ತುಮಕೂರು:ರಾಜ್ಯದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿ ವಿಶೇಷ ಪರಿಶೀಲನಾ ಪ್ರಕ್ರಿಯೆಯು (ಎಸ್‌ಐಆರ್) ಸಂಪೂರ್ಣವಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿದ್ದು, ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಈ ಇಡೀ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಯಾವುದೇ ರೀತಿಯ ನೇರ ಹಸ್ತಕ್ಷೇಪವಿಲ್ಲ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶೇಷ ತಪಾಸಣಾ ಕಾರ್ಯಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ಪ್ರತ್ಯೇಕ ಮಾರ್ಗಸೂಚಿ ಅಥವಾ ಸೂಚನೆಗಳನ್ನು ನೀಡಿಲ್ಲ. ಚುನಾವಣಾ ಆಯೋಗವು ಕೇಳಿದ ಹಿನ್ನೆಲೆಯಲ್ಲಿ ಅಗತ್ಯವಿರುವ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಮಾತ್ರ ಸರ್ಕಾರ ಒದಗಿಸಿದೆ. ನಿಯಮಾವಳಿಗಳ ಪ್ರಕಾರ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ತೆರಳಿ ನಿಗದಿತ ಫಾರಂಗಳನ್ನು ವಿತರಿಸಿ, ಮರಳಿ ಸಂಗ್ರಹಿಸಬೇಕು. ಅದನ್ನು ಬಿಟ್ಟು ಅಧಿಕಾರಿಗಳು ಒಂದೇ ಸ್ಥಳದಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದರೆ ಅದು ಅವರದ್ದೇ ತಪ್ಪಾಗುತ್ತದೆ. ಅಂತಹ ಲೋಪಗಳು ಕಂಡುಬಂದರೆ ಚುನಾವಣಾ ಆಯೋಗವೇ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಇಂತಹ ನಿಯಮಗಳ ಬಗ್ಗೆ ಮಾತನಾಡುವ ಮುನ್ನ ಬಿಜೆಪಿಯವರು ಬೇರೆ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಹೇಗೆ ನಡೆದಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಲಿ ಎಂದು ತಿರುಗೇಟು ನೀಡಿದರು.
ಫಾರಂಗಳಲ್ಲಿ ಶಾಸಕರ ಭಾವಚಿತ್ರ ವಿವಾದ:
ಕೆಲವು ಕ್ಷೇತ್ರಗಳಲ್ಲಿ ಸ್ಥಳೀಯ ಶಾಸಕರು ಚುನಾವಣಾ ಆಯೋಗದ ಅಧಿಕೃತ ಫಾರಂಗಳಲ್ಲಿ ತಮ್ಮ ಭಾವಚಿತ್ರಗಳನ್ನು ಅಂಟಿಸಿ ವಿತರಿಸುತ್ತಿದ್ದಾರೆ ಎಂಬ ದೂರುಗಳ ಕುರಿತು ಪ್ರತಿಕ್ರಿಯಿಸಿದ ಅವರು, ಇವೆಲ್ಲವನ್ನೂ ಸ್ಥಳೀಯ ಬಿಎಲ್‌ಒಗಳೇ ಸೂಕ್ಷ್ಮವಾಗಿ ಗಮನಿಸಬೇಕು. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದಿದ್ದರೆ ಅದರ ಸಂಪೂರ್ಣ ಉಸ್ತುವಾರಿಯನ್ನು ಎಲೆಕ್ಷನ್ ಕಮಿಷನ್ ನೋಡಿಕೊಳ್ಳುತ್ತದೆ. ಒಂದು ತಿಂಗಳ ಅವಧಿಯೊಳಗೆ ಈ ವಿಶೇಷ ತಪಾಸಣೆಯನ್ನು ಪೂರ್ಣಗೊಳಿಸಲು ಆಯೋಗವೇ ಕಾಲಮಿತಿ ನಿಗದಿಪಡಿಸಿದ್ದು, ಅದಕ್ಕೆ ಬೇಕಾದ ಆಡಳಿತಾತ್ಮಕ ಸಹಕಾರವನ್ನು ಮಾತ್ರ ಸರ್ಕಾರ ನೀಡುತ್ತಿದೆ ಎಂದರು.
ಮಸೀದಿ, ಶಾದಿ ಮಹಲ್‌ಗಳಲ್ಲಿ ಪ್ರಕ್ರಿಯೆ ವಿವಾದ:
ತುಮಕೂರಿನ ಕೆಲವು ಮಸೀದಿಗಳು ಹಾಗೂ ಶಾದಿ ಮಹಲ್‌ಗಳ ಆವರಣದಲ್ಲಿ ಎಸ್‌ಐಆರ್ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂಬ ಆರೋಪದ ಕುರಿತು ಮಾತನಾಡಿದ ಗೃಹ ಸಚಿವರು, ಮತದಾರರ ಪಟ್ಟಿ ಪರಿಷ್ಕರಣೆ ನಡೆಸುವ ಸ್ಥಳಗಳ ಆಯ್ಕೆ ಸಂಪೂರ್ಣವಾಗಿ ಬಿಎಲ್‌ಒಗಳ ಹೊಣೆಯಾಗಿರುತ್ತದೆ. ಇದರಲ್ಲಿ ನಿಯಮ ಉಲ್ಲಂಘನೆ ಆಗಿದ್ದರೆ ಚುನಾವಣಾ ಆಯೋಗವೇ ಸ್ಥಳ ಪರಿಶೀಲನೆ ನಡೆಸಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು.
ಶೀಘ್ರವಾಗಿ ಪಂಚಾಯಿತಿ ಚುನಾವಣೆ ನಡೆಸುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಲಬುರಗಿಯಲ್ಲಿ ಪ್ರಸ್ತಾಪಿಸಿದ್ದಾರೆ. ಮುಂದಿನ ದಿನದಲ್ಲಿ ದಿನಾಂಕವನ್ನು ನಿಗದಿಪಡಿಸಲಾಗುವುದು. ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಗಾಗಿ ₹900 ಕೋಟಿಗೂ ಹೆಚ್ಚು ಹಣವನ್ನು ಮೀಸಲಿಡಲಾಗಿದೆ. ಈಗಾಗಲೇ ಕಾಮಗಾರಿಗಾಗಿ ಒಂದಿಷ್ಟು ಹಣವನ್ನು ವ್ಯಯಿಸಲಾಗಿದೆ.. ಅದನ್ನು ಈಗ ನಿಲ್ಲಿಸಬೇಕು ಎಂದು ಹೇಳಿದರೆ ಅದು ಅಸಾಧ್ಯ. ಅದನ್ನು ಮುಂದುವರೆಸಲಾಗುವುದು ಎಂದರು.

