ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಕಸರತ್ತು ಮುಗಿದ ಬೆನ್ನಲ್ಲೇ ಆಡಳಿತಾರೂಢ ಪಕ್ಷದಲ್ಲಿ ಅಸಮಾಧಾನದ ಹೊಗೆ ಜೋರಾಗಿ ಆಡಲಾರಂಭಿಸಿದೆ. ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಬೆಂಗಳೂರಿನ ಪ್ರಭಾವಿ ಮುಖಂಡರು ಹಾಗೂ ಶಾಸಕರುಗಳಾದ ಎಂ. ಕೃಷ್ಣಪ್ಪ (ವಿಜಯನಗರ) ಮತ್ತು ಪ್ರಿಯಾಕೃಷ್ಣ (ಗೋವಿಂದರಾಜನಗರ) ಅವರುಗಳು ಪಕ್ಷದ ಅಧಿಕೃತ ಚಟುವಟಿಕೆಗಳಿಂದ ಸಂಪೂರ್ಣ ಅಂತರ ಕಾಯ್ದುಕೊಳ್ಳುತ್ತಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬುಧವಾರ ಬೆಂಗಳೂರು ನಗರದ ಶಾಸಕರು ಹಾಗೂ ಸಚಿವರ ಮಹತ್ವದ ಸಭೆಯನ್ನು ಕರೆಯಲಾಗಿತ್ತು. ಆದರೆ, ಈ ಪ್ರಮುಖ ಸಭೆಗೆ ಶಾಸಕರಾದ ಎಂ. ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಗೈರಾಗುವ ಮೂಲಕ ತಮ್ಮ ತೀವ್ರ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ.
ಡಿಕೆಶಿಗೆ ಮುಂಚಿತವಾಗಿಯೇ ಸಂದೇಶ ರವಾನೆ
ಮೂಲಗಳ ಪ್ರಕಾರ, ತಾವು ಸಭೆಗೆ ಹಾಜರಾಗುವುದಿಲ್ಲ ಎಂಬ ವಿಷಯವನ್ನು ಶಾಸಕರು ಮುಂಚಿತವಾಗಿಯೇ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕೃತವಾಗಿ ರವಾನಿಸಿದ್ದಾರೆ ಎನ್ನಲಾಗಿದೆ. ವೈಯಕ್ತಿಕ ಕಾರಣಗಳನ್ನು ಮುನ್ನೆಲೆಗೆ ತಂದು ಸಭೆಯಿಂದ ದೂರ ಉಳಿದಿದ್ದರೂ, ಇದರ ಹಿಂದೆ ಸಚಿವ ಸ್ಥಾನ ಸಿಗದೇ ಇರುವುದೇ ಮುಖ್ಯ ಕಾರಣ ಎಂಬುದು ರಾಜಕೀಯ ವಲಯದಲ್ಲಿ ಬಹಿರಂಗ ಸತ್ಯವಾಗಿದೆ.
ಸರಣಿ ಗೈರುಹಾಜರಿ: ಹೈಕಮಾಂಡ್ಗೆ ತಲೆನೋವು
ಈ ಇಬ್ಬರು ನಾಯಕರ ಅಸಮಾಧಾನ ಕೇವಲ ಇಂದಿನ ಸಭೆಗೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚೆಗೆ ನಡೆದ ರಾಜ್ಯ ವಿಧಾನಮಂಡಲ ಅಧಿವೇಶನ ಹಾಗೂ ಅತ್ಯಂತ ಮಹತ್ವದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಗೂ ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣ ಗೈರಾಗಿದ್ದರು. ಸರಣಿ ಸಭೆಗಳಿಗೆ ಗೈರಾಗುವ ಮೂಲಕ ತಮಗೆ ಆಗಿರುವ ರಾಜಕೀಯ ಅನ್ಯಾಯದ ವಿರುದ್ಧ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವಕ್ಕೆ ನೇರವಾಗಿಯೇ ಸಂದೇಶ ರವಾನಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬೆಂಗಳೂರು ನಗರ ಭಾಗದಲ್ಲಿ ಭದ್ರ ನೆಲೆ ಹೊಂದಿರುವ ಈ ತಂದೆ-ಮಗನ ಜೋಡಿಯ ಅಸಮಾಧಾನವು ಮುಂಬರುವ ಬಿಬಿಎಂಪಿ ಹಾಗೂ ಲೋಕಸಭೆ ಚುನಾವಣೆಗಳ ದೃಷ್ಟಿಯಿಂದ ಪಕ್ಷಕ್ಕೆ ಹಿನ್ನಡೆಯಾಗಲಿದೆಯೇ ಎಂಬ ಆತಂಕ ಸದ್ಯ ಕಾಂಗ್ರೆಸ್ ವಲಯದಲ್ಲಿ ಮೂಡಿದೆ. ನಾಯಕರ ಈ ಸರಣಿ ಗೈರುಹಾಜರಿ ಮತ್ತು ಅಸಮಾಧಾನವನ್ನು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಗೆ ತಣ್ಣಗಾಗಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

