ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ, ಸಚಿವ ಸತೀಶ್ ಜಾರಕಿಹೊಳಿ ಈ ಕುರಿತು ಮಹತ್ವದ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಭೆಗಳಲ್ಲಿ ಹಿರಿಯ ನಾಯಕರು ಬಂದಾಗ ಗೌರವ ಸೂಚಕವಾಗಿ ಸ್ವಲ್ಪ ದೂರ ಕುಳಿತುಕೊಳ್ಳುವುದು ನಮ್ಮ ವೈಯಕ್ತಿಕ ಶಿಸ್ತು ಮತ್ತು ವಾಡಿಕೆಯಾಗಿದೆ. ಇದು ಇತ್ತೀಚಿನ ದೃಶ್ಯವಲ್ಲ, ಹತ್ತು ವರ್ಷಗಳ ಹಿಂದಿನ ವಿಡಿಯೋಗಳಲ್ಲೂ ಇಂತಹದ್ದೇ ಶೈಲಿ ಇತ್ತು. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ವದಂತಿಗಳಿಗೆ ಅವರು ತೆರೆ ಎಳೆದಿದ್ದಾರೆ.
ಸಂಪುಟ ವಿಸ್ತರಣೆಯಾದ್ರೆ ಸರ್ಕಾರದ ಬುಡ ಎರಡೂವರೆ ದಿನ ಅಲ್ಲಾಡುತ್ತೆ:
ರಾಜ್ಯ ರಾಜಕೀಯದಲ್ಲಿ ಬಹುಕಾಲದಿಂದ ಚರ್ಚೆಯಲ್ಲಿರುವ ಸಚಿವ ಸಂಪುಟ ವಿಸ್ತರಣೆಯ ಕುರಿತು ಸಚಿವ ಸತೀಶ್ ಜಾರಕಿಹೊಳಿ ಮಾರ್ಮಿಕ ಹೇಳಿಕೆ ನೀಡಿದ್ದಾರೆ. “ಒಂದು ವೇಳೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಜಾರಿಗೆ ಬಂದರೆ, ರಾಜಕೀಯ ಚಟುವಟಿಕೆಗಳು ತೀವ್ರಗೊಂಡು ಸರ್ಕಾರದ ಬುಡ ಎರಡು ಮೂರು ದಿನಗಳ ಕಾಲ ಅಲ್ಲಾಡುವುದು ಸಹಜ” ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.ಸಂಪುಟ ವಿಸ್ತರಣೆಯಾಗುವವರೆಗೂ ಆಕಾಂಕ್ಷಿಗಳಲ್ಲಿ ಕುತೂಹಲ ಮತ್ತು ಒತ್ತಡ ಇರುವುದು ಸಹಜ. ಹೊಸ ಸಚಿವರ ಸೇರ್ಪಡೆಯಾದ ತಕ್ಷಣ ಎರಡು ಮೂರು ದಿನಗಳ ಕಾಲ ರಾಜಕೀಯ ವಲಯದಲ್ಲಿ ಅಸಮಾಧಾನ, ಸರಣಿ ಸಭೆಗಳು ಹಾಗೂ ಗದ್ದಲಗಳು ಸೃಷ್ಟಿಯಾಗುತ್ತವೆ. ಆದರೆ, ಆ ಬಿರುಗಾಳಿ ಕೇವಲ ಎರಡೂವರೆ ದಿನ ಮಾತ್ರ ಇರಲಿದ್ದು, ಆ ಬಳಿಕ ಪರಿಸ್ಥಿತಿ ತಾನಾಗಿಯೇ ಸಹಜ ಸ್ಥಿತಿಗೆ ಮರಳುತ್ತದೆ ಎಂದು ವಿಶ್ಲೇಷಿಸಿದರು.ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡುವುದು ಅಥವಾ ಹೊಸಬರಿಗೆ ಅವಕಾಶ ನೀಡುವುದು ಸಂಪೂರ್ಣವಾಗಿ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹೈಕಮಾಂಡ್ ನಾಯಕರ ವಿವೇಚನೆಗೆ ಬಿಟ್ಟಿದ್ದಾಗಿದೆ ಎಂದು ಸ್ಪಷ್ಟಪಡಿಸಿದರು
ಧರ್ಮ ರಾಜಕಾರಣ ಬಿಟ್ಟು ಜನರ ಸಮಸ್ಯೆಗೆ ಆದ್ಯತೆ ನೀಡಿ:
ಮಧ್ಯಪ್ರದೇಶದ ವಕ್ಫ್ ಮಂಡಳಿಗೆ ಹಿಂದೂ ಸದಸ್ಯರನ್ನು ನೇಮಕ ಮಾಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಅದು ಆ ರಾಜ್ಯಕ್ಕೆ ಸಂಬಂಧಿಸಿದ ನಿರ್ಧಾರ, ಇದಕ್ಕೂ ಕರ್ನಾಟಕಕ್ಕೂ ಯಾವುದೇ ಲಿಂಕ್ ಇಲ್ಲ” ಎಂದರು. ಸರ್ಕಾರಕ್ಕೆ ಮಾಡಲು ಜನಪರ ಕೆಲಸಗಳು ಸಾಕಷ್ಟಿವೆ. ಕೇವಲ ಧರ್ಮ, ದೇವಸ್ಥಾನ ಹಾಗೂ ಭಾರತ-ಪಾಕಿಸ್ತಾನದ ವಿಷಯಗಳನ್ನೇ ಇಟ್ಟುಕೊಂಡು ರಾಜಕೀಯ ಮಾಡುವುದನ್ನು ಬಿಟ್ಟು ಜನರ ನೈಜ ಸಮಸ್ಯೆಗಳಿಗೆ ಆದ್ಯತೆ ನೀಡಬೇಕಿದೆ ಎಂದು ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದರು.
ಬೆಳಗಾವಿ ಆರ್‌ಎಸ್‌ಎಸ್ ಬೈಠಕ್ ಹಾಗೂ ಜಾತಿಗಣತಿ:
ಬೆಳಗಾವಿಯಲ್ಲಿ ಆಯೋಜನೆಯಾಗಿರುವ ಆರ್‌ಎಸ್‌ಎಸ್ ಸಭೆಯ ಕುರಿತು ಮಾತನಾಡಿದ ಸಚಿವರು, ಸಂಘಟನೆಗೆ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಭಾಗಗಳಿಗೆ ಬೆಳಗಾವಿಯೇ ಪ್ರಮುಖ ಕೇಂದ್ರವಾಗಿದೆ. ಪ್ರಸ್ತುತ ಅಲ್ಲಿ ಯಾವುದೇ ಪಥಸಂಚಲನ ನಡೆಯುತ್ತಿಲ್ಲ, ಕೇವಲ ಆಂತರಿಕ ಬೈಠಕ್ (ಸಭೆ) ಮಾತ್ರ ನಡೆಯುತ್ತಿರುವುದರಿಂದ ಈ ಬಗ್ಗೆ ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದರು. ಇನ್ನು ಜಾತಿಗಣತಿ ವರದಿಯು ಸಚಿವ ಸಂಪುಟ (ಕ್ಯಾಬಿನೆಟ್) ಸಭೆಯ ಮುಂದೆ ಬಂದ ಬಳಿಕ ಅದನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.

