ನವದೆಹಲಿ:ಕರ್ನಾಟಕದಲ್ಲಿ ರೈತರಿಂದ ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ಖರೀದಿಸಲಾದ ಧಾನ್ಯಗಳ ಬಾಕಿ ಮರುಪಾವತಿ ಮೊತ್ತವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಅವರು ಕೇಂದ್ರ ಸರ್ಕಾರಕ್ಕೆ ದೆಹಲಿಯಲ್ಲಿ ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು ಹಾಗೂ ಆಹಾರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿದ ಅವರು, ರಾಜ್ಯದ ಆರ್ಥಿಕ ಹಕ್ಕುಗಳ ಕುರಿತು ವಿಸ್ತೃತ ಚರ್ಚೆ ನಡೆಸಿದರು.
ಸಭೆಯಲ್ಲಿ ರಾಜ್ಯದ ಧಾನ್ಯ ಖರೀದಿಯ ಅಂಕಿ-ಅಂಶಗಳನ್ನು ಮಂಡಿಸಿದ ಸಚಿವ ಕೆ.ಹೆಚ್. ಮುನಿಯಪ್ಪ, ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಒಟ್ಟು 5.69 ಲಕ್ಷ ಮೆಟ್ರಿಕ್ ಟನ್ ರಾಗಿ, 2.21 ಲಕ್ಷ ಮೆಟ್ರಿಕ್ ಟನ್ ಜೋಳ ಹಾಗೂ 0.0567 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ರೈತರಿಂದ ನೇರವಾಗಿ ಖರೀದಿಸಿದೆ. ಇದರ ಒಟ್ಟು ಮೌಲ್ಯ ₹4,422.17 ಕೋಟಿಗಳಾಗಿದ್ದು, ಕೇಂದ್ರ ಸರ್ಕಾರವು ಇದುವರೆಗೆ ಕೇವಲ ₹190.10 ಕೋಟಿಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಹೀಗಾಗಿ ಉಳಿದಿರುವ ದೊಡ್ಡ ಮೊತ್ತವಾದ ₹4,232.07 ಕೋಟಿಯನ್ನು ತಕ್ಷಣವೇ ಹಸ್ತಾಂತರಿಸಬೇಕು ಎಂದು ಕೋರಿದರು. ಇದರೊಂದಿಗೆ ಕಳೆದ 2009-10 ರಿಂದ 2024-25ರವರೆಗಿನ ಹಳೆಯ ಅವಧಿಯ ₹1,902.58 ಕೋಟಿ ಎಂಎಸ್‌ಪಿ ಬಾಕಿ ಹಾಗೂ ₹375.99 ಕೋಟಿ ತಾತ್ಕಾಲಿಕ ಸಬ್ಸಿಡಿ ಮೊತ್ತವನ್ನು ಮಂಜೂರು ಮಾಡುವಂತೆ ಒತ್ತಾಯಿಸಿದರು.
ಆದ್ಯತೆಯ ಮೇರೆಗೆ ಪರಿಶೀಲನೆ ನಡೆಸಲು ಜೋಶಿ ಭರವಸೆ:
ರಾಜ್ಯ ಸರ್ಕಾರದ ಬೇಡಿಕೆಗಳಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ₹1,902.58 ಕೋಟಿ ಹಳೆಯ ಬಾಕಿ ಮರುಪಾವತಿ ಪ್ರಕರಣವನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ, ಪ್ರಸಕ್ತ ಸಾಲಿನ ಮರುಪಾವತಿ ಹಕ್ಕುಪತ್ರಗಳು ರಾಜ್ಯದಿಂದ ಸಲ್ಲಿಕೆಯಾದ ತಕ್ಷಣವೇ ನಿಯಮಾನುಸಾರ ಹಣ ಬಿಡುಗಡೆ ಮಾಡಲಾಗುವುದು ಎಂದು ಖಾತರಿಪಡಿಸಿದರು.
ಕೇಂದ್ರ ಸರ್ಕಾರದ ಈ ಸಕಾರಾತ್ಮಕ ನಿರ್ಧಾರ ಹಾಗೂ ಪ್ರಸಕ್ತ ಸಾಲಿನಲ್ಲಿ ಆರಂಭಿಕವಾಗಿ ₹190.10 ಕೋಟಿ ಬಿಡುಗಡೆ ಮಾಡಿರುವುದಕ್ಕೆ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಧನ್ಯವಾದಗಳನ್ನು ಅರ್ಪಿಸಿದರು. ಬಾಕಿ ಇರುವ ಎಲ್ಲ ಅನುದಾನಗಳು ಶೀಘ್ರದಲ್ಲೇ ರಾಜ್ಯದ ಕೈಸೇರಲಿದ್ದು, ಇದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ಬೆಂಬಲ ಬೆಲೆಯ ಹಣವನ್ನು ಸಕಾಲದಲ್ಲಿ ಪಾವತಿ ಮಾಡಲು ಮತ್ತು ಖರೀದಿ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಲು ಅನುಕೂಲವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

