರಿಗೆ ಮುದ್ರೆ ಒತ್ತುವುದಿಲ್ಲ ಎಂದು ಧೈರ್ಯ ತುಂಬಿದರು.

ರೈತರ ಬೆನ್ನಿಗೆ ನಿಂತ ಸರ್ಕಾರ

ರಾಜ್ಯ ಸರ್ಕಾರವು ಯಾವಾಗಲೂ ರೈತರ ಹಿತರಕ್ಷಣೆಗೆ ಬದ್ಧವಾಗಿದೆ. ಮಲೆನಾಡಿನ ಜನರ ಬದುಕಿಗೆ ತೊಂದರೆಯಾಗುವ ಯಾವುದೇ ನಿರ್ಧಾರಕ್ಕೆ ಇಲ್ಲಿ ಅವಕಾಶವಿಲ್ಲ. ಇದೇ ವಿಷಯವಾಗಿ ಹಿರಿಯ ನಾಯಕರಾದ ಆರ್.ವಿ. ದೇಶಪಾಂಡೆ, ಶಾಸಕರುಗಳಾದ ಭೀಮಣ್ಣ ಟಿ. ನಾಯಕ್, ಟಿ.ಡಿ. ರಾಜೇಗೌಡ, ಎಚ್.ಡಿ. ತಮ್ಮಯ್ಯ ಮತ್ತು ಎ.ಎಸ್. ಪೊನ್ನಣ್ಣ ಅವರು ಶಾಸನಸಭೆಯ ಒಳಗೂ ಹೊರಗೂ ಮಲೆನಾಡಿಗರ ಪರವಾಗಿ ಧ್ವನಿ ಎತ್ತಿದ್ದಾರೆ. ಕೇಂದ್ರದ ಈ ಏಕಪಕ್ಷೀಯ ಕರಡು ಅಧಿಸೂಚನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡುವುದಿಲ್ಲ ಎಂದು ಪುನರುಚ್ಚರಿಸಲಾಗಿದೆ ಎಂದರು.

ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ವಿಪಕ್ಷಗಳ ರಾಜಕಾರಣ ಖಂಡನೀಯ: 

ಕಸ್ತೂರಿ ರಂಗನ್ ಸಮಿತಿ ವರದಿಯ ಜಾರಿ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸುವ ಬದಲು, ವಿರೋಧ ಪಕ್ಷದ ನಾಯಕರು ಮಲೆನಾಡಿನ ಜನರಲ್ಲಿ ಇಲ್ಲದ ಆತಂಕ ಮೂಡಿಸುತ್ತಾ ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಪಶ್ಚಿಮ ಘಟ್ಟಗಳ ರಕ್ಷಣೆಯಂತಹ ಅತ್ಯಂತ ಸೂಕ್ಷ್ಮ ಹಾಗೂ ಗಂಭೀರ ವಿಷಯದ ಕುರಿತು ಅರ್ಥಪೂರ್ಣ ಚರ್ಚೆ ನಡೆಸುವ ಬದಲು, ವಿಪಕ್ಷಗಳು ಕೇವಲ ಗದ್ದಲ ಎಬ್ಬಿಸಿ ಕಲಾಪಕ್ಕೆ ಅಡ್ಡಿಪಡಿಸಿವೆ. ಈ ನಡವಳಿಕೆಯಿಂದ ಅವರಿಗೆ ಸಾರ್ವಜನಿಕರ ಅಥವಾ ರೈತರ ಸಮಸ್ಯೆಗಳ ಬಗ್ಗೆ ಯಾವುದೇ ನೈಜ ಕಾಳಜಿ ಇಲ್ಲ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್ ಜೊತೆ ಸುದೀರ್ಘ ಚರ್ಚೆ

“ಕೇಂದ್ರದ ಈ ಹೊಸ ಕರಡು ಅಧಿಸೂಚನೆ ಹೊರಬಿದ್ದ ತಕ್ಷಣವೇ ನಾನು ವೈಯಕ್ತಿಕವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದೇನೆ. ಈ ಸಂದರ್ಭದಲ್ಲಿ ಸಿಎಂ ಅವರು ಕರಡು ಅಧಿಸೂಚನೆಯನ್ನು ಕಡಾಖಂಡಿತವಾಗಿ ವಿರೋಧಿಸುವುದಾಗಿ ಭರವಸೆ ನೀಡಿದ್ದಾರೆ. ಮಲೆನಾಡು ಭಾಗದ ರೈತರ ಹಿತ ಕಾಯಲು ಸರ್ಕಾರ ಸಂಪೂರ್ಣ ಬದ್ಧವಾಗಿದ್ದು, ಜನಸಾಮಾನ್ಯರ ಪರವಾಗಿ ಕಠಿಣ ನಿರ್ಧಾರ ಕೈಗೊಳ್ಳಲಿದೆ” ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಬಂಗಾರಪ್ಪನವರ ಹಾದಿಯಲ್ಲೇ ನಮ್ಮ ಪಯಣ

ತಮ್ಮ ತಂದೆಯವರಾದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಜನಪರ ಆಡಳಿತವನ್ನು ಸ್ಮರಿಸಿದ ಸಚಿವರು, “ನಮ್ಮ ತಂದೆ ಬಂಗಾರಪ್ಪನವರು ಸದಾ ಕಾಲ ರೈತರು, ಬಡವರು ಮತ್ತು ಶ್ರಮಿಕರ ಹಿತಕ್ಕಾಗಿ ಶ್ರಮಿಸಿದವರು. ಅವರ ಅದೇ ಜನಪರ ಆಶಯಗಳು ಹಾಗೂ ತತ್ವಗಳ ಮಾರ್ಗದಲ್ಲೇ ನಾನು ಮುನ್ನಡೆಯುತ್ತಿದ್ದೇನೆ. ಮಲೆನಾಡಿನ ರೈತ ಸಮುದಾಯಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ನಮ್ಮ ಸರ್ಕಾರ ಬಿಡುವುದಿಲ್ಲ. ಹೀಗಾಗಿ ಯಾರು ಕೂಡ ಗೊಂದಲದ ಹೇಳಿಕೆಗಳಿಗೆ ಕಿವಿಗೊಟ್ಟು ಆತಂಕಕ್ಕೆ ಒಳಗಾಗಬಾರದು” ಎಂದು ಮಲೆನಾಡಿನ ಜನತೆಯಲ್ಲಿ ಮನವಿ ಮಾಡಿದ್ದಾರೆ.

 

 


Share this with Friends

Related Post